ಸಿ.ಟಿ. ರವಿ
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ 36,000 ಕೊಠಡಿಗಳಷ್ಟು ಕೊರತೆ ಇದ್ದು, ಇದರ ಹೊಣೆ ಯಾರು ಹೊರಬೇಕು?... ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಸಿ.ಟಿ. ರವಿ ಅವರು ನಿಯಮ 72ರ ಅಡಿಯಲ್ಲಿ ಪ್ರಸ್ತಾಪಿಸಿದ ವಿಷಯ ಇಂಥದ್ದೊಂದು ಚರ್ಚೆಯನ್ನು ಹುಟ್ಟುಹಾಕಿತು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಮಾತ್ರವಲ್ಲದೆ, ಕಟ್ಟಡಗಳು ಶಿಥಿಲವಾಗಿ ವಿದ್ಯಾರ್ಥಿಗಳು ಜೀವಭಯದಲ್ಲಿ ಅಧ್ಯಯನ ಮಾಡಬೇಕಾದ ಸ್ಥಿತಿ ಇದೆ ಎಂಬುದರತ್ತ ವಿರೋಧ ಪಕ್ಷಗಳ ಸದಸ್ಯರು ಗಮನ ಸೆಳೆದರು. ಆಡಳಿತ ಪಕ್ಷದ ಕೆಲ ಸದಸ್ಯರೂ ಈ ಬಗ್ಗೆ ದನಿಗೂಡಿಸಿದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡದ ಪದಗಳ ಓದು–ಬರಹ ಬರುವುದಿಲ್ಲ, ಶಿಕ್ಷಕರಿಗಾಗಿ ಶಾಲೆ ನಡೆಸಲಾಗುತ್ತಿದೆ, ಕಲ್ಯಾಣ ಕರ್ನಾಟಕದ ಶಾಲೆಗಳಿಗೆ ಅನುದಾನವನ್ನೇ ನೀಡುತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮುಗಿಬಿದ್ದರು.
ಬಿಜೆಪಿಯ ಎಚ್.ವಿಶ್ವನಾಥ್, ‘ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆಗಳ ಮಧ್ಯೆ ಒಪ್ಪಂದ ಮಾಡಿಕೊಂಡು, ಸರ್ಕಾರಿ ಶಾಲೆಗಳನ್ನು ಮುಚ್ಚುವ ಸಂಚು ಜಾರಿಯಲ್ಲಿದೆ’ ಎಂದು ಆರೋಪಿಸಿದರು.
ಮಧು ಬಂಗಾರಪ್ಪ ಅವರು, ‘ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇರುವುದು ನಿಜ. ಆದರೆ, ಎರಡೇ ವರ್ಷದಲ್ಲಿ ಹತ್ತಾರು ಸಾವಿರ ಕೊಠಡಿಗಳು ಕೊರತೆಯಾದವೇ? ಖಾಸಗಿ ಶಾಲೆಗಳು ಎರಡು ವರ್ಷದಲ್ಲಿ ಹಿಡಿತ ಸಾಧಿಸಿದವೇ? ಈ ಹಿಂದಿನ ಎಲ್ಲ ಸರ್ಕಾರಗಳು ಮತ್ತು ಶಿಕ್ಷಣ ಸಚಿವರ ಹೊಣೆ ಇರಲಿಲ್ಲವೇ’ ಎಂದು ಹಿಂದಿನ ಸರ್ಕಾರದ ಮೇಲೆ ಹೊಣೆ ಹೊರಿಸಿದರು.
‘ಯಾರನ್ನೂ ದೂಷಿಸುವುದು ನನ್ನ ಉದ್ದೇಶವಲ್ಲ. ಹಿಂದಿನಿಂದ ಉಳಿಸಿಕೊಂಡು ಬಂದ ಕಾರಣಕ್ಕೇ, ಈ ಸಮಸ್ಯೆಗಳು ದೊಡ್ಡದಾಗಿವೆ. ನಾನು ಇಲಾಖೆಯು ಹೊಣೆಗಾರಿಕೆ ಹೊತ್ತಾಗ ಸರ್ಕಾರಿ ಶಾಲೆಗಳು ಐಸಿಯುನಲ್ಲಿ ಇದ್ದವು. ಈಗ ಅವುಗಳ ಸ್ಥಿತಿಯನ್ನು ಸುಧಾರಿಸಿ, ಜನರಲ್ ವಾರ್ಡ್‌ಗೆ ತರುವ ಕೆಲಸ ಮಾಡುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.