ADVERTISEMENT

Covid-19 Effect: ಭತ್ತ ಕಟಾವಿಗೆ ಸೇಲಂನಿಂದ ಬರಬೇಕಿದ್ದ ಯಂತ್ರಗಳು ಬರಲೇ ಇಲ್ಲ

ಆಂಧ್ರ, ತಮಿಳುನಾಡಿನಿಂದ ಬಾರದ ಯಂತ್ರಗಳು: ಜಿಲ್ಲೆಯ ನೂರಾರು ರೈತರು ಅತಂತ್ರ

ಕೆ.ನರಸಿಂಹ ಮೂರ್ತಿ
Published 31 ಮಾರ್ಚ್ 2020, 9:35 IST
Last Updated 31 ಮಾರ್ಚ್ 2020, 9:35 IST
ಭತ್ತದ ಬೆಳೆಯ ನಡುವೆ ಸಿರುಗುಪ್ಪ ರೈತರು
ಭತ್ತದ ಬೆಳೆಯ ನಡುವೆ ಸಿರುಗುಪ್ಪ ರೈತರು   

ಬಳ್ಳಾರಿ: ‘ನಮ್ಮ ಸಿರುಗುಪ್ಪ ತಾಲ್ಲೂಕೊಂದಕ್ಕೇ ತಮಿಳುನಾಡಿನ ಸೇಲಂನಿಂದ ಸುಮಾರು 200 ಭತ್ತ ಕಟಾವು ಯಂತ್ರಗಳು ಬರಬೇಕಾಗಿದ್ದವು. ಒಂದು ವಾರದಿಂದ ಕರೆಯುತ್ತಿದ್ದೇವೆ. ಸೇಲಂನಿಂದ ಬರಬೇಕಾದವರು ಬರಲು ನಿರಾಕರಿಸುತ್ತಿದ್ದಾರೆ...’

ಜಿಲ್ಲೆಯಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ತಾಲ್ಲೂಕಿನ ಭೈರಾಪುರದ ರೈತ ಮಾಧವರೆಡ್ಡಿ ಮಂಗಳವಾರ ಅಸಹಾಯಕತೆಯಿಂದ ಹೀಗೆ ಹೇಳಿದರು.

ಜಿಲ್ಲೆಯಲ್ಲಿ ಹಿಂಗಾರು ಭತ್ತ ಕಟಾವಿಗೆ ಬಂದು ನಿಂತಿದ್ದು, ಅವರಂತೆ ಭತ್ತ ಬೆಳೆದ ಎಲ್ಲ ರೈತರೂ ಅಸಹಾಯಕರಾಗಿದ್ದಾರೆ. ಆಂಧ್ರ ಮತ್ತು ತಮಿಳುನಾಡಿನಿಂದ ಎಂದಿನಂತೆ ಬರಬೇಕಾಗಿದ್ದ ಕಟಾವು ಯಂತ್ರಗಳು ಇದ್ದಲ್ಲೇ ಇವೆ.

ADVERTISEMENT

ಕೊರೋನಾ ನಿಯಂತ್ರಣಕ್ಕಾಗಿ ಎಲ್ಲೆಡೆ ಸ್ಥಾಪಿಸಿರುವ ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಚೆಕ್‌ಪೋಸ್ಟ್‌ಗಳನ್ನು ದಾಟಿ ಬರಲು ಆಗುವುದಿಲ್ಲ ಎಂಬ ಆತಂಕ ಯಂತ್ರಗಳ ಮಾಲೀಕರನ್ನು ತಡೆ ಹಿಡಿದಿದೆ.

ಭರವಸೆಯಷ್ಟೇ ಸಾಲದು: ‘ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲ. ಖಾಲಿ ಅಥವಾ ಸರಕುಳ್ಳ ವಾಹನಗಳ ಸಂಚಾರಕ್ಕೆ ತಡೆ ಒಡ್ಡಬಾರದು ಎಂದು ಎಲ್ಲ ಚೆಕ್‌ಪೋಸ್ಟ್‌ಗಳ ಪೊಲೀಸರಿಗೆ ತಿಳಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಅದರದ್ದೊಂದು ಪ್ರತಿ ಕೊಡಿ ಎಂದರೆ ಅವರ ಬಳಿ ಇಲ್ಲ’ ಎಂದು ರೆಡ್ಡಿ ದೂರಿದರು.

