ADVERTISEMENT

CT Ravi Arrest | ಮಾನಹಾನಿ ಪದ ಬಳಕೆ ಆರೋಪ: ಸಿ.ಟಿ. ರವಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 13:22 IST
Last Updated 19 ಡಿಸೆಂಬರ್ 2024, 13:22 IST
<div class="paragraphs"><p>ಸಚಿವೆ ಲಕ್ಷ್ಮಿ  ಹೆಬ್ಬಾಳಕರ ಅವರಿಗೆ  ಮಾನಹಾನಿ ಪದ ಬಳಕೆದ ಬಳಕೆ ಮಾಡಿ ನಿಂದಿಸಿದ ಆರೋಪದಡಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಅವರನ್ನು ಪೊಲೀಸರು ಗುರುವಾರ&nbsp;ಬಂಧಿಸಿದರು</p><p></p></div>

ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಮಾನಹಾನಿ ಪದ ಬಳಕೆದ ಬಳಕೆ ಮಾಡಿ ನಿಂದಿಸಿದ ಆರೋಪದಡಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಅವರನ್ನು ಪೊಲೀಸರು ಗುರುವಾರ ಬಂಧಿಸಿದರು

   

– ಪ್ರಜಾವಾಣಿ ಚಿತ್ರ

ADVERTISEMENT

ಸುವರ್ಣ ವಿಧಾನಸೌಧ (ಬೆಳಗಾವಿ): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅವಾಚ್ಯ ಪದ ಬಳಸಿ, ನಿಂದಿಸಿದ ಪ್ರಕರಣದಲ್ಲಿ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರನ್ನು ಹಿರೇಬಾಗೇವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಾಪ ಮುಂದೂಡಿದ ವೇಳೆ ರವಿ ಅವರು ಅವಾಚ್ಯ ಪದ ಬಳಸಿದರು ಎನ್ನಲಾಗಿದೆ.

ಪರಿಷತ್ತಿನಲ್ಲಿ ಮಾತಿನ ಚಕಮಕಿ ವೇಳೆ ರವಿ ಆಡಿದ ಮಾತು ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ವಿಧಾನಸೌಧದಿಂದ ಹೊರಗೆ ಹೊರಟು ಪ್ರವೇಶ ದ್ವಾರದ ಕಾರಿಡಾರ್‌ನಲ್ಲಿ ಹೋಗುತ್ತಿದ್ದ ರವಿ ಅವರ ಮೇಲೆ ಕೆಲವರು ನುಗ್ಗಿ ಹಲ್ಲೆಗೆ ಯತ್ನ ನಡೆಸಿದ ಘಟನೆಯೂ ನಡೆಯಿತು.

ಈ ಬೆಳವಣಿಗೆಯ ಮಧ್ಯೆಯೇ, ಹಿರೇಬಾಗೇವಾಡಿ ಠಾಣೆಗೆ ಲಕ್ಷ್ಮೀ ಹೆಬ್ಬಾಳಕರ ದೂರು ನೀಡಿದರು. ರವಿ ಬಳಸಿದ ಆಕ್ಷೇಪಾರ್ಹ ಪದವನ್ನು ಕನ್ನಡದಲ್ಲಿ ಉಲ್ಲೇಖಿಸಿರುವ ಅವರು, ‘ಸಿ.ಟಿ. ರವಿ ಅವರು ತಮ್ಮ ಕಡೆಗೆ ನುಗ್ಗಿ ಬಂದು ಸುಮಾರು 10 ಬಾರಿ ಆ ‘ಆಕ್ಷೇಪಾರ್ಹ’ ಪದ ಬಳಸಿದ್ದಾರೆ. ಅಶ್ಲೀಲವಾಗಿ ಸನ್ನೆ ಕೂಡ ಮಾಡಿ, ಮಾನಹಾನಿ ಮಾಡಿದ್ದಾರೆ’ ಎಂದೂ ದೂರಿದ್ದರು.

