ADVERTISEMENT

ಕ್ಯಾಸಿನೋಗೆ ಹೋದರೆ ತಪ್ಪಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 15:57 IST
Last Updated 13 ಸೆಪ್ಟೆಂಬರ್ 2020, 15:57 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಯಾರದೋ ಜೊತೆ ಕ್ಯಾಸಿನೋಗೆ ಹೋಗಿದ್ದರೆ ತಪ್ಪಲ್ಲ. ಡ್ರಗ್ಸ್‌ ವ್ಯವಹಾರದಲ್ಲಿ ಭಾಗಿಯಾಗಿದ್ದರೆ ತಪ್ಪು’ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಶ್ರೀಲಂಕಾದಲ್ಲಿ ಕ್ಯಾಸಿನೋಗೆ ಹೋಗಿದ್ದೆ’ ಎಂಬ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮ್ಮದ್ ಖಾನ್‌ ಹೇಳಿಕೆ ಕುರಿತು ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಕ್ಯಾಸಿನೋಗೆ ಹೋಗಿರುವುದನ್ನು ಕುಮಾರಸ್ವಾಮಿ ಮತ್ತು ಜಮೀರ್‌ ಅಹಮ್ಮದ್ ಒಪ್ಪಿಕೊಂಡಿದ್ದಾರೆ. ಈ ಕುರಿತು ನೀವು ಅವರನ್ನೇ ಕೇಳಬೇಕು. ನಾನು ಹೆಚ್ಚು ಮಾತನಾಡುವುದಿಲ್ಲ’ ಎಂದರು.

‘ನಾನು ಕೂಡ ವಿದೇಶಕ್ಕೆ ಹೋಗಿದ್ದಾಗ ಕ್ಯಾಸಿನೋ ಆಡುವ ಸ್ಥಳವನ್ನು ನೋಡಿದ್ದೇನೆ. ಅಲ್ಲಿ ಆಟ ಆಡಿಲ್ಲ. ಜಮೀರ್‌ ಅಹಮ್ಮದ್‌ ಕೊಲಂಬೊ ಪ್ರವಾಸ ಮಾಡಿದ್ದರೆ ತಪ್ಪೇನೂ ಅಲ್ಲ’ ಎಂದು ಹೇಳಿದರು.

ADVERTISEMENT

ನಿಷ್ಪಕ್ಷಪಾತ ತನಿಖೆ ನಡೆಯಲಿ: ‘ಡ್ರಗ್ಸ್‌ ವ್ಯವಹಾರ ಹೊಸತಲ್ಲ. ಹಲವು ವರ್ಷಗಳಿಂದ ಇದೆ. ಈಗ ತನಿಖೆ ಆರಂಭವಾಗಿದೆ. ನಿಷ್ಪಕ್ಷಪಾತವಾಗಿ ನಡೆಯಲಿ. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈ ಪ್ರಕರಣವನ್ನು ಬಳಸಿಕೊಳ್ಳಬಾರದು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

‘ಜಮೀರ್‌ ಅಹಮ್ಮದ್‌ ಡ್ರಗ್ಸ್‌ ವ್ಯವಹಾರದಲ್ಲಿ ಭಾಗಿಯಾಗಿರುವ ಕುರಿತು ನನಗೆ ಗೊತ್ತಿಲ್ಲ. ಜಮೀರ್‌ ಮತ್ತು ಫಾಝಿಲ್‌ ಕುರಿತು ಪ್ರಶಾಂತ್‌ ಸಂಬರಗಿ ಎಂಬಾತ ಆರೋಪ ಮಾಡಿದ್ದಾನೆ. ಈ ಬಗ್ಗೆ ತನಿಖೆ ನಡೆಯಲಿ. ತಾನು ಡ್ರಗ್ಸ್‌ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು ಜಮೀರ್‌ ಸ್ಪಷ್ಟನೆ ನೀಡಿದ್ದಾರೆ’ ಎಂದರು.

‘ಆರೋಪಿಗಳು ನಮ್ಮ ಜೊತೆ ಇರುವ ಫೋಟೊಇರುವ ಕಾರಣಕ್ಕೆ ಎಲ್ಲರ ಮೇಲೂ ಆರೋಪ ಮಾಡಲಾಗದು. ಪ್ರಶಾಂತ್‌ ಸಂಬರಗಿ ಬಿಜೆಪಿಯಲ್ಲಿ ಇಲ್ವಾ? ಈ ಬಗ್ಗೆ ನಾವೇನಾದರೂ ಆರೋಪ ಮಾಡಿದ್ದೇವಾ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.