ADVERTISEMENT

ನೀರಿನಲ್ಲಿ ಮುಳುಗಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹತ್ಯೆ

ಕಬಿನಿ ಹಿನ್ನೀರಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 20:08 IST
Last Updated 25 ಏಪ್ರಿಲ್ 2020, 20:08 IST
 ಮೃತ ಮಹೇಶ್
 ಮೃತ ಮಹೇಶ್   

ಎಚ್‌.ಡಿ.ಕೋಟೆ: ತಾಲ್ಲೂಕಿನ ಗುಂಡ್ರೆ ವನ್ಯಜೀವಿ ಅರಣ್ಯ ವಲಯದಲ್ಲಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದವರನ್ನು ಹಿಡಿಯಲು ತೆರಳಿದ್ದ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಶುಕ್ರವಾರ ರಾತ್ರಿ ಕಬಿನಿ ಹಿನ್ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಲಾಗಿದೆ.

‘ತೆಪ್ಪದಲ್ಲಿ ಹೋಗುತ್ತಿದ್ದ ಈ ಸಿಬ್ಬಂದಿಯ ಮೇಲೆ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದ್ದು, ನೀರಿನಲ್ಲಿ ಮುಳುಗಿಸಿ ಪರಾರಿಯಾಗಿದ್ದಾರೆ’ ಎಂದು ಎಸಿಎಫ್ ಪರಮೇಶ್‌ ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಪುಣಜನೂರು ಗ್ರಾಮದ‌ ಮಹೇಶ್ (ಕೇರ್‌ ಟೇಕರ್‌) ಮತ್ತು ಎಚ್‌.ಡಿ.ಕೋಟೆ ತಾಲ್ಲೂಕಿನ ಬ್ರಹ್ಮಗಿರಿ ಗ್ರಾಮದ ಶಿವಕುಮಾರ್ (ಹೊರಗುತ್ತಿಗೆ ಸಿಬ್ಬಂದಿ) ಮೃತಪಟ್ಟವರು. ಮಹೇಶ್ (26) ಮೃತದೇಹ ಪತ್ತೆಯಾಗಿದೆ. ಶಿವಕುಮಾರ್ (33) ಮೃತ ದೇಹಕ್ಕಾಗಿ ಶೋಧ ಮುಂದುವರಿದಿದೆ.

ADVERTISEMENT

ಹಿನ್ನೀರಿನಲ್ಲಿ ಹಾಕಲಾಗಿದ್ದ ಬಲೆಯನ್ನು ಸಿಬ್ಬಂದಿ ತೆಗೆಯುತ್ತಿದ್ದಾಗ 10 ರಿಂದ 15 ತೆಪ್ಪಗಳಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆಗ ಮಹದೇವ್‌, ಮಹೇಶ್‌, ಬೊಮ್ಮ ಹಾಗೂ ಶಿವಕುಮಾರ್ ಅವರಿದ್ದ ತೆಪ್ಪಮುಳುಗಿದೆ. ಮಹದೇವ್‌ ಈಜಿ ದಡಸೇರಿದ್ದಾರೆ. ಬೊಮ್ಮ ಅವರನ್ನು ಇತರೆ ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆ ಕುರಿತ ಹೆಚ್ಚಿನ ಮಾಹಿತಿಗೆ ಡಿಆರ್‌ಎಫ್‌ಒ ಕುಮಾರಸ್ವಾಮಿ ಹಾಗೂ ಬೊಮ್ಮ ಅವರ ಮೊಬೈಲ್‌ ಸಂಖ್ಯೆಗೆ ಕರೆ ಮಾಡಲು ಪ್ರಯತ್ನಿಸಲಾಯಿತು. ಆದರೆ, ಇಬ್ಬರೂ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.