ADVERTISEMENT

ಸರ್ಕಾರಿ ಜಮೀನು ಗುತ್ತಿಗೆ: ತಿದ್ದುಪಡಿ ಮಸೂದೆಗೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 15:04 IST
Last Updated 28 ಡಿಸೆಂಬರ್ 2022, 15:04 IST

ಬೆಳಗಾವಿ: ಪ್ಲಾಂಟೇಷನ್‌ ಬೆಳೆಗಳನ್ನು ಅನಧಿಕೃತವಾಗಿ ಬೆಳೆಯುತ್ತಿರುವ ಸರ್ಕಾರಿ ಜಮೀನುಗಳನ್ನು ರೈತರಿಗೆ 30 ವರ್ಷಗಳವರೆಗೆ ಗುತ್ತಿಗೆಗೆ ನೀಡಲು ಅವಕಾಶ ಕಲ್ಪಿಸುವ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಮಸೂದೆ–2022ಕ್ಕೆ ವಿಧಾನ ಪರಿಷತ್‌ ಬುಧವಾರ ಅಂಗೀಕಾರ ನೀಡಿತು.

ಈ ಮಸೂದೆ ಇನ್ನಷ್ಟೇ ವಿಧಾನಸಭೆಗೆ ಬರಬೇಕಿದೆ.

ಕಾಫಿ, ಕಾಳು ಮೆಣಸು, ಏಲಕ್ಕಿ, ಟೀ ಮತ್ತಿತರ ಪ್ಲಾಂಟೇಷನ್‌ ಬೆಳೆಗಳಿರುವ ಹಿಡುವಳಿ ಜಮೀನಿನ ಮಧ್ಯ ಭಾಗದಲ್ಲಿರುವ ಅಥವಾ ಅದಕ್ಕೆ ಹೊಂದಿಕೊಂಡಂತೆ ಇರುವ ಸರ್ಕಾರಿ ಜಮೀನಿನಲ್ಲಿ 2005ರ ಜನವರಿ 1ಕ್ಕೂ ಮುನ್ನ ಪ್ಲಾಂಟೇಷನ್‌ ಬೆಳೆಗಳನ್ನು ಬೆಳೆದಿದ್ದಲ್ಲಿ ಕುಟುಂಬವೊಂದಕ್ಕೆ 25 ಎಕರೆವರೆಗೂ ಗುತ್ತಿಗೆಗೆ ನೀಡಲು ಈ ತಿದ್ದುಪಡಿ ಅವಕಾಶ ಕಲ್ಪಿಸಲಿದೆ.

ADVERTISEMENT

2017ರ ಜನವರಿ 1ಕ್ಕೂ ಮೊದಲು ಅಂತಹ ಜಮೀನುಗಳಲ್ಲಿ ಪ್ಲಾಂಟೇಷನ್‌ ಬೆಳೆಗಾರರು ಹೊಂದಿರುವ ಅನಧಿಕೃತ ವಾಸದ ಮನೆಗಳನ್ನೂ ಸಕ್ರಮಗೊಳಿಸಲು ಈ ತಿದ್ದುಪಡಿಯಿಂದ ಅವಕಾಶ ದೊರಕಲಿದೆ. ಅರಣ್ಯ ಜಮೀನು, ರಸ್ತೆ, ಕಾಲು ದಾರಿ ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಜಮೀನುಗಳು, ರಾಷ್ಟ್ರೀಯ ಉದ್ಯಾನಗಳು, ನದಿ ಪಾತ್ರ, ಕಾಲುವೆಗಳು, ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಯಲ್ಲಿರುವ ಜಮೀನುಗಳನ್ನು ಗುತ್ತಿಗೆಗೆ ನೀಡಲು ಅವಕಾಶವಿಲ್ಲ.

ಮಸೂದೆ ಮಂಡಿಸಿ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ, ‘50 ವರ್ಷಗಳಿಗಿಂತಲೂ ಹೆಚ್ಚಿನ ಕಾಲದಿಂದ ಪ್ಲಾಂಟೇಷನ್‌ ಬೆಳೆಗಾರರು ವಿವಿಧ ಬೆಳೆಗಳನ್ನು ಬೆಳೆದಿರುವ ಜಮೀನುಗಳನ್ನು ಅವರಿಗೆ ಗುತ್ತಿಗೆಗೆ ನೀಡಲಾಗುತ್ತಿದೆ. 82,000ಕ್ಕೂ ಹೆಚ್ಚು ರೈತರಿಗೆ ಇದರಿಂದ ಅನುಕೂಲವಾಗುತ್ತದೆ. ಗುತ್ತಿಗೆ ಶುಲ್ಕ ಮತ್ತು ದಂಡದ ಮೊತ್ತವನ್ನು ನಿಯಮಗಳಲ್ಲಿ ನಿಗದಿಪಡಿಸಲಾಗುವುದು’ ಎಂದರು.

ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ‘ನೂರಾರು ಎಕರೆ ವಿಸ್ತೀರ್ಣದ ತೋಟಗಳನ್ನು ಹೊಂದಿರುವವರಿಗೆ ಪುನಃ ಈ ರೀತಿ ಗುತ್ತಿಗೆ ನೀಡುವ ಬದಲಿಗೆ ಕಡಿಮೆ ವಿಸ್ತೀರ್ಣದ ಜಮೀನು ಹೊಂದಿರುವವರಿಗೆ ಆದ್ಯತೆ ನೀಡಬೇಕು. ಸಣ್ಣ ಹಿಡುವಳಿದಾರರಿಗೆ ಗುತ್ತಿಗೆಗೆ ನೀಡಬೇಕು’ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮೂರೂ ಪಕ್ಷಗಳ ಹಲವು ಸದಸ್ಯರು ಮಸೂದೆಯನ್ನು ಸ್ವಾಗತಿಸಿ ಮಾತನಾಡಿದರು.

ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಗೆ ಒಪ್ಪಿಗೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಹಾಗೂ ವಿಚಾರಣಾ ಪ್ರಾಧಿಕಾರದಲ್ಲಿ ಬಿಬಿಎಂಪಿ ಆಯುಕ್ತರ ಬದಲಿಗೆ ಜಿಲ್ಲಾಧಿಕಾರಿಯನ್ನು ಸದಸ್ಯರನ್ನಾಗಿ ನೇಮಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ–2022’ಕ್ಕೆ ವಿಧಾನ ಪರಿಷತ್‌ ಬುಧವಾರ ಒಪ್ಪಿಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.