ADVERTISEMENT

ಸಿಗದ ಅಪ್ಪನ ಸುಳಿವು: ಬಿಕ್ಕಿಬಿಕ್ಕಿ ಅತ್ತ ನಾರಾಯಣ ಆಚಾರ್‌ ಪುತ್ರಿಯರು

ಬ್ರಹ್ಮಗಿರಿಯಲ್ಲಿ ಮೂರನೇ ದಿನದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 8:29 IST
Last Updated 10 ಆಗಸ್ಟ್ 2020, 8:29 IST
ನಾರಾಯಣ ಆಚಾರ್‌ ಪುತ್ರಿಯರೊಂದಿಗೆ ಚರ್ಚೆ ನಡೆಸುತ್ತಿರುವ ಸಚಿವ ವಿ.ಸೋಮಣ್ಣ
ನಾರಾಯಣ ಆಚಾರ್‌ ಪುತ್ರಿಯರೊಂದಿಗೆ ಚರ್ಚೆ ನಡೆಸುತ್ತಿರುವ ಸಚಿವ ವಿ.ಸೋಮಣ್ಣ   

ತಲಕಾವೇರಿ (ಮಡಿಕೇರಿ): ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿತದಿಂದ ತಂದೆ ನಾರಾಯಣ ಆಚಾರ್‌ ಕಣ್ಮರೆಯಾಗಿರುವ ಮಾಹಿತಿ ತಿಳಿದು ಆಸ್ಟ್ರೇಲಿಯದಿಂದ ಎರಡು ದಿನಗಳ ಹಿಂದೆ ಹೊರಟಿದ್ದ ಅವರ ಇಬ್ಬರು ಪುತ್ರಿಯರು, ಸೋಮವಾರ ತಲಕಾವೇರಿ ತಲುಪಿದರು.

ಭಾಗಮಂಡಲದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಭೇಟಿ ಮಾಡಿದ ಶಾರದಾ ಆಚಾರ್‌ ಹಾಗೂ ನಮಿತಾ ಆಚಾರ್‌, ಬಿಕ್ಕಿಬಿಕ್ಕಿ ಅತ್ತರು. ಸಚಿವ ವಿ. ಸೋಮಣ್ಣ ಅವರು ಇಬ್ಬರಿಗೂ ಸಮಾಧಾನ ಹೇಳಿ, ಘಟನೆಯ ಮಾಹಿತಿ ನೀಡಿದರು.

ಘಟನೆ ನಡೆದ ಎರಡು ದಿನಗಳ ಹಿಂದೆಯಷ್ಟೇ ತಂದೆಯೊಂದಿಗೆ ಮಾತನಾಡಿದ್ದೆವು ಎಂದು ಶಾರದಾ, ನಮಿತಾ ಕಣ್ಣೀರು ಹಾಕಿದರು.

ADVERTISEMENT

ಇನ್ನು ಬ್ರಹ್ಮಗಿರಿಯಲ್ಲಿ ಮೂರನೇ ದಿನ ಕಾರ್ಯಾಚರಣೆ ಸಾಗುತ್ತಿದೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಪೊಲೀಸರೊಂದಿಗೆ ಅಗ್ನಿ ಶಾಮಕ ದಳ ಸಿಬ್ಬಂದಿಯನ್ನೂ ಕಾರ್ಯಾಚರಣೆಗೆ ಕರೆಸಿಕೊಳ್ಳಲಾಗಿದೆ. ಆನಂದ ತೀರ್ಥ ಅವರು ಶವವಾಗಿ ಪತ್ತೆಯಾದ ಸ್ಥಳದ ಸುತ್ತಲೂ ಮಣ್ಣ ತೆರವು ಮಾಡಲಾಗಿದೆ. ಬಟ್ಟೆ, ಪೂಜಾ ಸಾಮಗ್ರಿ, ನಾರಾಯಣ ಆಚಾರ್‌ ಅವರು ಓದುತ್ತಿದ್ದ ಪುಸ್ತಕಗಳು ಮಾತ್ರ ಸಿಕ್ಕಿವೆ. ಸ್ಥಳದಲ್ಲಿ ಸಮಾಧಿ ನಿರ್ಣಯ ಎಂಬ ಪುಸ್ತಕ ಸಿಕ್ಕಿದೆ. ನಾರಾಯಣ ಆಚಾರ್‌ ಈ ಕೃತಿಯನ್ನು ಓದುತ್ತಿದ್ದರೆ ಎಂದು ಪ್ರಶ್ನೆ ಮೂಡಿದೆ.

ಕುಸಿತದ ಸ್ಥಳದಲ್ಲಿ ಬಂಡೆ ತೆರವು ಮಾಡುವುದೇ ಸವಾಲಾಗಿದೆ. ಎರಡು ಹಿಟಾಚಿಗಳು ಮಣ್ಣು ಹಾಗೂ ಬಂಡೆ ತೆರವು ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.