ಗೊಂದಲ–ಗದ್ದಲಗಳ ಬಳಿಕ ಸಂಜೆ ಕಲಾಪ ಆರಂಭವಾದ ಬಳಿಕ, ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಅನಿರ್ದಿಷ್ಟ ಕಾಲ ಮುಂದೂಡಿದರು. ಮಾರ್ಷಲ್‌ಗಳು ಹಾಗೂ ಪೊಲೀಸರ ಬಿಗಿ ಭದ್ರತೆಯಲ್ಲಿ ರವಿ ಅವರನ್ನು ಸುರಕ್ಷತೆಯಿಂದ ಹೊರಗೆ ಕರೆದೊಯ್ಯುವಂತೆ ಸಭಾಪತಿ ಸೂಚಿಸಿದರು. ವಿಧಾನಸೌಧದ ದ್ವಾರದ ಬಳಿಗೆ ಭದ್ರತೆಯಲ್ಲಿಯೇ ಬಂದ ರವಿ ಅವರು, ಸಹ ಸದಸ್ಯರ ಜತೆಗೆ ಮೆಟ್ಟಿಲ ಮೇಲೆಯೇ ಧರಣಿ ಕುಳಿತರು. ಮತ್ತೆ, ಬಿಗುವಿನ ವಾತಾವರಣ ಶುರುವಾಯಿತು. ಈ ವೇಳೆ, ಅಲ್ಲಿಗೆ ಬಂದ ಪೊಲೀಸರು ರವಿಯವರನ್ನು ಹೆಗಲ ಮೇಲೆ ಹೊತ್ತುಕೊಂಡು ಕರೆದೊಯ್ದು, ಜೀಪಿಗೆ ಹತ್ತಿಸಿ ಹಿರೇಬಾಗೇವಾಡಿ ಠಾಣೆಗೆ ಕರೆದೊಯ್ದರು. 

ಅಲ್ಲಿ ಕೆಲ ಹೊತ್ತು ಕೂರಿಸಿದ ಪೊಲೀಸರು, ನಂದಗಢ ಠಾಣೆಗೆ ಕರೆದೊಯ್ದರು. ಮತ್ತೆ ಅಲ್ಲಿಂದ ಖಾನಾಪುರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಬಂಧಿಸಿದರು.

ನಡೆದಿದ್ದೇನು?

ಪರಿಷತ್ತಿನ ಶೂನ್ಯವೇಳೆಯ ಬಳಿಕ, ‘ಅಂಬೇಡ್ಕರ್‌ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ಅವಮಾನಕರ ಹೇಳಿಕೆ ನೀಡಿದ್ದಾರೆ’ ಎಂದು ದೂರಿದ ಕಾಂಗ್ರೆಸ್‌ನ ಎಲ್ಲ ಸದಸ್ಯರು ಅಂಬೇಡ್ಕರ್‌ ಭಾವಚಿತ್ರ ಹಿಡಿದು ಚರ್ಚೆಗೆ ಪಟ್ಟು ಹಿಡಿದರು. ಪ್ರತಿಯಾಗಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ ಸೇರಿದಂತೆ ಬಿಜೆಪಿ ಸದಸ್ಯರು ಕೂಡಾ ಅಂಬೇಡ್ಕರ್‌ ಭಾವಚಿತ್ರ ಹಿಡಿದುಕೊಂಡು ‘ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಕಾಂಗ್ರೆಸ್‌’ ಎಂದು ಘೋಷಣೆ ಕೂಗಿದರು. ಸದನದಲ್ಲಿ ಕೋಲಾಹಲ ಉಂಟಾದಾಗ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಮುಂದೂಡಿದರು.

