ADVERTISEMENT

ಸರ್ಕಾರ ಮುಂದುವರಿಸುವ ಅನಿವಾರ್ಯವಿದೆ: ಜಿ.ಟಿ. ದೇವೇಗೌಡ

‘ದೇವೇಗೌಡ–ಸಿದ್ದರಾಮಯ್ಯ ನಡುವೆ ದ್ವೇಷವಿಲ್ಲ’

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 10:50 IST
Last Updated 29 ಜೂನ್ 2018, 10:50 IST
ಜಿ.ಟಿ. ದೇವೇಗೌಡ
ಜಿ.ಟಿ. ದೇವೇಗೌಡ    

ಬೆಳಗಾವಿ: ‘ಸಮ್ಮಿಶ್ರ ಸರ್ಕಾರ ಉಳಿಸಿಕೊಂಡು ಹೋಗುವುದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳೆರಡಕ್ಕೂ ಅನಿವಾರ್ಯವಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.‌

ಸುದ್ದಿಗಾರರೊಂದಿಗೆಶುಕ್ರವಾರ ಮಾತನಾಡಿದ ಅವರು, ‘ಸರ್ಕಾರ ಬೀಳುವುದಕ್ಕೆ ಎರಡೂ ಪಕ್ಷಗಳ ನಾಯಕರು ಬಿಡುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡಬೇಕು ಎನ್ನುವುದು ಬಿಜೆಪಿ ಕನವರಿಕೆ. ಇದಕ್ಕೆ ಅವಕಾಶ ಕೊಡಬಾರದೆಂದು ಕಾಂಗ್ರೆಸ್‌ನವರು ಸಮ್ಮಿಶ್ರ ಸರ್ಕಾರ ನಡೆಸಲು ಜೆಡಿಎಸ್‌ಗೆ ಬೆಂಬಲ ನೀಡಿದ್ದಾರೆ. ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಹಾಗೂ ಜಾತ್ಯತೀತ ಶಕ್ತಿಗಳು ಒಂದಾಗಬೇಕೆಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಕಾಂಗ್ರೆಸ್‌ ಜೊತೆ ಮೈತ್ರಿಗೆ ಒಪ್ಪಿದ್ದಾರೆ. ಹೀಗಾಗಿ, ಸರ್ಕಾರ ಸುಭದ್ರವಾಗಿರುತ್ತದೆ’ ಎಂದು ತಿಳಿಸಿದರು.

ADVERTISEMENT

‘ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವೆ ದ್ವೇಷವಿಲ್ಲ. ಇದ್ದಿದ್ದರೆ ಈ ಸರ್ಕಾರ ರಚನೆಯೇ ಆಗುತ್ತಿರಲಿಲ್ಲ. ದೇವೇಗೌಡರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಭೇಟಿಯಾಗಿ ಸಿದ್ದರಾಮಯ್ಯ ವಿರುದ್ಧ ದೂರಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬಜೆಟ್‌ ಮಂಡನೆಗೆ ತಯಾರಿ ನಡೆದಿದೆ. ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯ ಘೋಷಿಸಿದ್ದ ಮಹತ್ವದ ಕಾರ್ಯಕ್ರಮಗಳನ್ನು ಮುಂದುವರಿಸುವ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಬಜೆಟ್‌ ಮಂಡನೆ ಹಾಗೂ ರೈತರ ಸಾಲ ಮನ್ನಾಕ್ಕೆ ಸಿದ್ದರಾಮಯ್ಯ ಒಪ್ಪಿದ್ದಾರೆ. ಅವರು ಎಲ್ಲಾದರೂ ತಕರಾರು ತೆಗೆದನ್ನು ನೋಡಿದ್ದೀರಾ? ಮಂತ್ರಿ ಸ್ಥಾನ ಸಿಗದವರು ಚರ್ಚೆ ಮಾಡುತ್ತಿದ್ದಾರಷ್ಟೆ’ ಎಂದು ಪ್ರತಿಕ್ರಿಯಿಸಿದರು.

‘ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರು, ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಬೇಕು. 7ನೇ ವೇತನ ಆಯೋಗದ ವರದಿ ಶಿಫಾರಸುಗಳ ಪ್ರಕಾರ ವೇತನ ಜಾರಿಗೊಳಿಸಬೇಕು. ಇದನ್ನು ಬಜೆಟ್‌ನಲ್ಲಿ ಪ್ರಕಟಿಸಬೇಕು’ ಎಂದು ಮುಖ್ಯಮಂತ್ರಿಯನ್ನು ಕೋರಿದ್ದೇನೆ’ ಎಂದು ತಿಳಿಸಿದರು.

ವಿಟಿಯು ಸಂಸ್ಥಾಪನಾ ದಿನಾಚರಣೆಗೆ ದುಂದುವೆಚ್ಚ ಮಾಡಲಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ‘ಎಷ್ಟು ಖರ್ಚಾಗಿದೆ ಎನ್ನು ಮಾಹಿತಿ ಇಲ್ಲ. ಪರಿಶೀಲಿಸುತ್ತೇನೆ. ವಿಧಾನಮಂಡಲ ಅಧಿವೇಶನದ ನಂತರ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಸಚಿವರ ಸಭೆ ನಡೆಸುವೆ. ದುಂದು ವೆಚ್ಚ ಮಾಡುವುದು ಸರಿಯಲ್ಲ. ಆ ಅಪಸ್ವರಕ್ಕೂ ಅವಕಾಶ ನೀಡಬಾರದು. ಕುಲಪತಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಬ್ರಿಟಿಷರ ಕಾಲದಲ್ಲಿದ್ದ ಸಂಸ್ಕೃತಿ ಬಿಡಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಆಡಿಟ್‌ ಸಮರ್ಪಕವಾಗಿರಬೇಕು. ಹಳ್ಳಿಯವರಿಗೂ ಉನ್ನತ ಶಿಕ್ಷಣ ದೊರೆಯುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.