ADVERTISEMENT

ಸುಳ್ಳು ಸುದ್ದಿಗಳ ಅಬ್ಬರ; ಶಿಕ್ಷೆಗೆ ಬರ

ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 259 ಪ್ರಕರಣಗಳು ದಾಖಲು

ಸಿದ್ದು ಆರ್.ಜಿ.ಹಳ್ಳಿ
Published 14 ಮೇ 2025, 0:30 IST
Last Updated 14 ಮೇ 2025, 0:30 IST
   

ಮಂಡ್ಯ: ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದವರ ವಿರುದ್ಧ ರಾಜ್ಯದ ಪೊಲೀಸ್‌ ಠಾಣೆಗಳಲ್ಲಿ 259 ಪ್ರಕರಣಗಳು ದಾಖಲಾಗಿದ್ದು, 6 ಪ್ರಕರಣಗಳಲ್ಲಷ್ಟೇ ಶಿಕ್ಷೆಯಾಗಿದೆ.

ಅವುಗಳಲ್ಲಿ 75 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಸುಳ್ಳು ಸುದ್ದಿ ಪ್ರಸಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಯೂಟ್ಯೂಬ್‌ ಚಾನೆಲ್‌ಗಳನ್ನು ಇದುವರೆಗೆ ನಿಷೇಧಿಸಿಲ್ಲ ಎನ್ನುತ್ತವೆ ಗೃಹ ಇಲಾಖೆ ಮೂಲಗಳು. 

ಬೆಂಗಳೂರು ನಗರ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಉತ್ತರ ಕನ್ನಡ ಮತ್ತು ತುಮಕೂರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ADVERTISEMENT

ಹುಬ್ಬಳ್ಳಿ–ಧಾರವಾಡ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ, ಚಾಮರಾಜನಗರ, ಧಾರವಾಡ, ಬಾಗಲಕೋಟೆ, ಗದಗ ಜಿಲ್ಲೆಯಲ್ಲಿ ಮಾರ್ಚ್‌ ಅಂತ್ಯದವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಂಗಳೂರು ನಗರದಲ್ಲಿ 6, ಮಂಡ್ಯದಲ್ಲಿ 3, ಬೆಳಗಾವಿ, ಶಿವಮೊಗ್ಗ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ತಲಾ 2 ಪ್ರಕರಣಗಳು ದಾಖಲಾಗಿವೆ.

ಫ್ಯಾಕ್ಟ್‌ ಚೆಕ್‌ ಘಟಕ:

‘ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕದಿದ್ದರೆ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಸಾಮಾಜಿಕ ಮೌಲ್ಯಗಳು ಉಳಿಯುವುದು ಕಷ್ಟ. ಧಾರ್ಮಿಕ ಮತ್ತು ಸಾಮಾಜಿಕ ಘರ್ಷಣೆ ಹೆಚ್ಚಲು ಅವೇ ಕಾರಣ. ಹೀಗಾಗಿ ಸುಳ್ಳುಸುದ್ದಿ ಪತ್ತೆಗೆ ಮತ್ತು ಅದನ್ನು ಹರಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸ್‌ ಠಾಣೆಗಳಲ್ಲಿ ‘ಫ್ಯಾಕ್ಟ್‌ ಚೆಕ್‌ ಘಟಕ’ ಸ್ಥಾಪಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷ ಆದೇಶಿಸಿದ್ದರು. 

‘ಅನುಮಾನಕ್ಕೆ ಎಡೆ ಮಾಡಿಕೊಡುವ ಸುದ್ದಿಗಳ ಸತ್ಯಾಸತ್ಯತೆಯನ್ನು ‘ಕೆ.ಎಸ್‌.ಪಿ. ಫ್ಯಾಕ್ಟ್‌ಚೆಕ್‌’ ಮೂಲಕ ಪರಿಶೀಲಿಸಿ, ನೈಜ ಮಾಹಿತಿಯನ್ನು ಇಲಾಖೆಯ ಅಧಿಕೃತ ಜಾಲತಾಣದ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಧರ್ಮ, ಮತ, ಭಾಷೆ, ಪ್ರಾಂತ್ಯ, ವರ್ಣ ಇತ್ಯಾದಿ ಅಂಶಗಳನ್ನು ಬಳಸಿಕೊಂಡು ದ್ವೇಷಪ್ರೇರಿತ ಪೋಸ್ಟ್‌ ಮಾಡಿರುವುದು ಕಂಡುಬಂದರೆ ಕೂಡಲೇ ದೂರು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

‘ಲಾ ಎನ್‌ಫೋರ್ಸ್‌ಮೆಂಟ್‌ ಏಜೆನ್ಸಿ ರಿಕ್ವೆಸ್ಟ್‌ ಪೋರ್ಟಲ್‌ ಮೂಲಕ ಸಂಬಂಧಪಟ್ಟ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರಂಗಳಿಗೆ ನೋಟಿಸ್‌ ಮತ್ತು ಮನವಿಗಳ ಮೂಲಕ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಬಿಎನ್‌ಎಸ್‌ ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ, ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅವರು ತಿಳಿಸಿದರು.

ರಾಜ್ಯದ ಏಳು ಜಿಲ್ಲೆಯಲ್ಲಿ ಪ್ರಕರಣಗಳಿಲ್ಲ ‘ಕೆ.ಎಸ್‌.ಪಿ. ಫ್ಯಾಕ್ಟ್‌ಚೆಕ್‌’ ಮೂಲಕ ಪರಿಶೀಲನೆ
ಸುಳ್ಳು ಸುದ್ದಿ ಹರಡುವವರ ಮೇಲೆ ನಿಗಾ ಇಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿರುವ ಆರೋಪಿಯನ್ನು ಈಚೆಗೆ ಬಂಧಿಸಿದ್ದೇವೆ
ಮಲ್ಲಿಕಾರ್ಜುನ ಬಾಲದಂಡಿ ಎಸ್ಪಿ ಮಂಡ್ಯ
ಸುಳ್ಳು ಸುದ್ದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುತುವರ್ಜಿ ತೋರುತ್ತಿಲ್ಲ. ಪೊಲೀಸ್‌ನವರಿಗೆ ಜವಾಬ್ದಾರಿ ನೀಡಿ ಸರ್ಕಾರ ನಿದ್ರೆಗೆ ಜಾರಿದೆ
ಟಿ.ಎಲ್‌.ಕೃಷ್ಣೇಗೌಡ ಜಿಲ್ಲಾ ಕಾರ್ಯದರ್ಶಿ ಸಿಪಿಎಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.