ADVERTISEMENT

ಜಾರಕಿಹೊಳಿ ರಾಜೀನಾಮೆ ನೀಡುವುದಾಗಿ ಹೇಳುತ್ತಿದ್ದಾರೆ; ಕಾದು ನೋಡುತ್ತೇವೆ: ಡಿಸಿಎಂ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 6:14 IST
Last Updated 26 ಏಪ್ರಿಲ್ 2019, 6:14 IST
   

ಬೆಳಗಾವಿ: ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮಾಧ್ಯಮದವರ ಮುಂದೆ ಹಲವು ದಿನಗಳಿಂದಲೂ ಹೇಳುತ್ತಿದ್ದಾರೆ. ಅವರು ರಾಜೀನಾಮೆ ಕೊಟ್ಟರೆ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಅಥವಾ ಪಕ್ಷದಲ್ಲಿಯೇ ಉಳಿದರೆ ಅವರಿಗೆ ಏನು ಕೆಲಸ ಕೊಡಬೇಕು ಎಂದು ಯೋಚಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಖಾನಾಪುರದಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿರುವ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಬಂಡಾಯವನ್ನು ಪಕ್ಷ ಸರಿಪಡಿಸುತ್ತದೆ. ಅವರು‌ ಗುರುವಾರ ಬೆಂಗಳೂರಲ್ಲೇ ಇದ್ದರೂ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಶತಮಾನದ ಇತಿಹಾಸವಿರುವ ಪಕ್ಷ ಕಾಂಗ್ರೆಸ್. ನಾನು ಪಕ್ಷಕ್ಕೆ ಏನಾದರೂ ಮಾಡಿಬಿಡುತ್ತೇನೆ ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲದ ಮಾತಷ್ಟೇ. ನನ್ನಂತಹ ಹಲವು ಮಂದಿ ಇಲ್ಲಿ ಬಂದು ಹೋಗಿದ್ದಾರೆ. ವೈಯಕ್ತಿಕ ವಿಚಾರಗಳನ್ನು ಪಕ್ಷದ ಮಟ್ಟಕ್ಕೆ ತರುವುದು ಸರಿಯಲ್ಲ ಎಂದು ಟಾಂಗ್ ನೀಡಿದರು.

ADVERTISEMENT

ಗುರುವಾರ ನಾನು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಚರ್ಚಿಸಿದ್ದೇವೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸುಭದ್ರವಾಗಿದೆ ಎಂದು ಪ್ರತಿಕ್ರಿಯಿಸಿದರು.

ಆಡಿಯೋವಿಚಾರ ನನಗೆ ಗೊತ್ತಿಲ್ಲ.
ದರ್ಶನ ಅನ್ನೋ ಹುಡಗ ನನ್ನ ಜತೆಗೆ ಓಡಾಡುತ್ತಿದ್ದ.ಅವನ ಮೇಲೆ ಕ್ರಮ ತೆಗೆದುಕೊಳ್ಳಬೇಕು.ಅನವಶ್ಯವಾಗಿ ಈ ರೀತಿ ಹೇಳಿಕೆ ನೀಡುವುದು,ಗೊಂದಲ ಉಂಟು ಮಾಡುವುದು ಸರಿಯಲ್ಲ. ದರ್ಶನ್ ಬಳಿ ಪುರಾವೆ ಇದ್ದರೆ ಹೇಳಬೇಕು. ಆಡಿಯೊ ಬಗ್ಗೆ ನನಗೆ ಗೊತ್ತಿಲ್ಲ.

ರಾಜಣ್ಣ ಅವರಿಂದ ಹಣ ತೆಗೆದುಕೊಂಡು ತಮ್ಮ ಪಕ್ಷದ ಕೆಲಸ ಮಾಡಬೇಕಾದ ಸ್ಥಿತಿಯಲ್ಲಿ ಮುದ್ದುಹನುಮೇಗೌಡ ಇಲ್ಲ. ಅವರು ಬಹಳ ವರ್ಷದಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಸ್ಥಾನಮಾನ ಗಳಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.