ADVERTISEMENT

ಅರಣ್ಯ | ಭೂ ಮಂಜೂರಾತಿಗೆ ಭಂಗ: 1980ರ ಬಳಿಕ ಭೂಮಿ ಹಂಚಿಕೆ ಪಡೆದವರಿಗೆ ಸಂಕಷ್ಟ

* ಪಟ್ಟಿ ಸಿದ್ಧಪಡಿಸಿ, ವರದಿ ಸಲ್ಲಿಸಲು ಜಿಲ್ಲಾ ಮಟ್ಟದ ಎಸ್ಐಟಿಗೆ ಸೂಚನೆ

ಚಂದ್ರಹಾಸ ಹಿರೇಮಳಲಿ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
<div class="paragraphs"><p>ಅರಣ್ಯ </p></div>

ಅರಣ್ಯ

   

ಬೆಂಗಳೂರು: ಅಧಿಸೂಚಿತ ಅರಣ್ಯ ಪ್ರದೇಶಗಳಲ್ಲಿ 1980ರ ನಂತರ ಖಾಸಗಿ ವ್ಯಕ್ತಿಗಳು, ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಮಂಜೂರು ಮಾಡಿದ ಎಲ್ಲ ಭೂಮಿಯೂ ಕಾನೂನು ಬಾಹಿರವಾಗಿದ್ದು, ಇಂತಹ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಮಟ್ಟದ ವಿಶೇಷ ತನಿಖಾ ತಂಡಗಳಿಗೆ (ಎಸ್‌ಐಟಿ) ಸರ್ಕಾರ ಸೂಚಿಸಿದೆ.

ಜಿಲ್ಲಾ ಮಟ್ಟದ ಎಸ್‌ಐಟಿಗಳು ನಿರ್ವಹಿಸಬೇಕಾದ ಕಾರ್ಯವಿಧಾನ ಕುರಿತು ಅರಣ್ಯ ಇಲಾಖೆಯು ಹೊರಡಿಸಿದ ಸುತ್ತೋಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಅಧಿಸೂಚಿತ ಅರಣ್ಯ ಪ್ರದೇಶಗಳಲ್ಲಿ ಹಂಚಿಕೆ, ಮಂಜೂರು ಮಾಡಿದ ಪ್ರದೇಶಗಳ ಪಟ್ಟಿಯನ್ನು ರಾಜ್ಯ ಮಟ್ಟದ ವಿಶೇಷ ತನಿಖಾ ತಂಡಕ್ಕೆ ಸಲ್ಲಿಸುವಂತೆ ಹೇಳಿದೆ.

ADVERTISEMENT

ಅರಣ್ಯ ಸಂರಕ್ಷಣಾ ಕಾಯಿದೆ–1980ರ ಪೂರ್ವದಲ್ಲಿ ಕಂದಾಯ ಇಲಾಖೆಯು ಅಧಿಸೂಚಿತ ಅರಣ್ಯ ಪ್ರದೇಶಗಳಲ್ಲಿ ಮಾಡಿರುವ ಮಂಜೂರಾತಿಯನ್ನು ಸಕ್ಷಮ ಪ್ರಾಧಿಕಾರದಿಂದ ಮಾಡಲಾಗಿದೆಯೇ? ಒಂದು ವೇಳೆ ಸಕ್ಷಮ ಪ್ರಾಧಿಕಾರದಿಂದ ಮಂಜೂರು ಮಾಡಿದ್ದರೆ ಅಂತಹ ಅಧಿಕಾರವನ್ನು ಯಾವ ಕಾಯ್ದೆ, ನಿಯಮ, ಆದೇಶಗಳ ಮೂಲಕ ನೀಡಲಾಗಿದೆ ಎನ್ನುವ ಕುರಿತು ದಾಖಲೆಗಳನ್ನು ಸಂಗ್ರಹಿಸಬೇಕು. ಕಂದಾಯ ಇಲಾಖೆಯ ಸಕ್ಷಮ ಪ್ರಾಧಿಕಾರ ಹೊರತುಪಡಿಸಿ, ಇತರೆ ಪ್ರಾಧಿಕಾರಗಳು ಮಂಜೂರು ಮಾಡಿದ ವಿವರಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. 

1996ರ ನಂತರ ಸರ್ಕಾರಿ ದಾಖಲೆಗಳಲ್ಲಿ ಅರಣ್ಯ ಎಂದು ನಮೂದಿಸಿರುವ ಪ್ರದೇಶಗಳಲ್ಲಿ ಕಂದಾಯ ಇಲಾಖೆ ಭೂ ಮಂಜೂರಾತಿ ಮಾಡಿದ್ದರೆ ಅಂತಹ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಸೂಕ್ತ ಶಿಫಾರಸುಗಳೊಂದಿಗೆ ರಾಜ್ಯಮಟ್ಟದ ವಿಶೇಷ ತನಿಖಾ ತಂಡಕ್ಕೆ ಸಲ್ಲಿಸಬೇಕು ಎಂದು ವಿವರಿಸಲಾಗಿದೆ.

