ಜಿಬಿಎ
ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿಯು ಅಕ್ಟೋಬರ್‌ನಲ್ಲೇ ಸಂಯೋಜಕರ ತಂಡವನ್ನು ರಚಿಸಿದೆ. ವಿವಿಧ ಕಡೆಗಳಲ್ಲಿ ಸಭೆ, ಸಮಾವೇಶಗಳನ್ನೂ ನಡೆಸುತ್ತಿದೆ.
ತಂಡದಲ್ಲಿ ಬಿ.ವೈ.ವಿಜಯೇಂದ್ರ, ಆರ್.ಅಶೋಕ, ಛಲವಾದಿ ನಾರಾಯಣ ಸ್ವಾಮಿ, ಡಿ.ವಿ.ಸದಾನಂದಗೌಡ, ಎಸ್.ಸುರೇಶ್‌ಕುಮಾರ್, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಡಾ.ಸಿ.ಎನ್.ಮಂಜುನಾಥ್, ತೇಜಸ್ವಿ ಸೂರ್ಯ, ಡಾ.ಕೆ.ಸುಧಾಕರ್ ಮತ್ತು ಎನ್.ಎಸ್.ನಂದೀಶ್ ರೆಡ್ಡಿ ಇದ್ದಾರೆ. ವಿವಿಧ ಪಾಲಿಕೆಗಳ ಚುನಾವಣೆ ಮುನ್ನಡೆಸಲು ಪ್ರಮುಖರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
ಬೆಂಗಳೂರು ಪೂರ್ವ– ಎಂ.ಟಿ.ಬಿ.ನಾಗರಾಜ್, ಕೆ.ಎಸ್.ನವೀನ್
ಬೆಂಗಳೂರು ಉತ್ತರ– ಮುನಿರತ್ನ, ಭಾರತಿಶೆಟ್ಟಿ
ಬೆಂಗಳೂರು ದಕ್ಷಿಣ–ಬೈರತಿ ಬಸವರಾಜ, ಎನ್.ರವಿಕುಮಾರ್
ಬೆಂಗಳೂರು ಕೇಂದ್ರ– ಡಾ.ಸಿ.ಎನ್.ಅಶ್ವತ್ಥನಾರಾಯಣ, ಡಿ.ಎಸ್.ಅರುಣ್
ಬೆಂಗಳೂರು ಪಶ್ಚಿಮ– ಕೆ.ಗೋಪಾಲಯ್ಯ, ಎ.ನಾರಾಯಣ ಸ್ವಾಮಿ, ಅಶ್ವತ್ಥನಾರಾಯಣ ಗೌಡ
ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಸ್ಪರ್ಧಾಕಾಂಕ್ಷಿಗಳಿಂದ ಅರ್ಜಿಯನ್ನೂ ಆಹ್ವಾನಿಸಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಆಸಕ್ತಿ ತೋರಿ ಬೆಂಗಳೂರು ಪಶ್ಚಿಮ ಪಾಲಿಕೆಯಲ್ಲಿ 247, ಉತ್ತರದಲ್ಲಿ 199, ದಕ್ಷಿಣದಲ್ಲಿ 129, ಕೇಂದ್ರದಲ್ಲಿ 106, ಪೂರ್ವದಲ್ಲಿ 78 ಮಂದಿ ಈಗಾಗಲೇ ಅರ್ಜಿಗಳನ್ನು ಪಡೆದುಕೊಂಡಿದ್ದಾರೆ. ವಾರ್ಡ್‌ಗಳಲ್ಲಿ ಯಾರು ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ, ಯಾರು ಪಕ್ಷಕ್ಕೆ ನಿಷ್ಠರಾಗಿದ್ದಾರೆಂದು ಪರಿಶೀಲಿಸಿ ಟಿಕೆಟ್ ನೀಡಲು ಕಾಂಗ್ರೆಸ್‌ನಲ್ಲಿ ಚರ್ಚೆ ನಡೆದಿದೆ.
ಚುನಾವಣೆ ಸಿದ್ಧತೆಗಾಗಿ, ಸಚಿವರು, ಪಕ್ಷದ ಸಂಸದರು, ಶಾಸಕರು, ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ನಿಗಮ ಮಂಡಳಿ ಅಧ್ಯಕ್ಷರ ಸಭೆಯನ್ನು ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್ ಹಾಲ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳವಾರ (ಜ.13) ಆಯೋಜಿಸಿದ್ದಾರೆ.
ಪಾಲಿಕೆಗಳ ಚುನಾವಣೆಗೆ ಜೆಡಿಎಸ್ ಈಗಾಗಲೇ ಅಣಿಯಾಗುತ್ತಿದ್ದು, 10ಕ್ಕೂ ಹೆಚ್ಚು ಪೂರ್ವಸಿದ್ಧತಾ ಸಭೆಗಳನ್ನು ನಡೆಸಿದೆ.
ಟಿಕೆಟ್ ಆಕಾಂಕ್ಷಿಗಳ ಸಭೆ ಕರೆದು ಚರ್ಚಿಸಿರುವ ಪಕ್ಷದ ಸ್ಥಳೀಯ ನಾಯಕರು, ಟಿಕೆಟ್ ಬಯಸುವ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ ಗೌಡ ಹಾಗೂ ವಿವಿಧ ಪ್ರಮುಖ ಘಟಕಗಳ ಮುಖ್ಯಸ್ಥರ ಸಭೆ ಜ.16ಕ್ಕೆ ನಿಗದಿಯಾಗಿದೆ.
ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಕುರಿತು ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ನಿರ್ಧಾರ ಮಾಡಲಿದ್ದಾರೆ. ನಂತರವಷ್ಟೇ ಸ್ಪರ್ಧೆಯ ಕುರಿತು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.