ADVERTISEMENT

Elephant Arjuna | ಅರ್ಜುನನಿಗೆ ಅಂತಿಮ ವಿದಾಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 19:43 IST
Last Updated 5 ಡಿಸೆಂಬರ್ 2023, 19:43 IST
ಸಕಲೇಶಪುರ ತಾಲ್ಲೂಕು ಯಸಳೂರು ಸಮೀಪದ ದಬ್ಬಳಿಕಟ್ಟೆ ಅರಣ್ಯದಲ್ಲಿ ಮಂಗಳವಾರ ಅರ್ಜುನನ ಕಳೇಬರಕ್ಕೆ ಮೈಸೂರು ರಾಜಮನೆತನದ ಪುರೋಹಿತ ಪ್ರಹ್ಲಾದ್‌ ಪೂಜೆ ನೆರವೇರಿಸಿದರು. –ಪ್ರಜಾವಾಣಿ ಚಿತ್ರ/ ಜಾನೇಕೆರೆ ಆರ್. ಪರಮೇಶ್‌ 
ಸಕಲೇಶಪುರ ತಾಲ್ಲೂಕು ಯಸಳೂರು ಸಮೀಪದ ದಬ್ಬಳಿಕಟ್ಟೆ ಅರಣ್ಯದಲ್ಲಿ ಮಂಗಳವಾರ ಅರ್ಜುನನ ಕಳೇಬರಕ್ಕೆ ಮೈಸೂರು ರಾಜಮನೆತನದ ಪುರೋಹಿತ ಪ್ರಹ್ಲಾದ್‌ ಪೂಜೆ ನೆರವೇರಿಸಿದರು. –ಪ್ರಜಾವಾಣಿ ಚಿತ್ರ/ ಜಾನೇಕೆರೆ ಆರ್. ಪರಮೇಶ್‌     

ಹಾಸನ: ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಮೃತಪಟ್ಟ ಅರ್ಜುನನಿಗೆ, ಆಕ್ರೋಶ, ದುಃಖ, ಕಣ್ಣೀರಿನ ನಡುವೆ ಮಂಗಳವಾರ ಮಧ್ಯಾಹ್ನ ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಅರಣ್ಯದ ನೆಡುತೋಪಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಿತು.

ಮೈಸೂರು ರಾಜಮನೆತನದ ಪುರೋಹಿತ ಪ್ರಹ್ಲಾದ್‌ ಅವರು ಬಂದು, ಅರ್ಜುನನ ಕಳೇಬರಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಮಾವುತ ವಿನು ಅಂತಿಮ ವಿಧಿ ವಿಧಾನ ನೆರವೇರಿಸಿದರು. ಮುಚ್ಚಿದ ಪೆಂಡಾಲ್‌ನಲ್ಲಿ ದಂತ ತೆಗೆದು, ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.

ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಎಸ್ಪಿ ಮೊಹಮ್ಮದ್‌ ಸುಜೀತಾ, ಚಾಮರಾಜೇಂದ್ರ ಒಡೆಯರ ಅವರ ಮೊಮ್ಮಗಳು ಶ್ರುತಿ ಕೀರ್ತಿದೇವ್ ಅವರು ಗೌರವ ಸಲ್ಲಿಸಿದರು. ಕೊಡಗಿನ ಕಿರೆಕೊಡ್ಲಿಮಠದ ಸದಾಶಿವ ಸ್ವಾಮೀಜಿ ಹಾಗೂ ಕಲ್ಲಮಠದ ಮಹಾಂತ ಸ್ವಾಮೀಜಿ ಪೂಜೆ ಸಲ್ಲಿಸಿ ಆರತಿ ಬೆಳಗಿದರು.

ADVERTISEMENT

ಮೈಸೂರು ಜಿಲ್ಲಾಡಳಿತದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಲೋಕನಾಥ್ ಅವರು ಹಾರ ಹಾಕಿ ನಮನ ಸಲ್ಲಿಸಿದರು. ಪೊಲೀಸರು ಕುಶಾಲುತೋಪು ಹಾರಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ನೆರೆದ ಗಣ್ಯರು ಹಾಗೂ ಜನರ ಕಣ್ಣಾಲಿಗಳು ತುಂಬಿ ಬಂದವು.