ಡಿಸಿಎಫ್‌ಗಳಿಗೆ ಹೊಣೆ: ಕಂದಾಯ ಇಲಾಖೆ ವ್ಯಕ್ತಿ, ಸಂಸ್ಥೆಗಳಿಗೆ ಮಂಜೂರು ಮಾಡಿದ ಭೂಮಿಯ ವಿವರ, ದಾಖಲೆಗಳ ಪಟ್ಟಿಯನ್ನು ಆಯಾ ಕಾರ್ಯವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಸಿಎಫ್‌) ವಿಶೇಷ ತನಿಖಾ ತಂಡಕ್ಕೆ ಒದಗಿಸಬೇಕು. ಪಟ್ಟಿಯಲ್ಲಿನ ಮಾಹಿತಿಯನ್ನು ತನಿಖಾ ತಂಡಗಳು ಪರಿಶೀಲನೆಗೆ ಮಾತ್ರ ಬಳಸಬೇಕು. ಆ ಪಟ್ಟಿಯೇ ಅಂತಿಮ ಎಂದು ತೀರ್ಮಾನಿಸಬಾರದು. ಎಲ್ಲ ವಿವರಗಳನ್ನು ಒಳಗೊಂಡ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ, ಸೂಕ್ತ ಶಿಫಾರಸು ಮಾಡಬೇಕು. ಜಿಲ್ಲಾ ತನಿಖಾ ತಂಡಗಳು ತಿಂಗಳಿಗೆ ಕನಿಷ್ಠ ಎರಡು ಬಾರಿ ಸಭೆ ನಡೆಸಬೇಕು. ಈ ಎಲ್ಲ ಕಾರ್ಯಗಳನ್ನು ಎರಡು ಹಂತಗಳಲ್ಲಿ ತ್ವರಿತವಾಗಿ ಪೂರ್ಣಗೊಳಿಸಬೇಕು. ನಾಲ್ಕು ತಿಂಗಳ ಒಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಅಧಿಸೂಚಿತ ಅರಣ್ಯ ಎಂದರೆ...

ಅಧಿಸೂಚಿತ ಅರಣ್ಯ ಎಂದರೆ ರಾಜ್ಯ ಸರ್ಕಾರವು ತನ್ನ ಆದೇಶದ ಮೂಲಕ ಅರಣ್ಯದ ಗಡಿಗಳನ್ನು ಸ್ಪಷ್ಟವಾಗಿ ನಿಗದಿಪಡಿಸಿದ ಪ್ರದೇಶ (ಕಾಯ್ದಿರಿಸಿದ ಅರಣ್ಯ). ಈ ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಅನುಮತಿ ಇಲ್ಲದೆ ಯಾವುದೇ ಚಟುವಟಿಕೆ ನಡೆಸುವುದನ್ನು ನಿಷೇಧಿಸಲಾಗಿದೆ.

ಅರಣ್ಯ ಸಂರಕ್ಷಣಾ ಕಾಯಿದೆ–1980 ಭಾರತದಲ್ಲಿ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬಳಸುವುದನ್ನು ನಿಯಂತ್ರಿಸುವ ಒಂದು ಕಾನೂನು. ಇದರ ಮುಖ್ಯ ಉದ್ದೇಶವು ಅರಣ್ಯನಾಶ ತಡೆಯುವುದು ಮತ್ತು ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ರಾಜ್ಯ ಸರ್ಕಾರಗಳು ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡುವುದನ್ನು ನಿರ್ಬಂಧಿಸುವುದಾಗಿದೆ.

ದಂಡ ವಸೂಲಿಗೆ ಮಾರ್ಗಸೂಚಿ ದರ

ಕಾನೂನುಬಾಹಿರವಾಗಿ ಮಂಜೂರು ಮಾಡಿದ ಪ್ರತಿ ಪ್ರಕರಣ ಪಟ್ಟಿ ಮಾಡಿ, ಅಂತಹ ಪ್ರದೇಶಗಳನ್ನು ಮರಳಿ ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಮಂಜೂರಾತಿ ನೀಡಿದ ಅರಣ್ಯ ಪ್ರದೇಶವನ್ನು ಮರಳಿ ವಶಕ್ಕೆ ಪಡೆಯುವುದು ಸಾರ್ವಜನಿಕ ಹಿತದೃಷ್ಟಿಯಿಂದ ಪೂರಕವಲ್ಲದಿದ್ದರೆ, ಸರ್ಕಾರದ ಮಾರ್ಗಸೂಚಿ ದರಗಳ ಅನುಸಾರ ಭೂಮಾಲೀಕರಿಂದ
ದಂಡ ವಸೂಲಿ ಮಾಡುವುದೂ ಸೇರಿದಂತೆ ಅಳಡಿಸಿಕೊಳ್ಳಬಹುದಾದ ವಿಧಾನದ ಕುರಿತು ವರದಿಯಲ್ಲಿ ಉಲ್ಲೇಖಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ. 

ಕರ್ನಾಟಕ ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರವು ಅರಣ್ಯ ಭೂಮಿಗಳ ಕ್ರೋಡೀಕೃತ ದಾಖಲೆಗಳನ್ನು ತಯಾರಿಸಲು ಅಭಿವೃದ್ಧಿಪಡಿಸಲಾದ ಪೋರ್ಟಲ್‌ ಅನ್ನು ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ಸಂಖ್ಯೆ, ವಿಸ್ತೀರ್ಣವನ್ನು ಗುರುತಿಸಲು ಉಪಯೋಗಿಸಿಕೊಳ್ಳಲು ಹೇಳಿದೆ.