ಕಲಾಪ ಮುಂದೂಡಿದರೂ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಸದನದ ಒಳಗೆ ಪರಸ್ಪರ ಆರೋಪ– ಪ್ರತ್ಯಾರೋಪ ಮುಂದುವರಿಸಿದರು. ಈ ವೇಳೆ, ತಮ್ಮನ್ನು ಟೀಕೆ ಮಾಡಿದ್ದಾರೆ ಎಂದು ಸಿಟ್ಟಾದ ಸಿ.ಟಿ.ರವಿ, ಅವಾಚ್ಯ ಪದ ಬಳಸಿದರು ಎಂದು ಕಾಂಗ್ರೆಸ್ ಸದಸ್ಯರು ದೂರಿದರು. 

‘ಮಾತಿನ ಚಕಮಕಿ ನಡೆಯವಾಗ ನನ್ನ ವಿರುದ್ಧ ರವಿ ಅಸಾಂವಿಧಾನಿಕ ಪದ ಬಳಸಿದ್ದಾರೆ’ ಎಂದು ಲಕ್ಷ್ಮೀ ಹೆಬ್ಬಾಳಕರ ಗಂಭೀರ ಆರೋಪ ಮಾಡಿದರು. ಅಲ್ಲದೆ, ಸದನದಿಂದ ಹೊರಗೆ ಹೋಗಿ ಸಭಾಪತಿಗೆ ದೂರು ನೀಡಿದರು. ಆ ಬೆನ್ನಲ್ಲೇ, ಸಿ.ಟಿ. ರವಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭಾಪತಿಗೆ ಕಾಂಗ್ರೆಸ್ ಸದಸ್ಯರು ಮನವಿ ಮಾಡಿದರು. ಲಕ್ಷ್ಮೀ ಹೆಬ್ಬಾಳಕರ ಅವರು ದೂರು ಸ್ವೀಕರಿಸಿದ ಸಭಾಪತಿ, ಆಡಿಯೊ ವಿಡಿಯೊ ಪರಿಶೀಲನೆಗೆ ಸೂಚನೆ ನೀಡಿದರು. ಏತನ್ಮಧ್ಯೆ, ರವಿಯವರ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದು, ಅವರಿಗೆ ರಕ್ಷಣೆ ಕೊಡಬೇಕು ಎಂದು ಬಿಜೆಪಿ ನಾಯಕರು ಸಭಾಪತಿಗೆ ಮನವಿ ಮಾಡಿದರು. 

ಸಭಾಪತಿ ತಮ್ಮ ಕೊಠಡಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್‌.ಕೆ. ಪಾಟೀಲ, ಪ್ರಿಯಾಂಕ್ ಖರ್ಗೆ, ಎನ್.ಎಸ್‌. ಬೋಜರಾಜು, ಲಕ್ಷ್ಮಿ ಹೆಬ್ಬಾಳಕರ ಜತೆ ಮಾತುಕತೆ ನಡೆಸಿದರು. ನಂತರ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ. ಸಿ.ಟಿ. ರವಿ ಮತ್ತು ಬಿಜೆಪಿ–ಜೆಡಿಎಸ್‌ ಸದಸ್ಯರ ನಡುವೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. 

ಬಳಿಕ ಕಲಾಪ ಆರಂಭವಾಯಿತು. ಅನಿರ್ದಿಷ್ಟ ಕಾಲ ಕಲಾಪವನ್ನು ಸಭಾಪತಿ ಮುಂದೂಡಿದರು. 

ಆತ್ಮಾವಲೋಕನಕ್ಕೆ ಸಭಾಪತಿ ಹೊರಟ್ಟಿ ಸಲಹೆ

ಸಿ.ಟಿ. ರವಿ ವಿರುದ್ಧ ಲಕ್ಷ್ಮಿ ಹೆಬ್ಬಾಳಕರ ಹಾಗೂ ಕಾಂಗ್ರೆಸ್‌ ಸದಸ್ಯರು ನೀಡಿದ ದೂರಿನ ಕುರಿತು ಸದನದಲ್ಲಿ ರೂಲಿಂಗ್‌ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ರವಿ ಅವರು ವಿರುದ್ಧ ಲಕ್ಷ್ಮಿ ಹೆಬ್ಬಾಳಕರ ಮಾಡಿರುವ ಆರೋಪಕ್ಕೆ ಸದಸ್ಯರಾದ ಉಮಾಶ್ರೀ, ಬಲ್ಕೀಸ್‌ ಬಾನು, ನಾಗರಾಜ್‌ ಯಾದವ್‌ ಸಾಕ್ಷ್ಯ ನುಡಿದಿದ್ದಾರೆ. ಪೀಠ ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದರು.

