ADVERTISEMENT

ಲಸಿಕೆಗಾಗಿ ಹೋರಾಟ ಮಾಡಿ: ಡಿ.ಕೆ.ಶಿವಕುಮಾರ್‌

ಮಂಡ್ಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 12:02 IST
Last Updated 3 ಜೂನ್ 2021, 12:02 IST
ಕೋವಿಡ್‌ ಲಸಿಕೆ–ಸಾಂದರ್ಭಿಕ ಚಿತ್ರ
ಕೋವಿಡ್‌ ಲಸಿಕೆ–ಸಾಂದರ್ಭಿಕ ಚಿತ್ರ   

ಮಂಡ್ಯ: ‘ಯುವಜನರು ಲಸಿಕೆ ಪಡೆಯಲು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಯೇ ಕರೆಕೊಟ್ಟಿದ್ದರು. ಆದರೆ ಈಗ ನೋಂದಣಿ ಸ್ಥಗಿತಗೊಳಿಸಿದ್ದಾರೆ. ಲಸಿಕೆ ಪಡೆದುಕೊಳ್ಳುವುದಕ್ಕಾಗಿ ಯುವಜನರು ಹೋರಾಟ ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗುರುವಾರ ಹೇಳಿದರು.

ನಾಗಮಂಗಲದಲ್ಲಿ ಕಾಂಗ್ರೆಸ್‌ ವತಿಯಿಂದ ಬಡವರಿಗೆ ಆಹಾರ ಧಾನ್ಯಗಳ ಕಿಟ್‌ ವಿತರಿಸಿ ಮಾತನಾಡಿದ ಅವರು ‘ಬೌರಿಂಗ್‌ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಹೆಸರು ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆದುಕೊಳ್ಳುವಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ, ಯುವಜನರು ಸೂಚನೆ ನೀಡಿದ್ದೆ. ನಾನು ರಾಜ್ಯ ಮುಖ್ಯಕಾರ್ಯದರ್ಶಿ ಜೊತೆ ಮಾತನಾಡಿ ಮಾಹಿತಿ ಪಡೆದಿದ್ದೇನೆ, ಯುವಜನರಿಗೆ ಈಗ ಲಸಿಕೆ ದೊರೆಯುತ್ತಿಲ್ಲ. ನಾವು, ನೀವೆಲ್ಲಾ ಸೇರಿ ಹೋರಾಟ ಮಾಡಿ ಲಸಿಕೆ ಪಡೆಯಲೇಬೇಕು’ ಎಂದರು.

‘ಜೀವ ಇದ್ದರೆ ಜೀವನ, ಲಸಿಕೆಗಾಗಿ ಕಾಂಗ್ರೆಸ್‌ ಪಕ್ಷದ ಎಂಎಲ್‌ಎ, ಎಂಎಲ್‌ಸಿ ನಿಧಿಯಲ್ಲಿ ₹ 100 ಕೋಟಿ ಕೊಡುವುದಾಗಿ ಘೋಷಣೆ ಮಾಡಿದ್ದೇವೆ. ಪಾರದರ್ಶಕವಾಗಿ ಟೆಂಡರ್‌ ಕರೆದು, ಸರ್ಕಾರ ಖರೀದಿ ಮಾಡುವ ಏಜೆನ್ಸಿ ಮೂಲಕವೇ ನಾವೂ ಲಸಿಕೆ ಖರೀದಿ ಮಾಡುತ್ತೇವೆ. ಜನರಿಗೆ ಉಚಿತವಾಗಿ ಲಸಿಕೆ ಹಾಕಿಸುತ್ತೇವೆ. ಆದರೆ ಇದಕ್ಕೆ ರಾಜ್ಯ ಸರ್ಕಾರ ಅನುಮತಿಯನ್ನೇ ಕೊಟ್ಟಿಲ್ಲ’ ಎಂದರು.

ADVERTISEMENT

‘ರಾಜ್ಯದಾದ್ಯಂತ ನಮ್ಮ ಪಕ್ಷದ ಕಾರ್ಯಕರ್ತರು ವಿತರಣೆ ಮಾಡಿರುವ 200ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಜನರಿಗೆ ಸೇವೆ ನೀಡುತ್ತಿವೆ. ರಾಜಕೀಯ ಬಿಟ್ಟು ನಾವು ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.

‘ಹಣ್ಣು , ತರಕಾರಿ ಬೆಳೆದ ರೈತರು ಬೆಲೆ ಸಿಗದೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರವೇ ಹಣ್ಣು, ತರಕಾರಿ ಖರೀದಿಸಿ ರೈತರನ್ನು ಉಳಿಸಬೇಕು. ಹಾಪ್‌ಕಾಮ್ಸ್‌, ಎಪಿಎಂಸಿ ಯಾವ ಮೂಲಕವಾದರೂ ತಕ್ಷಣವೇ ಖರೀದಿ ಮಾಡಿ ರೈತರಿಗೆ ಹಣ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.