ADVERTISEMENT

ಪಂಚ ‘ಗ್ಯಾರಂಟಿ’, ಇತರ ಕಲ್ಯಾಣ ಯೋಜನೆ: ಹಣಕಾಸಿನ ಕೊರತೆ ಹುದ್ದೆ ಭರ್ತಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 23:30 IST
Last Updated 25 ಫೆಬ್ರುವರಿ 2026, 23:30 IST
<div class="paragraphs"><p>ವಿಧಾನಸೌಧ </p></div>

ವಿಧಾನಸೌಧ

   

ಬೆಂಗಳೂರು: ಪಂಚ ‘ಗ್ಯಾರಂಟಿ’ಗಳು, ಇತರ ಕಲ್ಯಾಣ ಯೋಜನೆಗಳು, ಆರ್ಥಿಕ ನಿರ್ಬಂಧಗಳ ಕಾರಣಕ್ಕೆ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎನ್ನುವ ಅಭಿಪ್ರಾಯ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗಿದೆ.

ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಗಳ ಮಧ್ಯೆ, ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಹಣ ವೆಚ್ಚ ಮಾಡುತ್ತಿರುವ ಸಂಗತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಆಸಕ್ತಿ ತೋರಿಸದೇ ಇರಲು ಹಣಕಾಸಿನ ಕೊರತೆಯೂ ಕಾರಣ ಎನ್ನಲಾಗುತ್ತಿದೆ.

ADVERTISEMENT

‘ಯುವ ನಿಧಿ’ ಗ್ಯಾರಂಟಿ ಯೋಜನೆಯ ಮೂಲಕ ನಿರುದ್ಯೋಗಿಗಳನ್ನು ಸೆಳೆಯಲು ಆಡಳಿತಾರೂಢ ಕಾಂಗ್ರೆಸ್ ಬಯಸಿತ್ತು. ಪದವಿ ಮುಗಿಸಿದವರಿಗೆ ಪ್ರತಿ ತಿಂಗಳು ₹ 3 ಸಾವಿರ ಮತ್ತು ಡಿಪ್ಲೊಮಾ ಪಡೆದವರಿಗೆ ₹ 1,500 ನಿರುದ್ಯೋಗ ಭತ್ಯೆಯನ್ನು ಸರ್ಕಾರ ನೀಡುತ್ತಿದೆ. ಆದರೆ, ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇದ್ದರೂ, ಭರ್ತಿ ಮಾಡಲು ಸರ್ಕಾರ ತೋರಿಸುತ್ತಿರುವ ನಿರಾಸಕ್ತಿ ಉದ್ಯೋಗಾಂಕ್ಷಿಗಳನ್ನು ಕೆರಳಿಸಿದೆ.

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ, ಆರ್ಥಿಕ ಮಿತವ್ಯಯ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆ ನೇಮಕಾತಿ ವಿಳಂಬಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೇತನದ ಆರ್ಥಿಕ ಹೊರೆ, ವಿಸ್ತರಿಸುತ್ತಿರುವ ಕಲ್ಯಾಣ ಬದ್ಧತೆಗಳು ಮತ್ತು ಮೀಸಲಾತಿಗೆ ಸಂಬಂಧಿಸಿದ ಪರಿಣಾಮಗಳಿಂದಾಗಿ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ನಿಧಾನವಾಗುತ್ತಿದೆ ಎಂದೂ ಅಧಿಕಾರಿಗಳು ಹೇಳುತ್ತಾರೆ.