ಪ್ರತಿಯೊಬ್ಬರೂ ಸದನದ ಗೌರವ, ಘನತೆ ಕಾಪಾಡಬೇಕು. ಸದನದ ಒಳಗೆ ಹಾಗೂ ಹೊರಗಿನ ನಡವಳಿಕೆಗಳು ಇತರರಿಗೆ ಮಾದರಿಯಾಗಿರಬೇಕು. ಅಸಾಂವಿಧಾನಿಕ ಪದಗಳ ಬಳಕೆ ಸದನದ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಲು ಅವಕಾಶ ನೀಡಬಾರದು ಎಂದರು. ಸಿ.ಟಿ. ರವಿ ವಿರುದ್ಧ ಹಲ್ಲೆಗೆ ಯತ್ನ ನಡೆಸಿದ ಪ್ರಕರಣ ಕುರಿತು ಬಿಜೆಪಿ–ಜೆಡಿಎಸ್‌ ಸದಸ್ಯರು ನೀಡಿದ ದೂರುಗಳ ಕುರಿತು ಪ್ರಸ್ತಾಪಿಸಿದ ಅವರು, ಇಂತಹ ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದರು. ಸಿ.ಟಿ. ರವಿ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದ ಲಕ್ಷ್ಮೀ ಹೆಬ್ಬಾಳಕರ ಹಾಗೂ ಕಾಂಗ್ರೆಸ್‌ ಸದಸ್ಯರು ಮತ್ತೆ ಆಕ್ರೋಶ ಹೊರಹಾಕಿದರು.‌

ವಿಧಾನಸಭೆಯಲ್ಲಿ ಹಕ್ಕುಬಾಧ್ಯತಾ ಸಮಿತಿಗೆ
ಲಕ್ಷ್ಮಿ ಹೆಬ್ಬಾಳಕರ ಅವರನ್ನು ಸಿ.ಟಿ.ರವಿ ನಿಂದಿಸಿದ ಪ್ರಕರಣವನ್ನು ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶರತ್ ಬಚ್ಚೇಗೌಡ ಪ್ರಸ್ತಾಪಿಸಿದರು. ಇದು ಬಿಜೆಪಿ–ಕಾಂಗ್ರೆಸ್ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು. ಆಗ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು, ‘ಲಕ್ಷ್ಮೀ ಹೆಬ್ಬಾಳಕರ ಅವರು ಈ ಮನೆಯ ಸದಸ್ಯರಾಗಿದ್ದು, ಅವರಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ. ಆದ್ದರಿಂದ ಈ ವಿಷಯವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಬೇಕು’ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಈ ವಿಷಯವನ್ನು ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸಿದರು.

ಸುವರ್ಣಸೌಧದಲ್ಲಿ ಪ್ರಕ್ಷುಬ್ಧ ವಾತಾವರಣ

ಸಿ.ಟಿ.ರವಿ ಆಡಿದ್ದಾರೆ ಎನ್ನಲಾದ ಅವಾಚ್ಯ ಮಾತಿನ ಪ್ರಕರಣವು ಮಧ್ಯಾಹ್ನ ಒಂದು ಗಂಟೆಯ ಬಳಿಕ ಸುವರ್ಣ ವಿಧಾನಸೌಧದ ಆವರಣವನ್ನೇ ಪ್ರಕ್ಷುಬ್ಧ ಪರಿಸ್ಥಿತಿಗೆ ದೂಡಿತು.

