
ಚಿತ್ರದುರ್ಗ: ‘ಒಳ ಮೀಸಲಾತಿ ಅನ್ವಯ ವಿಶ್ವವಿದ್ಯಾಲಯದ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುವಾಗ ಇಡೀ ವಿ.ವಿ.ಯನ್ನೇ ಘಟಕವನ್ನಾಗಿ ಪರಿಗಣಿಸುವ ನಿರ್ಧಾರ ಕೈಗೊಂಡಿರುವುದು ಸಂವಿಧಾನ ವಿರೋಧಿ ನಡೆ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಟೀಕಿಸಿದ್ದಾರೆ.
‘ವಿ.ವಿ.ಯನ್ನೇ ಘಟಕವಾಗಿ ಪರಿಗಣಿಸುವ ಕುರಿತು ಸಚಿವ ಡಾ.ಎಚ್.ಸಿ. ಮಹದೇವಪ್ಪ ಪ್ರಕಟಿಸಿದ್ದಾರೆ. ಸಂಪುಟ ಉಪ ಸಮಿತಿಯ ನಿರ್ಧಾರವನ್ನು ಕೂಡಲೇ ವಾಪಸ್ ಪಡೆದುಕೊಳ್ಳಬೇಕು’ ಎಂದು ಬುಧವಾರ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲವು ದಶಕಗಳ ಹೋರಾಟದ ನಂತರ ಈಗಷ್ಟೇ ಒಳಮೀಸಲಾತಿ ಪಡೆದುಕೊಳ್ಳಲಾಗಿದೆ. ‘ಎ’ ವರ್ಗದಲ್ಲಿರುವ ದಲಿತ ಎಡಗೈ ಸಮುದಾಯದವರಿಗೆ ನ್ಯಾಯಯುತವಾಗಿ ಹುದ್ದೆಗಳು ದೊರೆತರೆ ಕೊಟ್ಟೆಕಿಚ್ಚು ಪಡುವುದು ಸಾಮಾಜಿಕ ನ್ಯಾಯವಲ್ಲ’ ಎಂದರು.
‘ರಾಜ್ಯದ ವಿ.ವಿ.ಗಳಲ್ಲಿ ಯಾವ ಜಾತಿಯವರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದರೆ ಸತ್ಯ ತಿಳಿಯುತ್ತದೆ. ಸಂಪುಟ ಉಪ ಸಮಿತಿ ಸಭೆಯಲ್ಲಿ ಮಾದಿಗ ವಿರೋಧಿ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಯು ಕೂಡಲೇ ಮಧ್ಯಪ್ರವೇಶಿಸಿ ಗೊಂದಲ ಸರಿಪಡಿಸಬೇಕು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.