ADVERTISEMENT

ಅಹಂನಿಂದ ಲಸಿಕಾ ಅಭಿಯಾನಕ್ಕೆ ಹಿನ್ನಡೆ: ನಿರ್ಮಲಾ ಸೀತಾರಾಮನ್‌ ಪತಿ ಪ್ರಭಾಕರ ಟೀಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2021, 21:17 IST
Last Updated 29 ಮೇ 2021, 21:17 IST
ಪ್ರಭಾಕರ
ಪ್ರಭಾಕರ   

ಬೆಂಗಳೂರು: ‘ಕೋವಿಡ್‌ ಲಸಿಕೆ ಅಭಿಯಾನದ ವಿಚಾರದಲ್ಲಿ ಭಾರತವು ದೊಡ್ಡ ಗೊಂದಲದಲ್ಲಿದೆ. ಸುಲಲಿತವಾಗಿ ದೊಡ್ಡ ಪ್ರಮಾಣದ ಲಸಿಕಾ ಅಭಿಯಾನಗಳನ್ನು ನಡೆಸಿದ ಅನುಭವ ಹೊಂದಿರುವ ದೇಶವು ಕೆಲವರ ‘ಅಹಂ’ ಹಾಗೂ ಮುನ್ನೋಟದ ಕೊರತೆಯಿಂದಾಗಿ ಭಾರಿ ಹಿನ್ನಡೆ ಅನುಭವಿಸುದಂತಾಗಿದೆ’ ಎಂದು ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ ಟೀಕಿಸಿದ್ದಾರೆ. ಇವರು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪತಿ.

ತಮ್ಮ ಯೂಟ್ಯೂಬ್‌ ವಾಹಿನಿಯ ‘ಮಿಡ್‌ ವೀಕ್‌ ಮ್ಯಾಟರ್ಸ್‌’ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ದೇಶವು ಲಸಿಕೆಯ ಭಾರಿ ಕೊರತೆ ಎದುರಿಸುತ್ತಿದೆ. ದಿನದಿಂದ ದಿನಕ್ಕೆ ಲಸಿಕೆ ನೀಡುವ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಎಷ್ಟು ಡೋಸ್‌ಗಳು ಲಭ್ಯವಾಗಬಹುದು ಎಂಬುದರ ಬಗ್ಗೆ ಖಚಿತತೆ ಇಲ್ಲ. ಕೇಂದ್ರದ ತಪ್ಪು ನೀತಿಗಳಿಂದಾಗಿ ರಾಜ್ಯಗಳು ಪರದಾಡುವಂತಾಗಿದೆ ವಾಸ್ತವವನ್ನು ಮುಚ್ಚಿಟ್ಟು, ಸಕಾರಾತ್ಮಕತೆಯನ್ನು ತೋರಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ADVERTISEMENT

‘ನನ್ನ ದೃಷ್ಟಿಯಲ್ಲಿ ಕೋವಿಡ್‌ನಿಂದಾಗಿ ಸಾಯುವವರು ಬರಿಯ ಸಂಖ್ಯೆಯಲ್ಲ, ಅವರ ಕುಟಂಬ, ಬಂಧುಗಳು, ಸ್ನೇಹಿತರು ಎಲ್ಲರನ್ನೂ ಕಣ್ಮುಂದೆ ತರಬೇಕು. ದೇಶದ ಜನರಿಗೆ ಇಂಥ ಸ್ಥಿತಿಯನ್ನು ತಂದಿಟ್ಟವರು ನಾನು ನಂಬಿದ ದೇವರೇ ಆಗಿದ್ದರೂ ಅವರನ್ನು ಹೊಣೆಯಾಗಿಸಲು ನಾನು ಬಯಸುತ್ತೇನೆ. ನಮ್ಮ ದೇಶಕ್ಕೆ ಹೀಗೇಕೆ ಮಾಡಿದಿರಿ, ನಮ್ಮನ್ನೇಕೆ ಕುಸಿಯುವಂತೆ ಮಾಡಿದಿರಿ, ಎಂಬ ಪ್ರಶ್ನೆಗೆ ಅವರು ಉತ್ತರ ಕೊಡಬೇಕು’ ಎಂದಿದ್ದಾರೆ.

