ADVERTISEMENT

ಸುಗ್ರೀವಾಜ್ಞೆ ವಿರೋಧಿಸಿ ಇಂದು ರಾಜ್ಯದಾದ್ಯಂತ ಹೆದ್ದಾರಿ ತಡೆ

ರೈತ – ದಲಿತ – ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಕರೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 23:27 IST
Last Updated 24 ಸೆಪ್ಟೆಂಬರ್ 2020, 23:27 IST
ಕುರಬೂರು ಶಾಂತಕುಮಾರ್ ಹಾಗೂ ಕೋಡಿಹಳ್ಳಿ ಚಂದ್ರಶೇಖರ್‌
ಕುರಬೂರು ಶಾಂತಕುಮಾರ್ ಹಾಗೂ ಕೋಡಿಹಳ್ಳಿ ಚಂದ್ರಶೇಖರ್‌   

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ಹೊರಡಿಸಿದ ಸುಗ್ರೀವಾಜ್ಞೆಗಳು ಮತ್ತು ರೂಪಿಸಿರುವ ಮಸೂದೆಗಳು ರೈತರು ಮತ್ತು ಕಾರ್ಮಿಕರ ವಿರೋಧಿಯಾಗಿವೆ ಎಂದು ಆರೋಪಿಸಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯು ಶುಕ್ರವಾರ ರಾಜ್ಯದಾದ್ಯಂತ ಹೆದ್ದಾರಿಗಳಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಲಿದೆ.

‘ಸಮಿತಿಯ ನೇತೃತ್ವದಲ್ಲಿ 35ಕ್ಕೂ ಹೆಚ್ಚು ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ. ಮುಖ್ಯವಾಗಿ, ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ಸೇರಿ, ಸರ್ಕಾರಗಳ ಕಾರ್ಮಿಕ–ರೈತ ವಿರೋಧಿ ನೀತಿಗಳನ್ನು ಖಂಡಿಸಲಾಗುವುದು ಮತ್ತು ವಾಪಸ್‌ ತೆಗೆದುಕೊಳ್ಳಲು ಒತ್ತಾಯಿಸಲಾಗುವುದು’ ಎಂದು ಸಮಿತಿ ಹೇಳಿದೆ.

‘ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಎಲ್ಲ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿವೆ. ಸಂಘಟನೆಗಳಲ್ಲಿ ಯಾವುದೇ ಗೊಂದಲ ಇಲ್ಲ. ಬೆಂಗಳೂರಿನ ಹೊರವಲಯಗಳಾದ ನಾಯಂಡಹಳ್ಳಿ, ಗೊರಗುಂಟೆಪಾಳ್ಯ ಬಳಿಯ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರ ತಡೆಯಲಾಗುತ್ತದೆ. ಅಲ್ಲದೆ, ಆಯಾ ಜಿಲ್ಲಾ ಕೇಂದ್ರಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ತಡೆದು ಪ್ರತಿಭಟಿಸಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಹೇಳಿದರು.

ADVERTISEMENT

‘ಸ್ವಾತಂತ್ರ್ಯ ಉದ್ಯಾನದಲ್ಲಿ 21ರಿಂದ ಸತತವಾಗಿ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರದ ಪ್ರತಿನಿಧಿಗಳು ಬಂದು ಮಾತನಾಡಲಿಲ್ಲ. ಸಮಸ್ಯೆ ಆಲಿಸಲಿಲ್ಲ. ಇದು ರೈತರಿಗೆ ಮಾಡಿದ ಅವಮಾನ. 35 ಸಂಘಟನೆಗಳು ಮಾತ್ರವಲ್ಲದೆ, ನಾಡಿನ ಎಲ್ಲ ಸಂಘಟನೆಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

‘ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಮಾತ್ರ ನಮ್ಮ ಸಂಘ ಪಾಲ್ಗೊಳ್ಳುತ್ತದೆ. ನಮ್ಮ ಸಂಘದ ಸದಸ್ಯರು ಎಲ್ಲಿಯೂ ರಸ್ತೆಗಳಲ್ಲಿ ವಾಹನ ತಡೆದು ಪ್ರತಿಭಟನೆ ಮಾಡುವುದಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.