ADVERTISEMENT

ಅರಣ್ಯ ಒತ್ತುವರಿ | 1,293 ಹೆಕ್ಟೇರ್‌ ಜಾಗ ಪರ್ಯಾಯ: ಕಂದಾಯ ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 15:31 IST
Last Updated 13 ಡಿಸೆಂಬರ್ 2024, 15:31 IST
<div class="paragraphs"><p>ಕೃಷ್ಣ ಬೈರೇಗೌಡ</p></div>

ಕೃಷ್ಣ ಬೈರೇಗೌಡ

   

ಸುವರ್ಣ ವಿಧಾನಸೌಧ (ಬೆಳಗಾವಿ): ‘ಉತ್ತರ ಕನ್ನಡ ಜಿಲ್ಲೆಯಲ್ಲಿ 1978ರ ಪೂರ್ವದ ಅರಣ್ಯ ಒತ್ತುವರಿ ಸಕ್ರಮಕ್ಕೆ ಸಂಬಂಧಿಸಿದ 2,499 ಪ್ರಕರಣಗಳಲ್ಲಿ ಅರಣ್ಯ ನಿವಾಸಿಗಳ ಜಾಗವನ್ನು ಕಂದಾಯ ಇಲಾಖೆಯ ಜಾಗವೆಂದು ಡಿನೋಟಿಫಿಕೇಷನ್‌ ಮಾಡಿ, ಪರ್ಯಾಯವಾಗಿ ಅರಣ್ಯ ಇಲಾಖೆಗೆ ನೀಡಲು 1,293 ಹೆಕ್ಟೇರ್‌ ಪರ್ಯಾಯ ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಶಾಂತಾರಾಮ್‌ ಸಿದ್ಧಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ‘1978ರ ಪೂರ್ವದ ಒಟ್ಟು 4,820 ಅರಣ್ಯ ಒತ್ತುವರಿ ಪ್ರಕರಣಗಳಲ್ಲಿ 4,590 ಪ್ರಕರಣಗಳನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಅವುಗಳಲ್ಲಿ 2,499 ಪ್ರಕರಣಗಳು ಜಿಲ್ಲಾಧಿಕಾರಿಗಳ ಸಮಿತಿಯಿಂದ ಕ್ರಮಬದ್ಧಗೊಂಡಿದ್ದು, ಉಳಿದ 1,298 ಪ್ರಕರಣಗಳು ತಿರಸ್ಕೃತಗೊಂಡಿವೆ’ ಎಂದರು.

ADVERTISEMENT

‘ಕ್ರಮಬದ್ಧಗೊಂಡಿರುವ ಪ್ರಕರಣಗಳಿಗೆ ಅರಣ್ಯವಾಸಿಗಳು ವಾಸಿಸುತ್ತಿರುವ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯೆಂದು ಡಿನೋಟಿಫಿಕೇಷನ್‌ ಮಾಡಬೇಕು. ಹೀಗೆ ಮಾಡಲು ಅರಣ್ಯ ಇಲಾಖೆಗೆ ಸರ್ಕಾರ ಪರ್ಯಾಯವಾಗಿ 1293 ಹೆಕ್ಟೇರ್‌ ಭೂಮಿ ಗುರುತಿಸಿ ಬಿಟ್ಟುಕೊಡಬೇಕಿದ್ದು, ಕಾರ್ಯ ಪ್ರಗತಿಯಲ್ಲಿದೆ. ಒಮ್ಮೆ ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿದರೆ ಅರಣ್ಯವಾಸಿಗಳ ಒತ್ತುವರಿ ಪ್ರಕರಣದ ಭೂಮಿಯನ್ನು ಅರಣ್ಯೀಕರಣಗೊಳಿಸಿ ಅವರಿಗೆ ಹಕ್ಕುಪತ್ರ ನೀಡಬಹುದಾಗಿದೆ. ಅಲ್ಲಿಯವರೆಗೆ ಅವರ ಭೂಮಿ ಅರಣ್ಯ ಎಂದೇ ದಾಖಲೆಯಲ್ಲಿ ತೋರಿಸುತ್ತದೆ. ಆದ್ಯತೆ ಮೇಲೆ ಪರ್ಯಾಯ ಭೂಮಿ ಗುರುತಿಸಿ ನೀಡುವ ಮೂಲಕ ಅರಣ್ಯವಾಸಿಗಳ ನೆರವಿಗೆ ಕ್ರಮ ವಹಿಸಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.