ಮಧ್ಯಾಹ್ನದ ಊಟಕ್ಕೆ ಹೊರಗೆ ಹೋಗಿದ್ದ ರವಿ ಅವರು ವಿಧಾನಸೌಧಕ್ಕೆ ವಾಪಸ್ ಬಂದು, ಪ್ರವೇಶ ದ್ವಾರದ ಬಳಿ ಕಾರಿನಿಂದ ಇಳಿಯಲು ಮುಂದಾಗುತ್ತಿದ್ದಂತೆಯೇ ಅವರ ಕಾರಿನೆಡೆಗೆ ನುಗ್ಗಿದ ಹೆಬ್ಬಾಳಕರ ಅವರ ಮಹಿಳಾ ಬೆಂಬಲಿಗರು ಕಾರಿಗೆ ಮುತ್ತಿಗೆ ಹಾಕಿ, ತಮ್ಮ ಕೈಯಿಂದ ಗುದ್ದಿದರು. ರವಿ ವಿರುದ್ಧ ಏರಿದ ಧ್ವನಿಯಲ್ಲಿ ಘೋಷಣೆ ಕೂಗಿದರು. ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಪ್ರತಿಭಟನಕಾರರನ್ನು ಅಲ್ಲಿಂದ ಸ್ವಲ್ಪ ದೂರಕ್ಕೆ ಕರೆದೊಯ್ಯುವಷ್ಟರಲ್ಲಿ ಮತ್ತಷ್ಟು ಜನ ಗುಂಪುಗೂಡಿದರು. ಅವರನ್ನೆಲ್ಲ ವಶಕ್ಕೆ ಪಡೆದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಸುವರ್ಣಸೌಧದ ಒಳ ಪ್ರವೇಶಿಸಿದ ರವಿ ಅವರು, ಉಪಸಭಾಪತಿ ಎಂ.ಕೆ. ಪ್ರಾಣೇಶ್ ಕೊಠಡಿಗೆ ತೆರಳಿದರು. ಅದಾದ ಬಳಿಕ, ಸಭಾಪತಿ ಹೊರಟ್ಟಿ ಅವರು ರವಿ ಅವರನ್ನು ತಮ್ಮ ಕೊಠಡಿಗೆ ಕರೆಯಿಸಿಕೊಂಡು ಮಾಹಿತಿ ಪಡೆದರು. ನಾಲ್ಕುಗಂಟೆ ಸುಮಾರಿಗೆ ಸುವರ್ಣಸೌಧದಿಂದ ಹೊರಟ ರವಿ, ಪ್ರವೇಶ ದ್ವಾರದ ಕಡೆಗೆ ಕಾರಿಡಾರ್‌ನಲ್ಲಿ ಬರುತ್ತಿದ್ದುದನ್ನು ಕಂಡ, ಹೆಬ್ಬಾಳಕರ ಅವರ ಕೆಲವು ಬೆಂಬಲಿಗರು ಅವರ ಕಡೆಗೆ ತಮ್ಮ ಕಾಲನ್ನು ಎತ್ತಿಕೊಂಡು ನುಗ್ಗಿದರು. ಅಲ್ಲಿದ್ದ ಮಾರ್ಷಲ್‌ಗಳು ರವಿ ಅವರಿಗೆ ರಕ್ಷಣೆ ಕೊಟ್ಟು, ವಾಪಸ್ ಉಪಸಭಾಪತಿ ಕೊಠಡಿ ಕಡೆ ಕರೆದೊಯ್ದರು.

