ADVERTISEMENT

ವಿಧಾನ ಪರಿಷತ್ ಚುನಾವಣೆ: ಮತವೊಂದಕ್ಕೆ ₹ 50 ಸಾವಿರ!

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 22:57 IST
Last Updated 7 ಡಿಸೆಂಬರ್ 2021, 22:57 IST
   

ಮೈಸೂರು/ಮಂಡ್ಯ/ಹಾಸನ/ಮಡಿಕೇರಿ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿಮೈಸೂರು–ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಕ್ಷೇತ್ರಗಳಲ್ಲಿಹಣ ಹಂಚಿಕೆಯದ್ದೇ ಸದ್ದು. ಅಭ್ಯರ್ಥಿಗಳು ಮತವೊಂದಕ್ಕೆ ₹50 ಸಾವಿರದವರೆಗೆ ಹಣ ಹಂಚುತ್ತಿರುವುದು ಗೊತ್ತಾಗಿದೆ.

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ‌‌ಕಾಂಗ್ರೆಸ್‌ನ ಡಾ.ಡಿ.ತಿಮ್ಮಯ್ಯ, ಬಿಜೆಪಿಯ ಆರ್‌.ರಘು ಹಾಗೂ ಜೆಡಿಎಸ್‌ನ ಸಿ.ಎನ್‌.ಮಂಜೇಗೌಡ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.

ಈ ಕ್ಷೇತ್ರದಲ್ಲಿ ಕಳೆದ ಬಾರಿ ಒಂದು ವೋಟಿಗೆ ₹25 ಸಾವಿರದವರೆಗೆ ನೀಡಲಾಗಿತ್ತು. ಈ ಬಾರಿ ‘ಪೈಪೋಟಿ’ ಹೆಚ್ಚಿರುವುದರಿಂದ ಅದು ₹50 ಸಾವಿರ ತಲುಪಿರುವ ಬಗ್ಗೆ ಪಕ್ಷದ ಸಭೆಗಳಲ್ಲಿ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

ADVERTISEMENT

ಹಣದೊಂದಿಗೆ ಧರ್ಮಸ್ಥಳ ಮಂಜುನಾಥಸ್ವಾಮಿ ಚಿತ್ರವಿರುವ ಬೆಳ್ಳಿ ನಾಣ್ಯ ನೀಡುತ್ತಿರುವುದು ಗೊತ್ತಾಗಿದೆ. ಹಣ ಪಡೆದವರು ದೇವರ ಭಯದಿಂದ ತಮಗೇ ಮೊದಲ ಪ್ರಾಶಸ್ತ್ಯ ಮತ ನೀಡುತ್ತಾರೆ ಎಂಬುದು ಅಭ್ಯರ್ಥಿಗಳ ನಂಬಿಕೆ! ಹಣ ಹಂಚಲು ಪಕ್ಷದ ಕಾರ್ಯಕರ್ತರ ಮೇಲೆ ನಂಬಿಕೆ ಇಡದೆ ಪ್ರತಿ ಪಂಚಾಯಿತಿಗೊಬ್ಬ ಏಜೆಂಟ್‌ ನೇಮಿಸಿಕೊಂಡಿದ್ದಾರೆ.

1ರೂಪಾಯಿ ಎಂದರೆ ₹1 ಕೋಟಿ!

ಮಂಡ್ಯದಲ್ಲಿ ಅಭ್ಯರ್ಥಿಗಳು ಮತದಾರರಿಗೆ ತಲಾ ₹1 ಲಕ್ಷದವರೆಗೂ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಮಾತು ವ್ಯಾಪಕವಾಗಿದೆ.

ಜೆಡಿಎಸ್‌ನಿಂದ ಎನ್‌.ಅಪ್ಪಾಜಿಗೌಡ, ಬಿಜೆಪಿಯಿಂದ ಬೂಕಹಳ್ಳಿ ಮಂಜು, ಕಾಂಗ್ರೆಸ್‌ನಿಂದ ದಿನೇಶ್‌ ಗೂಳಿಗೌಡ ಕಣದಲ್ಲಿದ್ದು, ಮೂರೂ ಪಕ್ಷಗಳ ಮುಖಂಡರು ‘ರೂಪಾಯಿ’ ಬಗ್ಗೆ ಮಾತನಾಡುತ್ತಿರುವುದು ಕುತೂಹಲ ಕೆರಳಿಸಿದೆ.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ‘ಪ್ರತಿ ತಾಲ್ಲೂಕಿಗೂ ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿ ಮುಂಗಡವಾಗಿ 1ರಿಂದ 2 ರೂಪಾಯಿವರೆಗೆ ಕೊಟ್ಟಿದ್ದಾರೆ’ ಎಂದು ಆರೋಪ ಮಾಡಿದ್ದಾರೆ. ಇಲ್ಲಿ ಒಂದು ರೂಪಾಯಿ ಎಂದರೆ ₹1 ಕೋಟಿ ಎಂಬುದು ಮತದಾರರಿಗೆ ಚೆನ್ನಾಗಿ ಗೊತ್ತಿದೆ.

ಮತದಾರರ ಮಕ್ಕಳ ಮೇಲೆ ಪ್ರಮಾಣ

ಕೊಡಗು ಜಿಲ್ಲೆಯಲ್ಲಿ ಒಂದು ಪಕ್ಷದ ಅಭ್ಯರ್ಥಿ ಮತದಾರರಿಗೆ ತಲಾ
₹ 50 ಸಾವಿರ ಹಂಚಿಕೆ ಮಾಡಿದ್ದಾರೆ. ಎದುರಾಳಿ ಅಭ್ಯರ್ಥಿಯೂ ಅದಕ್ಕಿಂತ ಹೆಚ್ಚಿನ ಹಣ ಹಂಚಿಕೆಗೆ ಮುಂದಾಗಿದ್ದಾರೆ. ಮತದಾರರ ಮಕ್ಕಳ ಮೇಲೆ ಆಣೆ – ಪ್ರಮಾಣ ಸಹ ಮಾಡಿಸುತ್ತಿರುವ ಪ್ರಕರಣವೂ ನಡೆಯುತ್ತಿದೆ. ‌ಗ್ರಾಮದ ದೇವಸ್ಥಾನದ ಬಳಿಗೆ ಮತದಾರರನ್ನು ಕರೆಸಿ, ದೇವರ ಎದುರು ಹಣ ನೀಡಿ ಭಯ ಹುಟ್ಟಿಸಿ ವಿರೋಧಿ ಅಭ್ಯರ್ಥಿಗೆ ಮತ ಹೋಗದಂತೆ ‘ತಂತ್ರ’ ರೂಪಿಸಿದ್ದಾರೆ.

ವಾಷಿಂಗ್ ಮಷೀನ್ ಟೋಕನ್!

ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಒಂದು ಮತಕ್ಕೆ
₹50 ಸಾವಿರ ಹಣ ನೀಡಿದ್ದಾರೆ. ಕೆಲವೊಂದು ಕಡೆ ₹40 ಸಾವಿರ ನಗದು ಹಾಗೂ ಮಂಜುನಾಥಸ್ವಾಮಿ ಚಿತ್ರವುಳ್ಳ ಬೆಳ್ಳಿ ನಾಣ್ಯ ಕೊಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಒಂದು ಮತಕ್ಕೆ ₹10 ಸಾವಿರ ನಗದು ಹಾಗೂ ವಾಷಿಂಗ್ ಮಷೀನ್ ಟೋಕನ್ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ₹30 ಸಾವಿರ ನಗದು ನೀಡಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.