ADVERTISEMENT

ನೇರ ನಗದು ವರ್ಗಾವಣೆಗಳಿಂದ ಆರ್ಥಿಕ ಸ್ಥಿರತೆ ಹಾಳು: 16ನೇ ಹಣಕಾಸು ಆಯೋಗ ಎಚ್ಚರಿಕೆ

ಮಂಜುನಾಥ್ ಹೆಬ್ಬಾರ್‌
Published 2 ಫೆಬ್ರುವರಿ 2026, 20:27 IST
Last Updated 2 ಫೆಬ್ರುವರಿ 2026, 20:27 IST
   

ನವದೆಹಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿಗಳು ಮತ್ತು ಗ್ಯಾರಂಟಿಯಂತಹ ನೇರ ನಗದು ವರ್ಗಾವಣೆ ಯೋಜನೆಗಳಿಂದ ಭವಿಷ್ಯದ ಆರ್ಥಿಕ ಸ್ಥಿರತೆ ಹಾಳಾಗಲಿದೆ ಎಂದು 16ನೇ ಹಣಕಾಸು ಆಯೋಗ ಎಚ್ಚರಿಸಿದೆ. 

ಮತದಾರರ ಮನ ಗೆಲ್ಲಲು ಚುನಾವಣೆಗೆ ಮುನ್ನ ಅಥವಾ ಅಧಿಕಾರಕ್ಕೆ ಬಂದ ಕೂಡಲೇ ರಾಜಕೀಯ ಪಕ್ಷಗಳು ಹಾಗೂ ಸರ್ಕಾರಗಳು ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಪ್ರವೃತ್ತಿ ಹೆಚ್ಚುತ್ತಿರುವ ಸಮಯದಲ್ಲೇ ಆಯೋಗ ಈ ಎಚ್ಚರಿಕೆ ನೀಡಿದೆ. 

ದೇಶದಲ್ಲಿ ಸಂಬಳ, ಪಿಂಚಣಿ ಮತ್ತು ಸಾಲದ ಮೇಲಿನ ಬಡ್ಡಿ ಪಾವತಿಗಳಂತೆ, ಸಬ್ಸಿಡಿಗಳು ‘ಬದ್ಧ’ ವೆಚ್ಚಗಳಾಗಿ ಬದಲಾಗುವ ಪ್ರವೃತ್ತಿ ಹೊಂದಿವೆ. ಈ ಜನಪ್ರಿಯ ಯೋಜನೆಗಳಿಂದಾಗಿ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಇತರ ವಲಯಗಳಿಗೆ ಮಾಡುತ್ತಿರುವ ವೆಚ್ಚ ಕಡಿಮೆ ಆಗುತ್ತಿದೆ. ಆರ್ಥಿಕತೆ ಬೆಳೆದಂತೆ ಹಾಗೂ ಹೆಚ್ಚಿನ ಆದಾಯ ಲಭ್ಯವಾಗುತ್ತಿದ್ದಂತೆ, ಅಸ್ತಿತ್ವದಲ್ಲಿರುವ ಯೋಜನೆಗಳನ್ನು ವಿಸ್ತರಿಸಲು ಹಾಗೂ ಹೊಸ ಯೋಜನೆಗಳನ್ನು ಘೋಷಿಸಲು ರಾಜಕೀಯ ಒತ್ತಡ ಹೆಚ್ಚಾಗುತ್ತಿದೆ. ಇದರಿಂದಾಗಿ, ಅಭಿವೃದ್ಧಿ ಯೋಜನೆಗಳ ಮೇಲೆ ಸರ್ಕಾರ ಮಾಡುತ್ತಿರುವ ವೆಚ್ಚ ಕಡಿಮೆ ಆಗಲಿದೆ ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ. 

ADVERTISEMENT

ಇಂತಹ ಇನ್ನಷ್ಟು ಯೋಜನೆಗಳನ್ನು ಪರಿಚಯಿಸುವ ಅಥವಾ ಅಸ್ವಿತ್ವದಲ್ಲಿರುವ ಯೋಜನೆಗಳನ್ನು ವಿಸ್ತರಿಸುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು‍‍ ಪುನರ್ ವಿಮರ್ಶೆ ಮಾಡಬೇಕು ಎಂದು ಆಯೋಗ ಕಿವಿಮಾತು ಹೇಳಿದೆ.

