
ಚಿನ್ನ
(ಪ್ರಾತಿನಿಧಿಕ ಚಿತ್ರ)
ಸುವರ್ಣ ವಿಧಾನಸೌಧ (ಬೆಳಗಾವಿ): ತ್ವರಿತ ಸಾಲಕ್ಕಾಗಿ ಅಡವಿಟ್ಟ ಚಿನ್ನವನ್ನು ನಿಗದಿತ ಅವಧಿಯ ಒಳಗೆ ಬಿಡಿಸಿಕೊಳ್ಳಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುವ ಬಡವರು, ಮಧ್ಯಮ ವರ್ಗದ ಜನರ ನೆರವಿಗೆ ಕಾಯ್ದೆಯ ಬಲ ತುಂಬಲು ಮಸೂದೆಯೊಂದು ಸಿದ್ಧವಾಗಿದೆ.
ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು, ‘ಕರ್ನಾಟಕ ಬಂಗಾರ ಅಡವಿಟ್ಟ ಸಾಲಗಾರರ ರಕ್ಷಣಾ ಮಸೂದೆ– 2025’ ಹೆಸರಿನಲ್ಲಿ ಖಾಸಗಿ ಮಸೂದೆ ಸಿದ್ಧಪಡಿಸಿದ್ದಾರೆ. ವಿಧಾನಪರಿಷತ್‌ನ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅಧ್ಯಕ್ಷತೆಯ ಸಮಿತಿ ಮಸೂದೆ ಮಂಡನೆಗೆ ಸಮ್ಮತಿ ನೀಡಿದೆ.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕೇತರ ಹಣಕಾಸು ಕಂಪನಿಗಳು, ಖಾಸಗಿ ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರು ಚಿನ್ನದ ಆಭರಣಗಳನ್ನು ಅಡವಿಟ್ಟುಕೊಂಡು ಸಾಲ ನೀಡುತ್ತವೆ. ನಿಗದಿತ ಅವಧಿಯ ಒಳಗೆ ಸಾಲದ ಅಸಲು ಹಾಗೂ ಬಡ್ಡಿ ಮರುಪಾವತಿ ಮಾಡದಿದ್ದರೆ, ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಅಡವಿಟ್ಟ ಆಭರಣಗಳನ್ನು ಹರಾಜು ಹಾಕುತ್ತವೆ. ಅಡವಿಟ್ಟುಕೊಳ್ಳುವಾಗ ನೀಡುವ ಸಾಲದ ಪ್ರಮಾಣ ಚಿನ್ನದ ಮೌಲ್ಯದ ಶೇ 50ಕ್ಕಿಂತ ಕಡಿಮೆ ಇರುತ್ತದೆ. ಅಸಲು–ಬಡ್ಡಿ ಸೇರಿದರೂ ಚಿನ್ನದ ವರ್ತಮಾನದ ಮೌಲ್ಯಕ್ಕಿಂತ ಕಡಿಮೆ ಇರುತ್ತದೆ. ಇಂತಹ ಹಲವು ಪ್ರಕರಣಗಳಲ್ಲಿ ಉಳಿಕೆ ಮೊತ್ತವನ್ನು ಸಾಲಗಾರರಿಗೆ ವರ್ಗಾಯಿಸುವುದೇ ಇಲ್ಲ. ಬದಲಿಗೆ ಹರಾಜಿನ ನಂತರವೂ ಉಳಿಕೆ ಸಾಲದ ಬಾಕಿ ಪಾವತಿಸುವಂತೆ ನೋಟಿಸ್ ನೀಡಲಾಗುತ್ತದೆ. ಅಂತಹ ಸಾಲಗಾರರ ರಕ್ಷಣೆ ಹಾಗೂ ಅಡವಿಟ್ಟ ಚಿನ್ನದ ಹರಾಜು ಪ್ರಕ್ರಿಯೆಯನ್ನು ನಿಯಂತ್ರಿಸಲು ಹಾಗೂ ಅನುಸಂಧಾನ ವ್ಯವಸ್ಥೆ ಬಲಪಡಿಸಲು ಕಾಯ್ದೆಯ ಅಗತ್ಯವಿದೆ ಎಂದು ಮಸೂದೆ ರಚನೆಯ ಕಾರಣಗಳನ್ನು ವಿವರಿಸಲಾಗಿದೆ.
