ADVERTISEMENT

ಬತ್ತಿದ ನದಿಗೆ ರೈತರಿಂದ ನೀರು: ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸಲು ನೆರವು

ಸಿದ್ದು ಆರ್.ಜಿ.ಹಳ್ಳಿ
Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಹಾವೇರಿ ಜಿಲ್ಲೆಯ ವರದಾ ನದಿಗೆ ನೀರು ಹರಿಸುತ್ತಿರುವ ಕೂಡಲ ಗ್ರಾಮದ ರೈತ ಪುಟ್ಟಪ್ಪ ಸೊಪ್ಪಿನ
ಹಾವೇರಿ ಜಿಲ್ಲೆಯ ವರದಾ ನದಿಗೆ ನೀರು ಹರಿಸುತ್ತಿರುವ ಕೂಡಲ ಗ್ರಾಮದ ರೈತ ಪುಟ್ಟಪ್ಪ ಸೊಪ್ಪಿನ   

ಹಾವೇರಿ: ಬೇಸಿಗೆಯಲ್ಲಿ ಪ್ರಾಣಿ– ಪಕ್ಷಿಗಳ ನೀರಿನ ದಾಹ ತಣಿಸಲು ಜಿಲ್ಲೆಯ ರೈತರಾದ ಭುವನೇಶ್ವರ ಶಿಡ್ಲಾಪುರ ಮತ್ತು ಪುಟ್ಟಪ್ಪ ಸೊಪ್ಪಿನ ತಮ್ಮ ಹೊಲದ ಕೊಳವೆಬಾವಿಯ ನೀರನ್ನು ವರದಾ ನದಿಗೆ ಉಚಿತವಾಗಿ ಹರಿಸುತ್ತಿದ್ದಾರೆ.

ತಾಲ್ಲೂಕಿನ ಸಂಗೂರು ಗ್ರಾಮದ ಭುವನೇಶ್ವರ ಶಿಡ್ಲಾಪುರ ಅವರು ತಮ್ಮ ಜಮೀನಿನಲ್ಲಿ ಮಾರ್ಚ್‌ 5ರಂದು ಹೊಸ ಕೊಳವೆಬಾವಿ ಕೊರೆಸಿ, ಅದರಲ್ಲಿ ಸಿಕ್ಕ ನೀರನ್ನು ವರದಾ ನದಿಗೆ ಬಿಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜಿಲ್ಲೆಯ ‘ವರದಾ’ ನದಿ ಜೂನ್‌ನಿಂದ ಜನವರಿಯವರೆಗೆ ಮಾತ್ರ ಹರಿಯುತ್ತದೆ. ಮಳೆ ಕೊರತೆಯಿಂದ ನದಿಯ ಒಡಲು ಮೂರು ತಿಂಗಳಿನಿಂದ ಬರಿದಾಗಿದೆ. ಸಂಗೂರು ಗ್ರಾಮದಲ್ಲಿನ ಬ್ಯಾರೇಜ್ ಬಳಿಯೂ ನೀರು ಖಾಲಿಯಾಗಿದೆ. ಅದಕ್ಕೆ ಭುವನೇಶ್ವರ ಅವರು ಒಂದು ತಿಂಗಳಿನಿಂದ ನಿತ್ಯ 6 ಗಂಟೆ ನದಿಗೆ ನೀರು ಹರಿಸುತ್ತಾರೆ.

ADVERTISEMENT

‘ಹೊಳೆದಂಡೆಯಲ್ಲಿ ನನಗೆ 20 ಎಕರೆ ಜಮೀನಿದೆ. ಕಬ್ಬು, ಅಡಿಕೆ, ಮೆಕ್ಕೆಜೋಳ ಬೆಳೆಯಲು ಎರಡು ಕೊಳವೆಬಾವಿಗಳ ನೀರು ಬಳಸುತ್ತಿದ್ದೆ. ಬೇಸಿಗೆಯಲ್ಲಿ ನೀರು ಕಡಿಮೆ ಆಗಬಹುದೆಂದು ಹೊಸ ಕೊಳವೆಬಾವಿ ಕೊರೆಸಿದೆ. 5 ಇಂಚು ನೀರು ಸಿಕ್ಕಿತು. ಹೊಲಕ್ಕೆ ಬರುತ್ತಿದ್ದ ಕೃಷ್ಣಮೃಗ, ನವಿಲು, ಕೋತಿ, ನರಿ, ಪಕ್ಷಿಗಳ ಬಾಯಾರಿಕೆ ತಣಿಯಿತು. ಪಶು–ಪಕ್ಷಿಗಳ ನೀರಿನ ದಾಹ ತೀರಿಸಲು ವರದಾ ನದಿಗೆ ನೀರು ಹರಿಸುತ್ತಿರುವೆ’ ಎಂದು ಭುವನೇಶ್ವರ ಶಿಡ್ಲಾಪುರ ತಿಳಿಸಿದರು.  

