ADVERTISEMENT

ಕಬ್ಬು ಬೆಳೆಗಾರರ ಹೋರಾಟವನ್ನು ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 14:03 IST
Last Updated 5 ನವೆಂಬರ್ 2025, 14:03 IST
<div class="paragraphs"><p>ಬಿ.ವೈ.ವಿಜಯೇಂದ್ರ</p></div>

ಬಿ.ವೈ.ವಿಜಯೇಂದ್ರ

   

ಬೆಳಗಾವಿ: ‘ಕಬ್ಬು ಬೆಳೆಗಾರರ ಹೋರಾಟವನ್ನು ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹತ್ತಿರದಲ್ಲೇ ಇದ್ದರೂ, ಹೋರಾಟಗಾರರ ಬಳಿ ಬಂದಿಲ್ಲ. ಸಕ್ಕರೆ ಸಚಿವರೂ ಇತ್ತ ಗಮನಹರಿಸಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು.

ನಗರದ ಖಾಸಗಿ ಆಸ್ಪತ್ರೆಗೆ ಬುಧವಾರ ಸಂಜೆ ಭೇಟಿ ನೀಡಿ, ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ ಲಕ್ಕಪ್ಪ ಗುಂಡಧಾಳ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ADVERTISEMENT

‘ಆತ್ಮಹತ್ಯೆಗೆ ಯತ್ನಿಸಿದ ಬಡ ರೈತ ಲಕ್ಕಪ್ಪ ಅವರನ್ನು ಕುಟುಂಬದವರಿಗೆ ಗೊತ್ತಾಗದಂತೆಯೇ ಬೆಳಗಾವಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆದರೂ, ಸರ್ಕಾರದಿಂದ ಯಾರೊಬ್ಬರೂ ಆಸ್ಪತ್ರೆಗೆ ಬಂದು ರೈತನ ಭೇಟಿಯಾಗಿಲ್ಲ. ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ. ಬದಲಿಗೆ

ಮುಖ್ಯಮಂತ್ರಿ ಮತ್ತು ಸಚಿವರು ಕೇಂದ್ರದ ಮೇಲೆಯೇ ಆರೋಪ ಮಾಡುತ್ತಿದ್ದಾರೆ’ ಎಂದು ಹರಿಯಾಯ್ದರು.

‘ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ರೈತನ ಕುಟುಂಬಕ್ಕೆ ಧೈರ್ಯ ತುಂಬಬೇಕು. ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸಬೇಕು. ನಾನು ಹೋರಾಟದಲ್ಲಿ ಭಾಗಿಯಾದ ಕಾರಣ, ಸಚಿವ ಎಚ್‌.ಕೆ.ಪಾಟೀಲ ಅವರನ್ನು ಗುರ್ಲಾಪುರಕ್ಕೆ ಮುಖ್ಯಮಂತ್ರಿ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿ ರೈತ ಮುಖಂಡರು ಎಲ್ಲ ವಿಚಾರಗಳನ್ನು ಪಾಟೀಲ ಮುಂದೆ ತಿಳಿಸುತ್ತಾರೆ. ಅವರು ಏನು ಉತ್ತರ ಕೊಡುತ್ತಾರೆ ನೋಡೋಣ’ ಎಂದರು.

‘ಬಿಜೆಪಿ ನಾಯಕರು ಸಕ್ಕರೆ ಕಾರ್ಖಾನೆಗಳೂ ಇವೆ. ಅವರಿಂದಲಾದರೂ ಪ್ರತಿ ಟನ್‌ ಕಬ್ಬಿಗೆ ₹3,500 ದರ ಕೊಡಿಸಬಹುದಿತ್ತು ಅಲ್ಲವೇ’ ಎಂಬ ಪ್ರಶ್ನೆಗೆ, ‘ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳ ನಾಯಕರ ಕಾರ್ಖಾನೆಗಳಿವೆ. ನಮ್ಮ ಪಕ್ಷದ ನಾಯಕರ ಕಾರ್ಖಾನೆ ಇವೆ ಎಂದು ನಾನು ಹೋರಾಟದಿಂದ ಹಿಂದಕ್ಕೆ ಸರಿದಿಲ್ಲ. ರೈತರಿಗೆ ನ್ಯಾಯ ಒದಗಿಸಲೆಂದು ನಾನು ಹೋರಾಟಕ್ಕೆ ಹೋಗಿದ್ದೇನೆಯೇ ಹೊರತು, ಸಕ್ಕರೆ ಮಾಲೀಕರ ಪರ ಹೋಗಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.