ADVERTISEMENT

ಮುಖ್ಯಮಂತ್ರಿ ಬದಲಾವಣೆ ವಿಷಯ ಅಪ್ರಸ್ತುತ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 12:18 IST
Last Updated 29 ನವೆಂಬರ್ 2021, 12:18 IST
ಗೋವಿಂದ ಕಾರಜೋಳ (ಪ್ರಜಾವಾಣಿ ಸಂಗ್ರಹ ಚಿತ್ರ)
ಗೋವಿಂದ ಕಾರಜೋಳ (ಪ್ರಜಾವಾಣಿ ಸಂಗ್ರಹ ಚಿತ್ರ)   

ವಿಜಯಪುರ: ಮುಖ್ಯಮಂತ್ರಿ ಬದಲಾವಣೆ ವಿಷಯ ಅಪ್ರಸ್ತುತ. ಬಸವರಾಜ ಬೊಮ್ಮಾಯಿ ಅವರು ಬಹಳ ದಕ್ಷವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಮುಂದಿನ ಮುಖ್ಯಮಂತ್ರಿ ಮುರುಗೇಶ ನಿರಾಣಿ ಆಗಲಿದ್ದಾರೆ ಎಂಬ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕೋವಿಡ್‌, ನೆರೆ, ಬೆಳೆಹಾನಿ ಸೇರಿದಂತೆ ಸಂಕಷ್ಟಗಳ ಸರಮಾಲೆಯೇ ಇವೆ. ಈ ಸಂದರ್ಭದಲ್ಲಿ ಜನರಿಗೆ ನೆರವಾಗಬೇಕಾಗಿರುವುದು ನಮಗೆ ಮುಖ್ಯವಾಗಬೇಕೇ ಹೊರತು, ಮುಖ್ಯಮಂತ್ರಿ ಬದಲಾವಣೆ ವಿಷಯವಲ್ಲ ಎಂದು ಈಶ್ವರಪ್ಪ ಅವರಿಗೆ ಕಿವಿ ಮಾತು ಹೇಳಿದರು.

ನಾವು ಇರುವುದು ಕೇವಲ ಅಧಿಕಾರ, ಖುರ್ಚಿಗಾಗಿ ಅಲ್ಲ, ಜನರ ಸಂಕಷ್ಟಗಳಿಗೆ ಸ್ಪಂದಿಸುವವರು ಎಂಬ ಸಂದೇಶವನ್ನು ಈಶ್ವರಪ್ಪ ಅವರಿಗೆ ತಲುಪಿಸಿ ಎಂದು ಪತ್ರಕರ್ತರನ್ನು ಕೋರಿದರು.

ಬೆಂಬಲ ಕೇಳಿದರೆ ತಪ್ಪಿಲ್ಲ:

ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯು ಜೆಡಿಎಸ್‌ ಬೆಂಬಲ ಕೇಳಿರುವುದರಲ್ಲಿ ತಪ್ಪಿಲ್ಲ. ಜೆಡಿಎಸ್‌ನವರು ಕಾಂಗ್ರೆಸ್‌ ಅನ್ನು ಯಾವಾಗಲೂ ಇಷ್ಟಪಡುವುದಿಲ್ಲ. ಜೆಡಿಎಸ್‌ನವರು ಬಿಜೆಪಿಯನ್ನು ಹೆಚ್ಚು ಪ್ರೀತಿ ಮಾಡುತ್ತಾರೆ. ಹಲವು ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧಿಸಿಲ್ಲ. ಹೀಗಾಗಿ ಅಂತಹ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿಸಲು ಕೋರಲಾಗಿದೆ. ಈ ಸಂಬಂಧ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದರು.

ರಾಷ್ಟ್ರೀಯ ಯೋಜನೆಯಾಗಿ ಭದ್ರಾ:

ಕೇಂದ್ರ ಸರ್ಕಾರವು ಶೀಘ್ರದಲ್ಲೇ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲಿದೆ ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ನ್ಯಾಯಾಧಿಕರಣ ತೀರ್ಪಿನ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸುವಂತೆ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ, ಮಹಾರಾಷ್ಟ್ರ ಪ್ರತಿಪಾದಿಸಿವೆ. ಡಿ.13ಕ್ಕೆ ವಿಚಾರಣೆ ಮುಂದಕ್ಕೆ ಹೋಗಿದೆ. ಶೀಘ್ರದಲ್ಲೇ ನಮ್ಮ ಪಾಲಿನ ನೀರು ನಮಗೆ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.