ADVERTISEMENT

ಅರಣ್ಯ ಇಲಾಖೆ ವಿರುದ್ಧ ಒಗ್ಗಟ್ಟಿನ ಹೋರಾಟ: ಮಾಜಿ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌

ರಮೇಶ್ ಕುಮಾರ್ ನೇತೃತ್ವದಲ್ಲಿ ರೈತ ಮುಖಂಡರ ಸಭೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 14:45 IST
Last Updated 11 ಜನವರಿ 2026, 14:45 IST
ಕೆ.ಆರ್‌. ರಮೇಶ್‌ ಕುಮಾರ್‌
ಕೆ.ಆರ್‌. ರಮೇಶ್‌ ಕುಮಾರ್‌    

ಬೆಂಗಳೂರು: ರೈತರಿಗೆ ಹಂಚಿಕೆಯಾಗಿರುವ ಭೂಮಿ ತಮ್ಮದೆಂದು ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸುತ್ತಿದ್ದು, ಅದರ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ಮಾಡಲು ಮಾಜಿ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರು ನಿರ್ಧರಿಸಿದ್ದಾರೆ.

ಶಾಸಕರ ಭವನದಲ್ಲಿ ಜ. 9ರಂದು ನಡೆದ ಸಭೆಯಲ್ಲಿ ರೈತ ಹೋರಾಟಗಾರರು, ಬುದ್ಧಿಜೀವಿಗಳು, ವಕೀಲರು ಭಾಗವಹಿಸಿದ್ದರು. ಇದೇ 18ರಂದು ಮತ್ತೊಮ್ಮೆ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚೆ ನಡೆಸಲು ತೀರ್ಮಾನಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ರಮೇಶ್ ಕುಮಾರ್, ‘ಭೂಮಿಯ ಒಡೆತನ ರಾಜ್ಯ ಸರ್ಕಾರಕ್ಕೆ ಸೇರಿದೆ. ಕಾಲಕಾಲಕ್ಕೆ ವಿವೇಚನಾ ದೃಷ್ಟಿಯಿಂದ ರೈತರಿಗೆ ಮತ್ತು ಇತರೆ ಅಭಿವೃದ್ದಿ ಕೆಲಸಗಳಿಗೆ ಭೂಮಿ ಹಂಚಿಕೆ ಮಾಡಿದಂತೆ, ಅರಣ್ಯ ಇಲಾಖೆಗೂ ಮಾಡಲಾಗಿದೆ. ಅರಣ್ಯ ಇಲಾಖೆಯು ತನಗೆ ಹಂಚಿಕೆಯಾದ ಭೂಮಿಗೆ ನೂರಾರು ವರ್ಷ ಕಾಲ ಏಕೆ ಮ್ಯುಟೇಶನ್ ಮಾಡಿಲ್ಲ’ ಎಂದು ಪ್ರಶ್ನಿಸಿದರು. 

ADVERTISEMENT

‘ಭೂಮಿ ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಿದ ಬಳಿಕ, ಅದರ ಸರ್ವೇ ನಂಬರ್‌, ವಿಸ್ತೀರ್ಣ, ಬೆಳೆ ಮುಂತಾದ ವಿವರಗಳಿಗಾಗಿ ಇಲಾಖೆಯು ಅರಣ್ಯ ಅಧಿಕಾರಿ ನೇಮಿಸಿ ಕ್ರಮ ತೆಗೆದುಕೊಳ್ಳಬೇಕು. ಆದರೆ, ಹಲವು ವರ್ಷ ಕಳೆದರೂ ಈ ಕೆಲಸ ಮಾಡಿಲ್ಲ. ಕಂದಾಯ ಮತ್ತು ಅರಣ್ಯ ಇಲಾಖೆಯು ಮೂಲ ನಕಾಶೆಗಳನ್ನು ಬದಿಗಿಟ್ಟು, ರೈತರನ್ನು ಒಕ್ಕಲೆಬ್ಬಿಸುವುದನ್ನು ಸಹಿಸುವುದಿಲ್ಲ’ ಎಂದು ಅವರು ಹೇಳಿದರು.

‘ಸ್ವಾತಂತ್ರ ಪೂರ್ವದಲ್ಲಿ ಮೈಸೂರು ಸರ್ಕಾರ ಅಧಿಸೂಚನೆ ಹೊರಡಿಸಿರುವ ಭೂಮಿ ತಮ್ಮದೆಂದು ಅರಣ್ಯ ಇಲಾಖೆಯವರು ಅತಿಕ್ರಮಣ ಮಾಡುತ್ತಿರುವುದರಿಂದ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 41,528 ಎಕರೆ ಭೂಮಿ ಸೇರಿದಂತೆ ಕೋಲಾರ ಜಿಲ್ಲೆ ಮತ್ತು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಲಕ್ಷಾಂತರ ಎಕರೆ ಭೂಮಿ ರೈತರ ಕೈ ತಪ್ಪಿದೆ’ ಎಂದೂ ರಮೇಶ್‌ ಕುಮಾರ್‌ ವಿವರಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ, ಹೈಕೋರ್ಟ್ ವಕೀಲ ಶಿವಪ್ರಸಾದ್, ಮುಳಬಾಗಿಲಿನ ಎಂ. ಗೋಪಾಲ್, ಶ್ರೀ ರಾಮ್, ಪಾಪೇಗೌಡ, ರೈತ ಸಂಘದ ಪಿ. ಆರ್. ಸೂರ್ಯನಾರಾಯಣ, ಟಿ.ಎಂ. ವೆಂಕಟೇಶ್, ಪಾಪಕೋಟೆ ನವೀನ್ ಕುಮಾರ್  ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.