ಮೂರು ಪಟ್ಟು ಹೆಚ್ಚಳ: ಆಯೋಗವು 21 ರಾಜ್ಯಗಳ ಸಬ್ಸಿಡಿ ಹಾಗೂ ನಗದು ವರ್ಗಾವಣೆಗಳ ವಿಶ್ಲೇಷಣೆ ನಡೆಸಿದೆ. ಈ ರಾಜ್ಯಗಳು ಇದಕ್ಕೆ 2018–19ರಲ್ಲಿ ₹3.86 ಲಕ್ಷ ಕೋಟಿ ವೆಚ್ಚ ಮಾಡಿದ್ದವು. 2023–24ರಲ್ಲಿ ಮೊತ್ತ ₹7.59 ಲಕ್ಷ ಕೋಟಿಗೆ ಹಾಗೂ 2025–26ರಲ್ಲಿ ₹9.30 ಲಕ್ಷ ಕೋಟಿಗೆ ಏರಿತು. 21 ರಾಜ್ಯಗಳ ಒಟ್ಟು ಆಂತರಿಕ ಉತ್ಪಾದನೆಯ (ಜಿಎಸ್‌ಡಿಪಿ) ಸಬ್ಸಿಡಿಗಳಿಗೆ 2018–19ರಲ್ಲಿ ಶೇ 2.2 ವೆಚ್ಚ ಮಾಡುತ್ತಿದ್ದರೆ, 2024–25ರಲ್ಲಿ ಶೇ 3ರಷ್ಟು ಖರ್ಚು ಮಾಡಲಾಯಿತು. ಒಟ್ಟು ಬದ್ಧ ವೆಚ್ಚದಲ್ಲಿ ಸಬ್ಸಿಡಿಗಳು ಹಾಗೂ ನಗದು ವರ್ಗಾವಣೆಗಳಿಗೆ 2018–19ರಲ್ಲಿ ಶೇ 15.6 ವೆಚ್ಚ ಮಾಡಿದ್ದರೆ, 2024–25ರಲ್ಲಿ ಮಾಡಿದ ವೆಚ್ಚ ಶೇ 21.3ರಷ್ಟು.

2025-26ರ ಆರ್ಥಿಕ ವರ್ಷದ ಅಂಕಿ ಅಂಶಗಳ ಪ್ರಕಾರ, ಮಹಾರಾಷ್ಟ್ರದ ಲಡ್ಕಿ ಬಹಿನ್ ಯೋಜನೆ, ಕರ್ನಾಟಕದಲ್ಲಿ ಗೃಹ ಲಕ್ಷ್ಮಿ ಮತ್ತು ಪಶ್ಚಿಮ ಬಂಗಾಳದ ಲಕ್ಷ್ಮಿರ್ ಭಂಡಾರ್ ಯೋಜನೆಗಳು ಬಹುದೊಡ್ಡ ನಗದು ವರ್ಗಾವಣೆ ಯೋಜನೆಗಳು ಎಂದು ಆಯೋಗ ಹೇಳಿದೆ.

ನಗದು ವರ್ಗಾವಣೆಗೆ ರಾಜ್ಯಗಳ ನಾಗಾಲೋಟ
2018–19ರಲ್ಲಿ ತೆಲಂಗಾಣವು ತನ್ನ ಬದ್ಧ ವೆಚ್ಚದ ಶೇಕಡಾ 10ಕ್ಕಿಂತ ಹೆಚ್ಚು ಭಾಗವನ್ನು ಬೇಷರತ್‌ ನಗದು ವರ್ಗಾವಣೆಗೆ ಹಂಚಿಕೆ ಮಾಡಿದ ಏಕೈಕ ರಾಜ್ಯವಾಗಿತ್ತು. 2023-24ರ ಹೊತ್ತಿಗೆ, ಅಂತಹ ರಾಜ್ಯಗಳ ಸಂಖ್ಯೆ ಆರಕ್ಕೆ ಮತ್ತು 2025-26ರ ವೇಳೆಗೆ ಒಂಬತ್ತಕ್ಕೆ ಏರಿತು. ತಮ್ಮ ಆದಾಯದ ಶೇಕಡಾ 5ಕ್ಕಿಂತ ಹೆಚ್ಚು ವೆಚ್ಚವನ್ನು ನಗದು ವರ್ಗಾವಣೆಗೆ ಖರ್ಚು ಮಾಡಿದ ರಾಜ್ಯಗಳ ಸಂಖ್ಯೆಯಲ್ಲೂ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ. 2018-19ರಲ್ಲಿ ಈ ರಾಜ್ಯಗಳ ಸಂಖ್ಯೆ ನಾಲ್ಕು ಆಗಿತ್ತು. 2025-26ರ ವೇಳೆಗೆ ರಾಜ್ಯಗಳ ಸಂಖ್ಯೆ ಹದಿಮೂರಕ್ಕೆ ಜಿಗಿದಿದೆ.
ವಿತ್ತೀಯ ಕೊರತೆ ಹೆಚ್ಚಳ
ನೇರ ನಗದು ವರ್ಗಾವಣೆ ಮಾಡುತ್ತಿರುವ ರಾಜ್ಯಗಳಲ್ಲಿ ವಿತ್ತೀಯ ಕೊರತೆ ಹೆಚ್ಚಳ ಆಗುತ್ತಿದೆ. 2023–24ರಲ್ಲಿ ತಮ್ಮ ಆದಾಯದ ಶೇ 5ಕ್ಕಿಂತ ಹೆಚ್ಚು ಮೊತ್ತವನ್ನು ನಗದು ವರ್ಗಾವಣೆಗೆ ಬಳಸುತ್ತಿರುವ ಒಂಬತ್ತು ರಾಜ್ಯಗಳ ಪೈಕಿ ಆರು ರಾಜ್ಯಗಳು ವಿತ್ತೀಯ ಕೊರತೆ ಹೊಂದಿದ್ದವು. ಸಾಲ ಪಡೆಯುವ ಮೂಲಕ ಅಥವಾ ಬಂಡವಾಳ ವೆಚ್ಚ ಕಡಿಮೆ ಮಾಡುವ ಮೂಲಕ ಹೆಚ್ಚಿನ ರಾಜ್ಯಗಳು ನಗದು ವರ್ಗಾವಣೆಗೆ ಹಣಕಾಸು ಒದಗಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.