ಅಲ್ಲಿಗೆ ಧಾವಿಸಿದ ಮಾರ್ಷಲ್‌ಗಳು ಪ್ರತಿಭಟನಕಾರರನ್ನು ಹೊರದಬ್ಬಿ, ಪ್ರವೇಶದ್ವಾರದ ಬಾಗಿಲು ಬಂದ್‌ ಮಾಡಿದರು. ಹಾಗಿದ್ದರೂ, ಬಗ್ಗದ ಪ್ರತಿಭಟನಕಾರರು ಬಾಗಿಲಿಗೆ ಒದ್ದು, ತಮ್ಮ ಸಿಟ್ಟು ಹೊರಹಾಕಿದರು. ಗುಂಪು ದೊಡ್ಡದಾಗುತ್ತಿದ್ದಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಯಿಸಿಕೊಳ್ಳಲಾಯಿತು. ಸುವರ್ಣಸೌಧದ ಎಲ್ಲ ಬಾಗಿಲುಗಳನ್ನು ಬಂದ್‌ ಮಾಡಿ, ಹೆಚ್ಚಿನ ಮಾರ್ಷಲ್‌–ಪೊಲೀಸರನ್ನು ನಿಯೋಜಿಸಿ ಯಾರೊಬ್ಬರೂ ಒಳ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಯಿತು. ಪರಿಷತ್ತಿನ ಸಭಾಂಗಣ ಇರುವ ಕಡೆಗೆ ಸರ್ಪಗಾವಲು ಹಾಕಿ, ಕೆಲವು ಕಡೆ ಮಾಧ್ಯಮದವರನ್ನೂ ತಡೆಯಲಾಯಿತು.

ಕಲಾಪ ಮುಂದೂಡಿಕೆಯಾಗುವವರೆಗೂ ಬಿಗುವಿನ ವಾತಾವರಣ ಸುವರ್ಣಸೌಧವನ್ನು ಆವರಿಸಿತ್ತು. ಕಲಾಪ ಮುಗಿದು ಒಂದು ಗಂಟೆಯ ಬಳಿಕವಷ್ಟೇ ಪರಿಸ್ಥಿತಿ ತಿಳಿಯಾಯಿತು.

