ADVERTISEMENT

₹4 ಕೋಟಿ ಮೌಲ್ಯದ‌ 9 ಕೆ.ಜಿ ಚಿನ್ನ ವಶ: ಹಲವರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 8:46 IST
Last Updated 19 ಮಾರ್ಚ್ 2020, 8:46 IST
ಮಂಗಳೂರು ರೈಲು ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾದ ಚಿನ್ನ
ಮಂಗಳೂರು ರೈಲು ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾದ ಚಿನ್ನ   

ಮಂಗಳೂರು: ಇಲ್ಲಿನ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಸೈಯದ್ ಮೊಹಮ್ಮದ್ ಮತ್ತು ಅಶೋಕ ಕೆ.ಎಸ್. ಎಂಬ ಇಬ್ಬರು ವ್ಯಕ್ತಿಗಳನ್ನು ತಪಾಸಣೆ ನಡೆಸಿದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಅವರಿಂದ 5.6 ಕೆಜಿಯ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಚಿನ್ನವನ್ನು ಗಟ್ಟಿ ರೂಪದಲ್ಲಿ ಕ್ಯಾಲಿಕಟ್‌ನಿಂದ ಮಂಗಳೂರಿಗೆ ಸಾಗಾಟ ಮಾಡಲಾಗುತ್ತಿದೆ ಎಂದು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಈ ಚಿನ್ನವನ್ನು ಬಳಿಕ ಕರಗಿಸಿ 100 ಗ್ರಾಂಗಳ ಗಟ್ಟಿಗಳನ್ನಾಗಿ ಪರಿವರ್ತಿಸಿ ಅದರ ಮೇಲೆ ವಿದೇಶಿ ಗುರುತು ಅಚ್ಚುಗಳನ್ನು ಹಾಕಿ ಕರ್ನಾಟಕದ ವಿವಿಧ ಭಾಗಗಳಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಇವರಿಬ್ಬರನ್ನು ಮಾತ್ರವಲ್ಲದೇ ಇವರಿಂದ ಚಿನ್ನವನ್ನು ಪಡೆಯಲಿದ್ದ ಮಂಜುನಾಥ್ ಶೇಟ್ ಅಲಿಯಾಸ್ ರೂಪೇಶ್ ಎಂಬಾತನನ್ನು ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಬಂಧಿಸಲಾಗಿದೆ.

ADVERTISEMENT

ಮಂಗಳೂರು, ಉಡುಪಿ, ಮತ್ತು ಶಿವಮೊಗ್ಗದಲ್ಲಿ ಏಕಕಾಲದಲ್ಲಿ ಶೋಧ ನಡೆಸಲಾಗಿದ್ದು ಕ್ಯಾಲಿಕಟ್‌ನಲ್ಲಿ ಚಿನ್ನವನ್ನು ಕರಗಿಸುವವರನ್ನು ಪತ್ತೆ ಹಚ್ಚಲಾಗಿದೆ. ಕಾರ್ಯಾಚರಣೆಯಲ್ಲಿ ಚಿನ್ನ ಹಾಗೂ ₹ 82 ಲಕ್ಷ ವಶಕ್ಕೆ ಪಡೆಯಲಾಗಿದೆ ಹಾಗೂ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಬಳಸಲಾಗುತ್ತಿದ್ದ ಎರಡು ಟೊಯೋಟಾ ಎಟಿಯೋಸ್ ಕಾರುಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣದ ಪ್ರಮುಖ ಆರೋಪಿ ಉಡುಪಿಯ ನವೀನ್ ಚಂದ್ರ ಕಾಮತ್ ಸೇರಿದಂತೆ ಕಾರ್ಯಾಚರಣೆಯಲ್ಲಿ ಒಟ್ಟು ಏಳು ಜನರನ್ನು ಬಂಧಿಸಲಾಗಿದೆ. ದಂಧೆಯಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಬೆಂಗಳೂರು, ಮಂಗಳೂರು ಮತ್ತು ಶಿವಮೊಗ್ಗದಲ್ಲಿಒಟ್ಟು 40 ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಒಟ್ಟುಅಂದಾಜು₹ 4 ಕೋಟಿ ಮೌಲ್ಯದ 9.3 ಕೆಜಿ ಚಿನ್ನ, 5.2 ಕೆಜಿ ಬೆಳ್ಳಿ, ₹84 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.