ಮೈಸೂರಿಗೆ ಕಳುಹಿಸಲು ಒತ್ತಾಯ: ಮೈಸೂರಿನಿಂದ ಬಂದಿದ್ದ ನೂರಾರು ಜನರು ಅರ್ಜುನನಿಗೆ ಅಂತಿಮ ನಮನ ಸಲ್ಲಿಸಿದರು. ‘ಇದು ನಮ್ಮ ಜಿಲ್ಲೆಯ ಆಸ್ತಿ. ಕಳೇಬರವನ್ನು ಮೈಸೂರಿಗೆ ಕಳುಹಿಸಿಕೊಡಿ. ಅಲ್ಲಿಯೇ ಅಂತ್ಯಕ್ರಿಯೆ ಮಾಡುತ್ತೇವೆ’ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.

‘ಮೈಸೂರಿನ ಬಳ್ಳೆ ಸಾಕಾನೆ ಶಿಬಿರಕ್ಕೆ ತೆಗೆದುಕೊಂಡು ಹೋಗುತ್ತೇವೆ. ಅಲ್ಲಿಯೇ ಅಂತ್ಯಕ್ರಿಯೆ ಮಾಡುತ್ತೇವೆ’ ಎಂದು ವಿನು ಸೇರಿದಂತೆ ಎಲ್ಲ ಮಾವುತರೂ ಒತ್ತಾಯಿಸಿದರು. ಅರಮನೆ ಪುರೋಹಿತ ಪ್ರಹ್ಲಾದ್ ಅವರು, ‘ಆನೆ ಮೃತಪಟ್ಟ ಸ್ಥಳದಲ್ಲೇ ಅಂತ್ಯಕ್ರಿಯೆ ಆಗಬೇಕು. ಈಗಾಗಲೇ ಅರ್ಜನನಿಗೆ ನೋವಾಗಿದೆ. ಮತ್ತೆ ನೋವಾಗುವುದು ಬೇಡ’ ಎಂದು ಕೈಮುಗಿದು ಮನವಿ ಮಾಡಿದರು.

ಲಾಠಿ ಬೀಸಿದ ಪೊಲೀಸರು: ದಬ್ಬಳಿಕಟ್ಟೆ ನೆಡುತೋಪಿನಲ್ಲಿ ಗುಂಡಿ ತೋಡಲು ಆರಂಭಿಸುತ್ತಿದ್ದಂತೆಯೇ ಜನ ಆಕ್ರೋಶ ವ್ಯಕ್ತಪಡಿಸಿದರು.

‘ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನ ಸಾವಿನಲ್ಲಿ ಅನ್ಯಾಯವಾಗಿದೆ ಎಂದು ಹೇಳಲಾಗುತ್ತಿದೆ. ಸಾವಿನ ನಂತರವಾದರೂ ಸೂಕ್ತ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಿ, ಸ್ಮಾರಕ ಮಾಡುವ ಮೂಲಕ ನ್ಯಾಯ ಒದಗಿಸಿ’ ಎಂದು ಒತ್ತಾಯಿಸಿದರು. ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು.

ಆಕ್ರೋಶ: ಇದಕ್ಕೂ ಮೊದಲು ಆನೆ ಕಳೇಬರವನ್ನು ಇಟ್ಟಿದ್ದ ಸ್ಥಳದಲ್ಲಿ ಯಡೇಹಳ್ಳಿ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟಿಸಿದ ಜನರು, ‘ಅರ್ಜುನ ನಮ್ಮ ನಾಡಿನ ಹೆಮ್ಮೆ. ಇಲ್ಲಿ ಯಾವ ವ್ಯವಸ್ಥೆ ಮಾಡಿಲ್ಲ. ಕನಿಷ್ಠ ಪೆಂಡಾಲ್‌ ಹಾಕುವ ಯೋಗ್ಯತೆಯೂ ಇಲ್ಲ. ಡಿ.ಸಿ ಅರಣ್ಯ ಅಧಿಕಾರಿ ಯಾರು ಬಂದಿದ್ದಾರೆ ಇಲ್ಲಿಗೆ?’ ಎಂದು ಪ್ರಶ್ನಿಸಿದರು.

‘ನಮ್ಮ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಅರ್ಜುನ, ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಮೃತಪಟ್ಟಿದ್ದಾನೆ. ಅಧಿಕಾರಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು. ವಿಧಾನಸಭೆ ಅಧಿವೇಶನದಲ್ಲಿ ತುರ್ತು ಚರ್ಚೆ ಮಾಡಬೇಕು’ ಎಂದು ಆಗ್ರಹಿಸಿದರು.

