ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಕೇಂದ್ರಗಳಲ್ಲಿ ಫಾಸ್ಟ್ಯಾಗ್ ಬಳಸುವಾಗ ಅನ್ವಯವಾಗುವ ಕೆಲವು ನಿಯಮಗಳು ಫೆಬ್ರುವರಿ 17ರಿಂದ ಜಾರಿಗೆ ಬರುವಂತೆ ಬದಲಾಗಿವೆ. ರಾಷ್ಟ್ರೀಯ ಪಾವತಿ ನಿಗಮವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರಿಸಿರುವ ಬದಲಾವಣೆ ಹೀಗಿದೆ:
ಟೋಲ್ ಕೇಂದ್ರವನ್ನು ತಲುಪುವುದಕ್ಕಿಂತ (ಅಂದರೆ, ಫಾಸ್ಟ್ಯಾಗ್ ಆ ಟೋಲ್ ಕೇಂದ್ರದ ಸ್ಕ್ಯಾನರ್ ಕಣ್ಣಿಗೆ ಬೀಳುವ ಸಮಯ) ಒಂದು ತಾಸು ಮೊದಲು ಫಾಸ್ಟ್ಯಾಗ್ ಅನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದರೆ, ಅದರಲ್ಲಿ ಅಗತ್ಯ ಪ್ರಮಾಣದಲ್ಲಿ ಹಣವಿಲ್ಲದಿದ್ದರೆ ಹಾಗೂ ಟೋಲ್ ಕೇಂದ್ರ ತಲುಪಿದ ಹತ್ತು ನಿಮಿಷಗಳ ನಂತರವೂ ಆ ಟ್ಯಾಗ್ ಸಕ್ರಿಯಗೊಂಡಿಲ್ಲದೆ ಇದ್ದರೆ ವಹಿವಾಟು ತಿರಸ್ಕೃತಗೊಳ್ಳಲಿದೆ ಎಂದು ನಿಗಮ ಹೇಳಿದೆ.
ಅಂದರೆ, ವಾಹನ ಚಾಲಕರು, ಮಾಲೀಕರು ಟೋಲ್ ಕೇಂದ್ರ ತಲುಪುವ ಒಂದು ತಾಸಿನ ಮೊದಲೇ ಅಗತ್ಯ ಪ್ರಮಾಣದಲ್ಲಿ ಹಣವನ್ನು ಟ್ಯಾಗ್‌ನ ವಾಲೆಟ್‌ಗೆ ಭರ್ತಿ ಮಾಡಿರಬೇಕು. ಅದು ಒಂದು ವೇಳೆ ಸಾಧ್ಯವಾಗದೆ ಇದ್ದಲ್ಲಿ, ಟೋಲ್ ಕೇಂದ್ರ ಪ್ರವೇಶಿಸಿದ ಹತ್ತು ನಿಮಿಷಗಳ ಒಳಗೆ ಫಾಸ್ಟ್ಯಾಗ್ ವಾಲೆಟ್‌ಗೆ ಹಣ ಭರ್ತಿ ಮಾಡಬೇಕು.
ಚಾಲಕರು ಅಥವಾ ಮಾಲೀಕರು ಇವೆರಡರಲ್ಲಿ ಯಾವೊಂದು ಕೆಲಸವನ್ನೂ ಮಾಡದೆ ಇದ್ದರೆ, ಫಾಸ್ಟ್ಯಾಗ್ ಮೂಲಕವೇ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.