ADVERTISEMENT

ದೆಹಲಿ‌ ಜಮಾತ್​​ಗೆ ಹೋಗಿ ಬಂದವರು ಸ್ವಯಂಪ್ರೇರಿತರಾಗಿ‌ ಮಾಹಿತಿ ಕೊಡಿ: ಅಬ್ದುಲ್​

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 8:55 IST
Last Updated 18 ಏಪ್ರಿಲ್ 2020, 8:55 IST
ಸಭೆ ಮುಗಿಸಿ ಹೊರಡುತ್ತಿರುವ ತಬ್ಲಿಗಿ ಜಮಾತ್‌ ಕಾರ್ಯಕರ್ತರು
ಸಭೆ ಮುಗಿಸಿ ಹೊರಡುತ್ತಿರುವ ತಬ್ಲಿಗಿ ಜಮಾತ್‌ ಕಾರ್ಯಕರ್ತರು   

ಬೆಂಗಳೂರು: ‘ಕೊರೊನಾ ಇರಲಿ, ಬಿಡಲಿ. ದೆಹಲಿ‌ ಜಮಾತ್‌ಗೆ ಹೋಗಿ ಬಂದವರು ಸ್ವಯಂಪ್ರೇರಿತರಾಗಿ‌ ಮಾಹಿತಿ ನೀಡಬೇಕು’ ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್​ ಮನವಿ ಮಾಡಿದರು.

ಟ್ಯಾನರಿ ರಸ್ತೆಯ ಅರೆಬಿಕ್ ಕಾಲೇಜಿನಲ್ಲಿ ವಿವಿಧ ಮುಸ್ಲಿಂ ಧಾರ್ಮಿಕ ಗುರುಗಳು ಮತ್ತು ಉಲೆಮಾಗಳ ಜೊತೆ ಶನಿವಾರ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಷ್ಟೋ ಜನ ಕೊರೊನಾ ಭಯದಿಂದ ಹೊರಗೆ ಬಂದಿಲ್ಲ ಎಂಬ ಮಾತಿದೆ. ಅಂಥವರು ಹೆದರುವ ಅಗತ್ಯ ಇಲ್ಲ. ಕೊರೊನಾ ಧರ್ಮ‌ ನೋಡಿ ಬರುವುದಿಲ್ಲ. ಕೊರೊನಾ ವೈರಸ್ ಮತ್ತು ಮಾನವರ ನಡುವಿನ ಸಂಘರ್ಷ ಇದು. ಎಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡಬೇಕಿದೆ’ ಎಂದರು.

‘ದೆಹಲಿಯ ತಬ್ಲೀಗಿ ಜಮಾತ್​​​ಗೆ ಹೋಗಿ ಬಂದವರ ಪೈಕಿ‌ 110 ಜನರಿಗೆ ಕೊರೊನಾ ಸೋಂಕಿದೆ ಎಂದು ಸರ್ಕಾರ ಹೇಳಿದೆ. ಈ ಜಮಾಅತ್​​ಗೆ ಹೋಗಿ ಬಂದ ಹಲವರ ವಿವರ ಇನ್ನೂ ಸಿಗುತ್ತಿಲ್ಲ ಎಂಬ ಆರೋಪವೂ ಇದೆ. ಶನಿವಾರದಿಂದಲೇ ನಾವು ಈ ಸಂಬಂಧ ಅಭಿಯಾನ ಆರಂಭಿಸಲಿದ್ದೇವೆ. ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ದೆಹಲಿಗೆ ಹೋಗಿ ಬಂದವರ ವಿವರ ಕೊಡಿ ಎಂದು ಎಲ್ಲ ಮಸೀದಿಗಳಿಗೂ ಸೂಚನೆ ರವಾನಿಸಲಾಗುವುದು‘ ಎಂದರು.

ADVERTISEMENT

‘ದೆಹಲಿಗೆ ಹೋಗಿ‌ ಬಂದವರು ಎಷ್ಟು ಜನ, ಎಷ್ಟು ಜನ ಘೋಷಿಸಿಕೊಂಡಿದ್ದಾರೆ, ಎಷ್ಟು ಜನರ ವಿವರ ಸಿಕ್ಕಿಲ್ಲ ಎಂದು ಮಾಹಿತಿ ಸಂಗ್ರಹಿಸುತ್ತೇವೆ. ಅಲ್ಪ ಸಂಖ್ಯಾತ ಆಯೋಗದ ಎಲ್ಲ ಅಧಿಕಾರಿಗಳು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ’ ಎಂದೂ ಅವರು ವಿವರಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೊನಾ ಸಂಬಂಧ ಹಲವು ಕ್ರಮಗಳನ್ನು ಜಾರಿ ಮಾಡಿವೆ. ಮುಸ್ಲಿಂ ಸಮಯದಾಯದಿಂದ ಲಾಕ್‌ಡೌನ್‌ ನಿಯಮಗಳ ಉಲ್ಲಂಘನೆ ಆಗಿಲ್ಲ. ಸರ್ಕಾರದ ಪ್ರತಿಯೊಂದು ನಿಯಮಗಳನ್ನು ಪಾಲಿಸುತ್ತಿದೆ‘ ಎಂದರು.

‘ನಾವು(ಮುಸ್ಲಿಮರು) ಮಸೀದಿಗಳಿಗೆ ಹೋಗುತ್ತಿಲ್ಲ, ಮದುವೆ, ಸಭೆ, ಸಮಾರಂಭ ನಿಷೇಧಿಸಲಾಗಿದೆ. ರಂಜಾನ್​​ ಆಚರಣೆ ವೇಳೆಯಲ್ಲೂ ಸಾಮೂಹಿಕ‌ ಪ್ರಾರ್ಥನೆ ನಿಷೇಧಿಸಲಾಗಿದೆ. ಯಾರಾದರೂ ನಿಧನರಾದಾಗ ಖಬರ್ಸ್ತಾನಗಳಿಗೂ ಬೆರಳೆಣಿಕೆಯಷ್ಟು ಜನ ಹೋಗ್ತಾರೆ. ನೆರೆ ಹೊರೆಯವರನ್ನೂ ಮನೆಗಳಿಗೆ ಆಹ್ವಾನಿಸುತ್ತಿಲ್ಲ. ರಂಜಾನ್ ದಾನ ಧರ್ಮ ವೇಳೆಯಲ್ಲೂ ನಿಯಮಗಳ ಪಾಲನೆ ಮಾಡುತ್ತೇವೆ. ಆ ಮೂಲಕ, ಮುಸ್ಲಿಂ ಸಮುದಾಯ ಸರ್ಕಾರದ ಜೊತೆ ಕೊರೊನಾ ಹೋರಾಟದಲ್ಲಿ ಕೈಜೋಡಿಸಿದೆ’ ಎಂದೂ ಅವರು ವಿವರಿಸಿದರು.

ನಮ್ಮ ರಕ್ಷಕರು: ‘ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಮ್ಮ ರಕ್ಷಕರು. ಅವರು ನಮಗಾಗಿ, ನಮ್ಮ ಮನೆ ಸದಸ್ಯರ ಆರೋಗ್ಯ ಪರೀಕ್ಷೆಗಾಗಿ ಬರುತ್ತಾರೆ. ಅವರ ಕೆಲಸಕ್ಕೆ ಮುಸ್ಲಿಂ ಸಮುದಾಯವರು ಸಹಕಾರ ಕೊಡಬೇಕು‘ ಎಂದೂ ಅಜೀಂ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.