ಚಿನ್ನದ ಅಡಮಾನ ಸಾಲ ನೀಡುವ ಯಾವುದೇ ವಾಣಿಜ್ಯ ಬ್ಯಾಂಕ್, ಖಾಸಗಿ ಕಂಪನಿ, ಖಾಸಗಿ ಸಂಸ್ಥೆ, ಬ್ಯಾಂಕೇತರ ಹಣಕಾಸು ಕಂಪನಿಗಳು, ಖಾಸಗಿ ಬ್ಯಾಂಕ್, ಖಾಸಗಿ ಪ್ರತಿಷ್ಠಾನ, ಲೇವಾದೇವಿಗಾರರು ಕಾಯ್ದೆಯ ವ್ಯಾಪ್ತಿಗೆ ಒಳಪಡಲಿದ್ದು, ಅಡಮಾನ ಸಾಲ ಪಡೆದ ಚಿನ್ನವನ್ನು ಹರಾಜು ಹಾಕುವ ಮೊದಲು ಹಲವು ಪ್ರಕ್ರಿಯೆಗಳನ್ನು ನಡೆಸಬೇಕು ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಅವಧಿ ಮುಗಿದ ದಿನಾಂಕದಿಂದ 180 ದಿನಗಳನ್ನು ನಿಗದಿ ಮಾಡಿ, ನೋಟಿಸ್ ನೀಡುವುದು. ಪಡೆದ ಸಾಲ, ವಿಧಿಸಿದ ಬಡ್ಡಿ, ಅಡವಿಟ್ಟ ಸಮಯದ ಚಿನ್ನದ ಮೌಲ್ಯ, ಪ್ರಸ್ತುತ ಮಾರುಕಟ್ಟೆ ಮೌಲ್ಯ, ಮರುಪಾವತಿ ವಿವರಗಳನ್ನು ಒದಗಿಸುವುದು ಕಡ್ಡಾಯ. ಒಟ್ಟು ಮೌಲ್ಯ ಹಾಗೂ ನೋಟಿಸ್ ಅವಧಿಯ ಒಳಗೆ ಬಾಕಿ ಮೊತ್ತ ಮತ್ತು ಅನ್ವಯವಾಗುವ ಬಡ್ಡಿಯನ್ನು ಪಾವತಿಸುವ ಸಾಲಗಾರರಿಗೆ ತಮ್ಮ ಚಿನ್ನವನ್ನು ಮರಳಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. 180 ದಿನಗಳ ನೋಟಿಸ್ ನೀಡಿದ ನಂತರವೂ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚುವರಿ 90 ದಿನಗಳ ಗಡುವು ವಿಧಿಸಲಾಗಿದೆ.
ಬಹುತೇಕ ಬಡವರು ಕೂಲಿ ಮಾಡಿ ಸಣ್ಣ ಮೊತ್ತ ಉಳಿಸಿ ಚಿನ್ನ ಖರೀದಿಸಿರುತ್ತಾರೆ. ಅಡವಿಟ್ಟು ಸಾಲ ಪಡೆದ ಶೇ 50ರಷ್ಟು ಚಿನ್ನ ಹರಾಜಿಗೆ ಬರುತ್ತಿದೆ. ಸಾಮಾನ್ಯರ ಬದುಕು ಬೀದಿ ಪಾಲಾಗುತ್ತಿದೆರಮೇಶ್ ಬಾಬು ವಿಧಾನಪರಿಷತ್ ಸದಸ್ಯ ಕಾಂಗ್ರೆಸ್
ಉಲ್ಲಂಘನೆಗೆ ₹10 ಲಕ್ಷ ದಂಡ
ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವ ಹಣಕಾಸು ವಹಿವಾಟು ಸಂಸ್ಥೆಗಳಿಗೆ 6 ತಿಂಗಳು ಕಾರಾಗೃಹ ಶಿಕ್ಷೆ ₹10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಅಪರಾಧ ಪುನರಾವರ್ತನೆಯಾದರೆ ಸಂಸ್ಥೆಯ ನೋಂದಣಿ ಪರವಾನಗಿ ರದ್ದು ಮಾಡುವುದು ಅಗತ್ಯ ಕ್ರಮ ಕೈಗೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವರದಿ ನೀಡಲು ಅಧಿಕಾರ ನೀಡಲಾಗಿದೆ. ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಪಲವಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಅವಕಾಶವನ್ನು ಒದಗಿಸಲಾಗಿದೆ.
ಹರಾಜಿಗೆ ಅಧಿಕಾರಿಗಳ ಕಣ್ಗಾವಲು
ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ಪರವಾನಗಿ ಹೊಂದಿದ ಹರಾಜುಗಾರರ ಮೂಲಕ ಮಾತ್ರ ಚಿನ್ನದ ಹರಾಜು ಪ್ರಕ್ರಿಯೆ ನಡೆಸಬೇಕು. ಸ್ಥಳೀಯ ತಹಶೀಲ್ದಾರ್ ಅಥವಾ ಸರ್ಕಾರ ನಿಯೋಜಿಸಿದ ಸರ್ಕಾರಿ ಪ್ರತಿನಿಧಿಯ ಸಮ್ಮುಖದಲ್ಲಿ ನಡೆಸುವುದುನ್ನು ಕಡ್ಡಾಯಗೊಳಿಸಲಾಗಿದೆ. ಹರಾಜಿನ ನಂತರ ಸಾಲದ ಬಾಕಿ ಮೊತ್ತ ಹಾಗೂ ಹರಾಜು ವೆಚ್ಚಗಳನ್ನು ಕಡಿತಗೊಳಿಸಿ ಉಳಿಯುವ ಹೆಚ್ಚುವರಿ ಮೊತ್ತವನ್ನು 15 ದಿನಗಳ ಒಳಗೆ ಸಾಲಗಾರರಿಗೆ ಮರುಪಾವತಿಸಬೇಕು ಎಂಬ ವಿವರಗಳನ್ನು ಮಸೂದೆ ಒಳಗೊಂಡಿದೆ. ಚಿನ್ನದ ಅಡಮಾನ ಸಾಲದ ಮೇಲ್ವಿಚಾರಣೆ ಬಿಗಿಗೊಳಿಸುವುದು ಅಡವಿಟ್ಟ ಚಿನ್ನವನ್ನು ಮರಳಿ ಪಡೆಯುವ ಅವಕಾಶವನ್ನು ವಿಸ್ತರಿಸುವುದು ಸಾಲಗಾರರ ರಕ್ಷಣಾ ಮಾನದಂಡಗಳನ್ನು ಖಚಿತಪಡಿಸುವುದು ನ್ಯಾಯಸಮ್ಮತ ವ್ಯಾಪಾರ ಕ್ರಮಗಳನ್ನು ಜಾರಿಗೊಳಿಸುವ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.