12 ವರ್ಷಗಳಿಂದ ನೀರಿನ ಸೇವೆ: ಹಾನಗಲ್‌ ತಾಲ್ಲೂಕಿನ ಕೂಡಲ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಪುಟ್ಟಪ್ಪ ಸೊಪ್ಪಿನ 12 ವರ್ಷಗಳಿಂದ ಬೇಸಿಗೆ ವೇಳೆ ತಮ್ಮ ಕೊಳವೆಬಾವಿಯಿಂದ ವರದಾ ನದಿಗೆ ನೀರು ಹರಿಸುತ್ತಾರೆ.

‘2012ರ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಆಗ ಹೊಳೆದಂಡೆಯಲ್ಲಿನ ನಮ್ಮ ಹೊಲದ ಕೊಳವೆಬಾವಿಯಿಂದ ವರದಾ ನದಿಗೆ ನೀರು ಹರಿಸಿದೆ. ದನ ಕರು, ಪಶು–ಪಕ್ಷಿಗಳು ಬಾಯಾರಿಕೆ ನೀಗಿಸಿಕೊಳ್ಳಲು ನದಿ ಬಳಿ ಬರತೊಡಗಿದವು. ಆದ್ದರಿಂದ ನಾನು ಪ್ರತಿ ಬೇಸಿಗೆಯಲ್ಲೂ ನೀರು ಹರಿಸುತ್ತಿರುವೆ’ ಎಂದು ರೈತ ಪುಟ್ಟಪ್ಪ ಸೊಪ್ಪಿನ ತಿಳಿಸಿದರು. 

‘ವರದಾ ನದಿಯ ಗುಂಡಿಗಳಲ್ಲಿ ನೀರು ತುಂಬಿದ್ದರಿಂದ ಹೊಳೆ ದಂಡೆಯಲ್ಲಿರುವ ಗ್ರಾಮಸ್ಥರು ದನ ಕರುಗಳಿಗೆ ಕುಡಿಯಲು, ಮೈ ತೊಳೆಯಲು, ಬಟ್ಟೆ ಒಗೆಯಲು, ವಾಹನಗಳನ್ನು ತೊಳೆಯಲು ನೀರು ಬಳಸುತ್ತಿದ್ದಾರೆ’ ಎಂದರು.

ವರದಾ ನದಿಗೆ ನೀರು ಹರಿಸುತ್ತಿರುವ ಸಂಗೂರು ರೈತ ಭುವನೇಶ್ವರ ಶಿಡ್ಲಾಪುರ 
ಈಗ 6 ಗಂಟೆ ವರದಾ ನದಿಗೆ ನೀರು ಬಿಡುತ್ತಿರುವೆ. ನನ್ನ ಕೊಳವೆಬಾವಿಗೆ ‘ನಿರಂತರ ಜ್ಯೋತಿ’ ವಿದ್ಯುತ್‌ ಸಂಪರ್ಕ ಕಲ್ಪಿಸಿದರೆ ದಿನದ 24 ಗಂಟೆ ನದಿಗೆ ನೀರು ಹರಿಸುವೆ.
– ಭುವನೇಶ್ವರ ಶಿಡ್ಲಾಪುರ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಗೂರು
ಬರಗಾಲದಲ್ಲಿ ಕೆರೆಕಟ್ಟೆ ನದಿ ಹಳ್ಳ–ಕೊಳ್ಳಗಳು ಬತ್ತಿವೆ. ಇಂಥ ಸಂದರ್ಭದಲ್ಲಿ ತಮ್ಮ ಖಾಸಗಿ ಕೊಳವೆಬಾವಿಗಳಿಂದ ವರದಾ ನದಿಗೆ ನೀರು ಹರಿಸುತ್ತಿರುವ ರೈತರ ಕಾರ್ಯ ಶ್ಲಾಘನೀಯ
–ಮಲ್ಲಿಕಾರ್ಜುನ ಬಳ್ಳಾರಿ ಪ್ರಧಾನ ಕಾರ್ಯದರ್ಶಿ ಜಿಲ್ಲಾ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.