‘ಕೃಷಿ ಚಟುವಟಿಕೆಗಳಿಗೆ ತೊಂದರೆ ಕೊಡಬಾರದು ಎಂದು ಜಿಲ್ಲಾಡಳಿತ ಏನಾದರೂ ತೀರ್ಮಾನ ಕೈಗೊಂಡಿದ್ದರೆ ಅದರ ಪ್ರತಿಯನ್ನು ಕೊಡಿ ಎಂದರೆ ಯಾರೂ ಕೊಡುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಕಟಾವು ತಡವಾಗಿ ಮಳೆಯೇನಾದರೂ ಸುರಿದರೆ ಭತ್ತ ನೆಲಕಚ್ಚಿ ನುಚ್ಚಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಥಳಿಸಿದರು: ಮೆಣಸಿನಕಾಯಿಯನ್ನು ಬ್ಯಾಡಗಿಯ ಶೀಥಲ ಗೋದಾಮಿನಲ್ಲಿಡಲೆಂದು ಸಿರುಗುಪ್ಪ ತಹಶೀಲ್ದಾರರಿಂದ ಪತ್ರ ಪಡೆದು ಲಾರಿಯಲ್ಲಿ ಹೊರಟಿದ್ದ ರೈತರೊಬ್ಬರನ್ನು ಹೊಸಪೇಟೆಯಲ್ಲಿ ತಡೆದ ಪೊಲೀಸರು ಹೇಳದೇ, ಕೇಳದೆ ಥಳಿಸಿದರು. ಪತ್ರ ತೋರಿಸಿದ ಬಳಿಕ ಬಿಟ್ಟರು. ಇಂಥ ಘಟನೆಗಳು ನಡೆದರೆ ಯಾವ ರೈತರಿಗೆ ರಸ್ತೆಗೆ ಬರಲು ಧೈರ್ಯ ಬರುತ್ತದೆ’ ಎಂದು ಕೇಳಿದರು.

ಬಾಡಿಗೆ ದರ ಹೆಚ್ಚಾಗುವ ಭಯ

ಭತ್ತ ಕಟಾವು ಯಂತ್ರಗಳ ಬಾಡಿಗೆ ದರ ಹೆಚ್ಚಾಗಬಹುದು ಎಂಬ ಆತಂಕವೂ ರೈತರನ್ನು ಕಾಡುತ್ತಿದೆ. ಪ್ರತಿ ಗಂಟೆಗೆ ₨ 3 ಸಾವಿರ ಬಾಡಿಗೆ ದರ ನಿಗದಿ ಮಾಡಲಾಗಿತ್ತು. ಮಾತು ಕತೆ ಬಳಿಕ ₨ 2.50 ಸಾವಿರಕ್ಕೆ ಇಳಿಸಲು ಯಂತ್ರಗಳ ಮಾಲೀಕರು ಒಪ್ಪಿದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಾಡಿಗೆ ದರ ಹೆಚ್ಚಾದರೂ ಅಚ್ಚರಿಪಡಬೇಕಿಲ್ಲ’ ಎಂದು ರೆಡ್ಡಿ ಅಭಿಪ್ರಾಯಪಟ್ಟರು.

ಖಾಲಿ ಚೀಲಗಳಿಲ್ಲ!

ಭತ್ತ ಕಟಾವು ಆದರೂ ಅದನ್ನು ತುಂಬಲು ರೈತರ ಬಳಿ ಖಾಲಿ ಗೋಣಿಚೀಲಗಳಿಲ್ಲ. ಏಕೆಂದರೆ ಚೀಲದ ಅಂಗಡಿಗಳನ್ನೂ ಬಂದ್‌ ಮಾಡಲಾಗಿದೆ.ಮೊದಲು ಅವುಗಳನ್ನು ತೆರೆಯಬೇಕು. ಕೃಷಿ ಚಟುವಟಿಕೆಗಳಿಗೆ ತೊಂದರೆ ನೀಡುವುದಿಲ್ಲ ಎನ್ನುವ ಸರ್ಕಾರ ಇಂಥ ಸೂಕ್ಷ್ಮ ವಿಷಯಗಳತ್ತ ಗಮನ ಹರಿಸಿ ರೈತಸ್ನೇಹಿ ನಿಲುವುಗಳನ್ನು ಪ್ರಕಟಿಸಬೇಕು ಎಂಬುದು ರೈತರ ಆಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.