ಅರ್ಜುನನ್ನು ಅಪ್ಪಿಕೊಂಡು ಮಾವುತರು ರೋದಿಸಿದರು

ಅಂತಿಮ ಸಂಸ್ಕಾರಕ್ಕೆ ತಾಲ್ಲೂಕು ಆಡಳಿತ ಸಿದ್ಧತೆ ನಡೆಸುತ್ತಿದ್ದ ವೇಳೆ ಪ್ರತಿಭಟನೆ ಆರಂಭಿಸಿದ ಕರವೇ ಕಾರ್ಯಕರ್ತರ ವಿರುದ್ಧ ಸ್ಥಳೀಯರು ಆಕ್ಷೇಪಿಸಿ, ‘ನೋವಿನಲ್ಲಿರುವ ನಾವೇ ಸುಮ್ಮನಿರುವಾಗ ಪ್ರತಿಭಟಿಸಿ ಲಾಭ ಪಡೆಯಲು ಬಂದಿದ್ದೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಅರಣ್ಯದಲ್ಲಿ ಅರ್ಜುನನ ಅಂತಿಮ ದರ್ಶನಕ್ಕೆ ಸಾವಿರಾರು ಜನ ಬಂದಿದ್ದರು –ಪ್ರಜಾವಾಣಿ ಚಿತ್ರ/ಜಾನೇಕೆರೆ ಆರ್. ಪರಮೇಶ್‌
ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಬಳಿ ನೆಡತೋಪಿನಲ್ಲಿ ಗುಂಡಿ ತೆಗೆದು ಅರ್ಜುನನ ಕಳೇಬರದ ಅಂತ್ಯಕ್ರಿಯೆ ನಡೆಸಲಾಯಿತು.

‘ಗುಂಡೇಟಿನ ಗುರುತು ಪತ್ತೆಯಾಗಿಲ್ಲ’

‘ಬಾಹ್ಯ ಮರಣೋತ್ತರ ಪರೀಕ್ಷೆಯಲ್ಲಿ ಗುಂಡೇಟಿನ ಗುರುತು ಪತ್ತೆಯಾಗಿಲ್ಲ. ಕಾಡಾನೆ ದಾಳಿಯಿಂದ ಪಕ್ಕೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಅರ್ಜುನ ಮೃತಪಟ್ಟಿದ್ದಾನೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹೇಳಿದರು. ‘ಪ್ರಾಥಮಿಕ ಮಾಹಿತಿ ಪ್ರಕಾರ ಕಾರ್ಯಾಚರಣೆ ವೇಳೆ ಲೋಪವಾಗಿಲ್ಲ. ಅರಿವಳಿಕೆ‌ ಮದ್ದು ಮಿಸ್ ಫೈರ್ ಕುರಿತು ಬಗ್ಗೆ ಎಷ್ಟು ಡೋಸ್ ಇಂಜೆಕ್ಷನ್ ಇತ್ತು ಎಷ್ಟು ಬಳಸಿದೆ ಎಂದು ತನಿಖೆ ನಡೆಯಲಿದ್ದು ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ’ ಎಂದರು. ‘ಇದು ದಸರಾ ಆನೆ. ಇಲ್ಲಿ ಸ್ಮಾರಕ ನಿರ್ಮಿಸಲಿದ್ದು ಬಳ್ಳೆಯಲ್ಲೂ ಸ್ಮಾರಕ ನಿರ್ಮಿಸಲಾಗುವುದು. ಆನೆ ಸ್ಥಳಾಂತರಿಸುವುದು ಸೂಕ್ತವಲ್ಲ ಎಂದು ಅಂತ್ಯಕ್ರಿಯೆ ಮಾಡಲಾಗಿದೆ. ಹೊಟ್ಟೆ ಊದಿತ್ತು. ಸಾಗಿಸುವ ಮಾರ್ಗಮಧ್ಯೆ ಹೊಟ್ಟೆ ಒಡೆದರೆ ಕಷ್ಟವಾಗುತ್ತಿತ್ತು’ ಎಂದರು.