‘45 ಇಲಾಖೆಗಳಲ್ಲಿ ಮಂಜೂರಾದ ಒಟ್ಟು ಹುದ್ದೆಗಳು 7.74 ಲಕ್ಷ (ಮಂಡಳಿಗಳು ಮತ್ತು ನಿಗಮಗಳು ಸೇರಿದರೆ 11.73 ಲಕ್ಷ ಆಗುತ್ತದೆ). ಮುಂದಿನ ಐದು ವರ್ಷಗಳಲ್ಲಿ, ಎರಡು ಲಕ್ಷ ಹುದ್ದೆಗಳು ಖಾಲಿ ಆಗಲಿವೆ. ಆ ಮೂಲಕ, ಖಾಲಿ ಹುದ್ದೆಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ನೇಮಕಾತಿ ವಿಳಂಬವು ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ನೇಮಕಾತಿಯ ಜೊತೆಗೆ, ಸಿಬ್ಬಂದಿ ತರಬೇತಿ ಕೇಂದ್ರಗಳನ್ನೂ ಉನ್ನತೀಕರಿಸಬೇಕಾದ ಅಗತ್ಯವಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

2025-26ನೇ ಸಾಲಿನ ₹ 4.09 ಲಕ್ಷ ಕೋಟಿಯ ಬಜೆಟ್‌ನಲ್ಲಿ ಸಂಬಳಕ್ಕೆ ₹ 85,860 ಕೋಟಿ ಮತ್ತು ಪಿಂಚಣಿಗೆ ₹ 37,655 ಕೋಟಿ ಬದ್ಧ ವೆಚ್ಚವಾಗಿದೆ. ಇದು ಒಟ್ಟು ಬಜೆಟ್‌ನ ಶೇ 30ರಷ್ಟು ಆಗಿದೆ. ಜೊತೆಗೆ, ಸಾಲಗಳ ಮೇಲಿನ ಬಡ್ಡಿ ₹ 45,600 ಕೋಟಿ, ಐದು ಗ್ಯಾರಂಟಿ ಯೋಜನೆಗಳಿಗೆ ಒಟ್ಟು ₹ 51,034 ಕೋಟಿ ಮತ್ತು ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಗೆ ₹ 42,018 ಕೋಟಿ ಮೀಸಲಿರಿಸಲಾಗಿದೆ. ಉಳಿದಂತೆ ಹೊಸ ನೇಮಕಾತಿ ಅಥವಾ ಅಭಿವೃದ್ಧಿ ಕಾರ್ಯಗಳಿಗಾಗಿ ಯಾವುದೇ ಹೆಚ್ಚುವರಿ ವೆಚ್ಚಕ್ಕೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿಲ್ಲ.

‘ಬಜೆಟ್‌ನಲ್ಲೇ ಘೋಷಣೆ’

ಮೈಸೂರು: ‘ಕೆಲವು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಕುರಿತು ಈ ಬಾರಿಯ ಬಜೆಟ್‌ನಲ್ಲೇ ಘೋಷಣೆ ಮಾಡಲಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

 ‘ನಾವು ನೇಮಕಾತಿ ನಡೆಸುತ್ತಿದ್ದೇವೆ. ಒಳಮೀಸಲಾತಿ ಸಮಸ್ಯೆ ಇದ್ದಿದ್ದರಿಂದ ಸ್ವಲ್ಪ ವಿಳಂಬವಾಗಿದೆ. ಕೊಟ್ಟ ಮಾತಿನಂತೆ ಹುದ್ದೆ ಭರ್ತಿ ಮಾಡುತ್ತೇವೆ’ ಎಂದರು.

‘ಧಾರವಾಡದಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿಗಳೇಕೆ ಇವರನ್ನು (ಬಿಜೆಪಿ ಯವರನ್ನು) ಬಿಟ್ಟು ಬೇರೆಡೆ ಸಭೆ ನಡೆಸಿದರು? ಪ್ರಧಾನಿ ನರೇಂದ್ರ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ರಲ್ಲ ಏನಾಯಿತು? ಅವರು ಅಧಿಕಾರಕ್ಕೆ ಬಂದು 11 ವರ್ಷ ಗಳಾದವು? ಈವರೆಗೆ ಎಷ್ಟು ಉದ್ಯೋಗ ಕೊಡಬೇಕಾಗಿತ್ತು? ನಮ್ಮನ್ನು ಪ್ರಶ್ನಿಸಲು ಅವರಿಗೆ ಯಾವ ನೈತಿಕ ಹಕ್ಕಿದೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.