ADVERTISEMENT

ದೇವೇಗೌಡರಿಗೆ ದುರಾಸೆ, ಸಿದ್ದರಾಮಯ್ಯಗೆ ದ್ವೇಷ: ಮಾಜಿ ಸ್ಪೀಕರ್‌ ಕೃಷ್ಣ

ಇಂದಿನ ರಾಜಕೀಯ ಪರಿಸ್ಥಿತಿಗೆ ಕಾಂಗ್ರೆಸ್‌–ಜೆಡಿಎಸ್‌ ಮುಖಂಡರ ಕಲಹವೇ ಕಾರಣ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 15:07 IST
Last Updated 28 ಜುಲೈ 2019, 15:07 IST
ಕೆ.ಆರ್‌.ಪೇಟೆ ಕೃಷ್ಣ
ಕೆ.ಆರ್‌.ಪೇಟೆ ಕೃಷ್ಣ   

ಮಂಡ್ಯ: ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಆಸೆ, ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅವರ ದ್ವೇಷದಿಂದ ಸಮ್ಮಿಶ್ರ ಸರ್ಕಾರ ಬಿದ್ದಿದೆ. ಅಧಿಕಾರ ಹಂಚಿಕೊಂಡು ಆಡಳಿತ ನಡೆಸಿದ್ದರೆ ಸಮ್ಮಿಶ್ರ ಸರ್ಕಾರ ಬೀಳುತ್ತಿರಲಿಲ್ಲ’ ಎಂದು ಮಾಜಿ ಸ್ಪೀಕರ್‌ ಕೆ.ಆರ್‌.ಪೇಟೆ ಕೃಷ್ಣ ಭಾನುವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸ್ಪೀಕರ್‌ ನಿರ್ಧಾರದ ವಿರುದ್ಧ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ, ನಿಜ. ಆದರೆ ರಾಜ್ಯದ ಇಂದಿನ ರಾಜಕೀಯ ಪರಿಸ್ಥಿತಿಗೆ ಕಾಂಗ್ರೆಸ್‌–ಜೆಡಿಎಸ್‌ ಮುಖಂಡರ ನಡವಳಿಕೆಗಳೇ ಕಾರಣ. ಎಲ್ಲರೂ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ, ಪ್ರಜಾಪ್ರಭುತ್ವಕ್ಕೆ ಏನೂ ಆಗಿಲ್ಲ. ಆದರೆ ಜೆಡಿಎಸ್‌–ಕಾಂಗ್ರೆಸ್‌ ನಾಯಕರ ಆಂತರಿಕ ಕಲಹದಿಂದ ಅನಿಶ್ಚಿತತೆ ಉಂಟಾಗಿದೆ’ ಎಂದು ಹೇಳಿದರು.

‘ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೊಂಡಿದ್ದರೆ ಯಾರೂ ರಾಜೀನಾಮೆ ಕೊಡುತ್ತಿರಲಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಅವಧಿ ಮುಗಿಯುವವರೆಗೂ ಕಾಂಗ್ರೆಸ್‌ ಶಾಸಕರು ಕಾಯುತ್ತಿದ್ದರು. ಎಚ್‌.ಡಿ.ರೇವಣ್ಣ ಅವರಿಗೂ ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟು ಆಸೆ ಪೂರೈಸಬಹುದಾಗಿತ್ತು. ಆದರೆ ದೇವೇಗೌಡರು ಎಲ್ಲವೂ ತಮ್ಮ ಕುಟುಂಬಕ್ಕೇ ಬೇಕು ಎಂದು ಆಸೆ ಪಟ್ಟರು. ಕಾಂಗ್ರೆಸ್‌ ಮುಖಂಡರ ವಿರುದ್ಧ ರಾಹುಲ್‌ ಗಾಂಧಿಗೆ ದೂರು ನೀಡುತ್ತಿದ್ದರು. ಈ ತಿಕ್ಕಾಟದಿಂದ ಸರ್ಕಾರ ಬಿದ್ದು ಹೋಯಿತು’ ಎಂದರು.

ADVERTISEMENT

‘ದೇವೇಗೌಡರು ತಮ್ಮ 60 ವರ್ಷ ರಾಜಕೀಯ ಅನುಭವದ ಬಗ್ಗೆ ಮಾತನಾಡುತ್ತಾರೆ. ಅದರೆ ಅವರಿಗೆ ದುರಾಸೆಯೇ ಹೆಚ್ಚು. ಸಿದ್ದರಾಮಯ್ಯ ಅವರಿಗೆ ದ್ವೇಷ, ಅಸೂಯೆ. ಸೇಡು ತೀರಿಸಿಕೊಳ್ಳಲು ಅವರು ಕಾಯುತ್ತಿದ್ದರು. ಇವರಿಬ್ಬರ ನಡುವಿನ ಕಲಹದಿಂದ ಅಧಿಕಾರ ಕಳೆದುಕೊಂಡರು. ಮೋದಿ ಅಲೆಯಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಪಕ್ಷ ಕಟ್ಟುವುದು ಬಹಳ ಕಷ್ಟ’ ಎಂದರು.

‘ನಾನು ಸ್ಪೀಕರ್‌ ಆಗಿದ್ದಾಗ ಕೈಗೊಂಡ ತೀರ್ಮಾನದಿಂದ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಸದನ ಆರ್ಡರ್‌ನಲ್ಲಿ ಇಲ್ಲ ಎಂದು ರಾಜ್ಯಪಾಲರಿಗೆ ವರದಿ ಕೊಟ್ಟಕಾರಣ ಧರಂಸಿಂಗ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.