‘ಅಗಾಧ ಪ್ರಮಾಣದಲ್ಲಿ ಲಸಿಕೆಯ ಅಗತ್ಯ ಇದೆ ಎಂದು ತಿಳಿದಿದ್ದರೂ ದೇಶದ ಎರಡೇ ಎರಡು ತಯಾರಿಕಾ ಸಂಸ್ಥೆಗಳ ಮುಂದೆ ಸರ್ಕಾರ ಇಟ್ಟಿರುವ ಬೇಡಿಕೆ ಸುಮಾರು 31 ಕೋಟಿ ಡೋಸ್‌ ಮಾತ್ರ. ಸರ್ಕಾರದ ಈ ನಡೆಯ ಉದ್ದೇಶವೇನೆಂಬುದು ಅರ್ಥವಾಗುತ್ತಿಲ್ಲ. ಫೈಝರ್‌ ಕಂಪನಿಯು ಭಾರತಕ್ಕೆ ಬರಲು ಆರಂಭದಲ್ಲೇ ಸಿದ್ಧವಿತ್ತು. ಹೀಗಿದ್ದರೂ ಅವಕಾಶ ನೀಡಲಿಲ್ಲವೇಕೆ? ಶೇ 80ರಷ್ಟು ಜನರಿಗೆ ಲಸಿಕೆ ನೀಡಬೇಕಾದರೂ ನಮಗೆ ಕನಿಷ್ಠ 180 ಕೋಟಿ ಡೋಸ್‌ ಬೇಕು. ಇದೇ ತಯಾರಕರನ್ನು ಅವಲಂಬಿಸಬೇಕಾದರೆ ಈ ವರ್ಷದಲ್ಲಿ ಎಲ್ಲರಿಗೂ ಲಸಿಕೆ ನೀಡುವುದು ಅಸಾಧ್ಯ’ ಎಂದಿದ್ದಾರೆ.

ರಾಜ್ಯಗಳಿಗೆ ಅನ್ಯಾಯ
ತಯಾರಿಕಾ ಸಂಸ್ಥೆಗಳಿಂದ ₹ 150ರ ಬೆಲೆಗೆ ಲಸಿಕೆ ಖರೀದಿಸಿದ್ದ ಕೇಂದ್ರವು ರಾಜ್ಯಗಳಿಗೆ ವಿತರಣೆಯ ಸಂದರ್ಭ ಬಂದಾಗ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅನುಮತಿ ನೀಡಿತು. ಕಂಪನಿಗಳು ಏಕಪಕ್ಷೀಯವಾಗಿ ದರವನ್ನು ಹೆಚ್ಚಿಸಿದವು. ಜನರಿಗೆ ಉಚಿತವಾಗಿ ಲಸಿಕೆ ನೀಡಲು ತೀರ್ಮಾನಿಸಿದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಈ ಮೂಲಕ ಅನ್ಯಾಯ ಮಾಡಿದೆ ಎಂದು ಪ್ರಭಾಕರ ಆರೋಪಿಸಿದ್ದಾರೆ.

ರಾಜ್ಯಗಳೇ ಲಸಿಕೆ ಖರೀದಿಸಿ ಜನರಿಗೆ ಕೊಟ್ಟ ಬಳಿಕ, ಪ್ರಧಾನಿಯ ಚಿತ್ರವಿರುವ ಲಸಿಕೆಯ ಪ್ರಮಾಣಪತ್ರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಕೇಂದ್ರ ಸರ್ಕಾರವು ನೈತಿಕವಾಗಿ ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ, ಇವೆಲ್ಲವೂ ವಿಶ್ವಗುರು ಎನಿಸಿಕೊಳ್ಳುವವರ ಲಕ್ಷಣವೇ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.