ADVERTISEMENT

ಮಾನದಂಡ ಲೋಪ: ನಗರ ಸ್ಥಳೀಯ ಸಂಸ್ಥೆಗಳಿಗೆ ₹1,213 ಕೋಟಿ ಅನುದಾನಕ್ಕೆ ಕುತ್ತು?

ನಗರ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ಅನುದಾನ

ಮಂಜುನಾಥ್ ಹೆಬ್ಬಾರ್‌
Published 24 ಅಕ್ಟೋಬರ್ 2022, 21:15 IST
Last Updated 24 ಅಕ್ಟೋಬರ್ 2022, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳು ಸಮರ್ಪಕ ಮಾನದಂಡಗಳನ್ನು ಅನುಸರಿಸದ ಕಾರಣ 15ನೇ ಹಣಕಾಸು ಆಯೋಗದ ₹1,213 ಕೋಟಿ ಅನುದಾನ ಕೈತಪ್ಪುವ ಆತಂಕ ಎದುರಾಗಿದೆ.

ಕರ್ನಾಟಕ ಹಣಕಾಸು ಇಲಾಖೆಯ ಕಾರ್ಯದರ್ಶಿ (ಬಜೆಟ್‌ ಮತ್ತು ಸಂಪನ್ಮೂಲ) ಏಕ್‌ರೂಪ್‌ ಕೌರ್ ಅವರಿಗೆ ಅಕ್ಟೋಬರ್ 6ರಂದು ಪತ್ರ ಬರೆದಿದ್ದ ಕರ್ನಾಟಕದಸ್ಥಾನಿಕ ಆಯುಕ್ತೆ ಎಂ.ಇಮ್‌ಕೊಂಗ್ಲ ಜಮೀರ್, ‘ನಗರ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ಪಾಲಿನ ಅನುದಾನದ ಮೊದಲ ಕಂತು ಆಗಸ್ಟ್‌ 22ರಂದು ₹418 ಕೋಟಿ, ಆಗಸ್ಟ್‌ 31ರಂದು ₹628 ಕೋಟಿ ಬಿಡುಗಡೆಯಾಗಿದೆ.

ಮೊದಲನೇ ಕಂತಿನ ಅನುದಾನದ ಬಳಕೆ ಪ್ರಮಾಣಪತ್ರ ಸಲ್ಲಿಸಿದ ಬಳಿಕವಷ್ಟೇ ಎರಡನೇ ಕಂತಿನ ಅನುದಾನ ಬಿಡುಗಡೆ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ತಿಳಿಸಿದ್ದರು. ಜತೆಗೆ, ‘ಮಿಲಿಯನ್‌ ಪ್ಲಸ್‌ ನಗರಗಳು (ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಗುರುತಿಸಿರುವ ದೇಶದ 500 ನಗರಗಳನ್ನು ಹೀಗೆ ಕರೆಯಲಾಗುತ್ತದೆ.

ಇದರಲ್ಲಿ ಕರ್ನಾಟಕದ ನಾಲ್ಕು ನಗರಗಳು ಸೇರಿವೆ) ಹಾಗೂ ಇತರ ನಗರಗಳಿಗೆ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಲು ಹಣಕಾಸು ಆಯೋಗದ ವಿಭಾಗವು ಕೆಲವು ಸ್ಪಷ್ಟನೆಗಳನ್ನು ಕೋರಿದೆ. ತ್ಯಾಜ್ಯ ಸಂಸ್ಕರಣೆ ನಿರ್ವಹಣೆಯ ಬಗ್ಗೆಯೂ ವಿವರಗಳನ್ನು ಕೋರಿದೆ. ಅನುದಾನ ಬಿಡುಗಡೆಗೆ ಬಳಕೆ ಪ್ರಮಾಣಪತ್ರ ಹಾಗೂ ಪರಿಷ್ಕೃತ ಬಳಕೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿದೆ’ ಎಂದು ಪತ್ರದಲ್ಲಿ ಗಮನ ಸೆಳೆದಿದ್ದರು.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ ಅವರಿಗೆ ಅಕ್ಟೋಬರ್‌ 14ರಂದು ಹಣಕಾಸು ಇಲಾಖೆಯ ಅಧಿಕಾರಿಗಳು ಪತ್ರ ಬರೆದು, ‘15ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ 2022–23ನೇ ಸಾಲಿಗೆ ನಗರ ಸ್ಥಳೀಯ ಸಂಸ್ಥೆಗಳ ಅನುದಾನದಡಿ ₹1,213 ಕೋಟಿ ಬಿಡುಗಡೆಯಾಗಬೇಕು. ಆದರೆ, ಈ ಮೊತ್ತವು ಈವರೆಗೆ ಬಿಡುಗಡೆ ಆಗಿಲ್ಲ.

ಹೀಗಾಗಿ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಹಣಕಾಸು ಸಚಿವಾಲಯದ ಮಾರ್ಗಸೂಚಿಯನ್ವಯ ಆಯೋಗದ ಅನುದಾನವನ್ನು ಸಂಪೂರ್ಣವಾಗಿ ಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವರದಿಯ ಪ್ರತಿಯನ್ನು ಇಲಾಖೆಗೆ ಕಳುಹಿಸಬೇಕು’ ಎಂದು ಸೂಚಿಸಿದರು.

ADVERTISEMENT

ಅದರ ಬೆನ್ನಲ್ಲೇ, ರಾಕೇಶ್ ಸಿಂಗ್‌ ಅವರುಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಹಾಗೂ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಮಂಜುಶ್ರೀ ಅವರಿಗೆ ಪತ್ರ ಬರೆದು ಅನುದಾನ ಕೈತಪ್ಪದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.

‘ಕರ್ನಾಟಕ ಸರ್ಕಾರಕ್ಕೆ ಬಿಡುಗಡೆಯಾಗಬೇಕಿರುವ ಅನುದಾನವನ್ನು ಪೂರ್ಣವಾಗಿ ಪಡೆಯಲು ನಗರ ಸ್ಥಳೀಯ ಸಂಸ್ಥೆಗಳು ಸಮರ್ಪಕ ಮಾನದಂಡಗಳನ್ನು ಸಲ್ಲಿಸದೇ ಇರುವುದು ಕಂಡು ಬಂದಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಹಣಕಾಸು ಇಲಾಖೆ ಪತ್ರ ಬರೆದಿವೆ. ಈ ವಿಷಯದ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸಿ ಯಾವುದೇ ಅನುದಾನ ಕೈತಪ್ಪದಂತೆ ಮಾನದಂಡಗಳನ್ನು ಅನುಸರಿಸಬೇಕು. ಅನುದಾನವನ್ನು ಪೂರ್ಣವಾಗಿ ಪಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ, ಅನುದಾನ ಪಡೆಯಲು ವಿಳಂಬವಾದರೆ, ಅನುದಾನ ಕೈ ತಪ್ಪಿದರೆ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.