ಕ್ರಿಮಿನಲ್ ಅಪರಾಧ: ಸಿದ್ದರಾಮಯ್ಯ
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಬಗ್ಗೆ ಲಕ್ಷ್ಮೀ ಹೆಬ್ಬಾಳಕರ ಅವರು ವಿಧಾನಪರಿಷತ್ ಸಭಾಪತಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ’ ಎಂದರು. ಸಿ. ಟಿ. ರವಿ ಅವರು ಆರೋಪವನ್ನು ಅಲ್ಲಗಳೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಈ ವಿಚಾರದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಭಾರತ ಮಾತೆಗೆ ಅವಮಾನ’
‘ಬಿಜೆಪಿ ನಾಯಕರು ಸದನದಲ್ಲಿ ನಡೆದುಕೊಂಡ ರೀತಿಗೆ ನಾಚಿಕೆಯಾಗಬೇಕು. ಯಾವಾಗಲೂ ಧರ್ಮ, ಸಂಸ್ಕೃತಿ ಬಗ್ಗೆ ಮಾತನಾಡುವ ಅವರು ಭಾರತ ಮಾತೆಗೆ, ಮಾತೃಭೂಮಿಗೆ ಅಪಮಾನ ಮಾಡಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಏನು ಪ್ರಕರಣ?
ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ(ಬಿಎನ್‌ಎಸ್‌) ಕಲಂ 75ರಡಿ (ಲೈಂಗಿಕ ಕಿರುಕುಳ) ಹಾಗೂ ಬಿಎನ್‌ಎಸ್‌ ಕಲಂ 79ರಡಿ (ಮಹಿಳೆಯ ಮಾನಕ್ಕೆ ಕುಂದು ಉಂಟು ಮಾಡುವ ಉದ್ಧೇಶವಿರುವ ಪದ ಬಳಕೆ ಸನ್ನೆ ಅಥವಾ ಕೃತ್ಯ) ಪ್ರಕರಣ ದಾಖಲಾಗಿದೆ. ಈ ಕಲಂಗಳಡಿ ದಾಖಲಾಗುವ ಪ್ರಕರಣಗಳು ಸಾಬೀತಾದರೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.
ಯಾರು ಏನಂದರು?
ರವಿ ಅವರು ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ‘ಪ್ರಾಸ್ಟಿಟ್ಯೂಟ್‌ ಪದ ಬಳಸಿದರು. ಇದು ದೇಶದ ಮಹಿಳೆಯರಿಗೆ ಮಾಡಿದ ಅಪಮಾನ. ಅಂಥವರನ್ನು ಸದನದಿಂದ ಹೊರಹಾಕಬೇಕು.
–ಉಮಾಶ್ರೀ, ಕಾಂಗ್ರೆಸ್‌ ಸದಸ್ಯೆ
ಇಂತಹ ಮಾತುಗಳನ್ನು ಸದನದಲ್ಲಿ ಕೇಳಿಸಿಕೊಳ್ಳಲೂ ಅಸಹ್ಯವಾಗುತ್ತದೆ. ರಾಹುಲ್‌ ಗಾಂಧಿ ಅವರನ್ನು ಸಿ.ಟಿ. ರವಿ ಡ್ರಗ್ಗಿಸ್ಟ್ ಅಂತಿದ್ದರಿಂದ ಲಕ್ಷ್ಮೀ ಅವರು, ರವಿ ಅವರನ್ನು ಕೊಲೆಗಡುಕ ಎಂದರು. ಅದಕ್ಕೆ ಅಂತಹ ಕೀಳು ಪದ ಬಳಕೆ ಮಾಡಿದರು..
–ಬಲ್ಕೀಸ್‌ ಬಾನು, ಕಾಂಗ್ರೆಸ್‌ ಸದಸ್ಯೆ
ಲಕ್ಷ್ಮೀ ಹೆಬ್ಬಾಳಕರ ಅವರು ಸಿ.ಟಿ. ರವಿಗೆ ಕೊಲೆಗಾರ ಎನ್ನುವ ಪದ ಬಳಕೆ ಮಾಡಿದ್ದಾರೆ. ಆಗ ರವಿ ಕೂಡಾ ಲಕ್ಷ್ಮೀ ಹೆಬ್ಬಾಳಕರಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ..
–ನಾಗರಾಜ್ ಯಾದವ್, ಕಾಂಗ್ರೆಸ್‌ ಸದಸ್ಯ
ಸಭಾಪತಿ ಕಲಾಪವನ್ನು 10 ನಿಮಿಷ ಮುಂದೂಡಿದರು. ಆಗ ಕೊಲೆಗಡುಕ, ಡ್ರಗ್ಗಿಸ್ಟ್ ಪದ ಬಂತು. ಯಾವುದೇ ಅಶ್ಲೀಲ ಪದ ಬಳಕೆ ನನ್ನ ಗಮನಕ್ಕೆ ಬಂದಿಲ್ಲ.
–ಟಿ.ಎ. ಶರವಣ, ಜೆಡಿಎಸ್‌ ಸದಸ್ಯ
ಸುವರ್ಣಸೌಧದ ಒಳಗೇ ಹಲ್ಲೆ ನಡೆಸಲು ಯತ್ನಿಸಿರುವುದು ಗಂಬೀರ ಲೋಪ. ಆವರಣದಲ್ಲೇ ಭದ್ರತೆ ಇಲ್ಲ ಎಂದಾದರೆ, ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ಇದೆ ಎನ್ನುವುದನ್ನು ಗ್ರಹಿಸಬಹುದು.
–ಡಿ.ಎಸ್‌. ಅರುಣ್‌, ಬಿಜೆಪಿ ಸದಸ್ಯ
ಸಿ.ಟಿ. ರವಿ ಕೀಳು ಅಭಿರುಚಿಯ ಪದ ಬಳಸಿಲ್ಲ, ಕಾಂಗ್ರೆಸ್‌ ವಿಷಯಾಂತರ ಮಾಡಲು ಯಾವಾಗಲೂ ಇಂತಹ ತಂತ್ರ ಅನುಸರಿಸುತ್ತದೆ.
–ಎನ್‌. ರವಿಕುಮಾರ್, ಬಿಜೆಪಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.