‘ಅರ್ಜುನನ ಕಾಲಿಗೆ ಗುಂಡೇಟು’

‘ಆನೆಗಳ ಕಾಳಗದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡು ಅರ್ಜುನನ ಕಾಲಿಗೆ ತಗುಲಿತ್ತು’ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರ ಹೇಳಿಕೆಯುಳ್ಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ‘ಆಕಸ್ಮಿಕವಾಗಿ ಅರಿವಳಿಕೆ ಚುಚ್ಚುಮದ್ದು ಬಿದ್ದಿದ್ದ ‘ಪ್ರಶಾಂತ್‌’ ಆನೆಗೆ ಮತ್ತೊಂದು ಚುಚ್ಚುಮದ್ದು ನೀಡುವಷ್ಟರಲ್ಲಿ ಅರ್ಜುನ ಹಾಗೂ ಕಾಡಾನೆ ಮಧ್ಯೆ ಕಾಳಗ ತೀವ್ರವಾಗಿತ್ತು. ತಡೆಯಲೆಂದು ಸಿಬ್ಬಂದಿ ಹಾರಿಸಿದ ಗುಂಡು ಅರ್ಜುನನ ಕಾಲಿಗೆ ತಗುಲಿತ್ತು’ ಎಂದು ವ್ಯಕ್ತಿ ತಿಳಿಸಿದ್ದಾರೆ. ‘ಇನ್ನೊಂದೆಡೆ ಮಾವುತ ವಿನು ಕೂಡಾ ಕೆಳಗೆ ಬಿದ್ದು ಆಸ್ಪತ್ರೆಗೆ ಸೇರಿದ್ದರು. ಕಾಲಿಗೆ ಗುಂಡು ತಗುಲಿದ್ದ ಅರ್ಜುನ ಮಾವುತ ಇಲ್ಲದೇ ಕಾಳಗ ನಡೆಸಿದ್ದರಿಂದ ನೆಲಕ್ಕೆ ಬಿದ್ದಿತ್ತು. ಆಗ ಕಾಡಾನೆ ತನ್ನ ಕೋರೆಯಿಂದ ಅರ್ಜುನನನ್ನು ತಿವಿದು ಕೊಂದು ಹಾಕಿತು‘ ಎಂದು ಹೇಳಿದ್ದಾರೆ ಮಾವುತ ವಿನು ‘ನಾನು ಅರ್ಜುನನ ಜೊತೆಗೇ ಇದ್ದಿದ್ದರೆ ಸಾಯುತ್ತಿರಲಿಲ್ಲ’ ಎಂದು ದುಃಖ ತೋಡಿಕೊಳ್ಳುತ್ತಿದ್ದರು.

ಮಾವುತ ವಿನು ರೋದನ

ನನ್ನ ಆನೆಯನ್ನು ಬದುಕಿಸಿ ಕೊಡಿ. ನನ್ನ ಜೊತೆ ಕಳುಹಿಸಿ. ಎಂಥ ರಾಜನ್ನ ಮಿಸ್‌ ಮಾಡಿಕೊಂಡೆ’ ಎಂದು ಅರ್ಜುನನ ಕಳೇಬರ ತಬ್ಬಿಕೊಂಡು ಮಾವುತ ವಿನು ರೋದಿಸುತ್ತಿದ್ದ ದೃಶ್ಯಗಳು ಮನ ಕಲಕುವಂತಿದ್ದವು. ಅರ್ಜುನನ ಸೊಂಡಿಲು ತಬ್ಬಿಕೊಂಡು ‘ಆನೆ ಬದುಕಿಸಿಕೊಡಿ. ಇಲ್ಲವೇ ನನ್ನ ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ. ಅರ್ಜುನ ಸತ್ತಿಲ್ಲ ಎಂದು ನನ್ನ ಹೆಂಡತಿ ಮಕ್ಕಳಿಗೆ ಹೇಳಿದ್ದೇನೆ. ಅರ್ಜುನನನ್ನು ನನ್ನ ಜೊತೆ ಕಳುಹಿಸಿಕೊಡಿ’ ಎಂದು ರೋದಿಸಿದರು. ಇದನ್ನು ಕಂಡ ಅರಣ್ಯಾಧಿಕಾರಿ ಶಿಲ್ಪಾ ಅವರ ಕಣ್ಣಾಲಿಗಳೂ ತೇವಗೊಂಡಿದ್ದವು. ಪ್ರತಿಯೊಬ್ಬರ ಕಣ್ಣಲ್ಲಿ ನೀರು ದುಃಖ ಮಡುಗಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.