ADVERTISEMENT

ಗೃಹರಕ್ಷಕರ ಭತ್ಯೆ ಪರಿಷ್ಕರಣೆಗೆ ಚಿಂತನೆ: ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 20:47 IST
Last Updated 13 ಡಿಸೆಂಬರ್ 2023, 20:47 IST
<div class="paragraphs"><p> ಗೃಹ ಸಚಿವ ಜಿ. ಪರಮೇಶ್ವರ </p></div>

ಗೃಹ ಸಚಿವ ಜಿ. ಪರಮೇಶ್ವರ

   

ವಿಧಾನಸಭೆ: ಗೃಹ ರಕ್ಷಕ ದಳದ ಸಿಬ್ಬಂದಿಗೆ ನೀಡುತ್ತಿರುವ ಕರ್ತವ್ಯ ಭತ್ಯೆಯನ್ನು ಪರಿಷ್ಕರಿಸಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಬಿಜೆಪಿಯ ಶಶಿಕಲಾ ಜೊಲ್ಲೆ ಅವರ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ 21,327 ಪುರುಷರು ಮತ್ತು 4,555 ಮಹಿಳೆಯರು ಗೃಹ ರಕ್ಷಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಎಲ್ಲ 25,882 ಮಂದಿಗೂ ಸಮಾನವಾಗಿ ಕರ್ತವ್ಯ ಭತ್ಯೆ ನಿಗದಿಪಡಿಸಲು ಯೋಚಿಸಲಾಗಿದೆ’ ಎಂದರು.

ADVERTISEMENT

ಈಗ ಪೊಲೀಸ್‌ ಇಲಾಖೆಯಲ್ಲಿ ಸೇವೆ ಒದಗಿಸುವ ಗೃಹ ರಕ್ಷಕರಿಗೆ ದಿನವೊಂದಕ್ಕೆ ₹ 750  ಮತ್ತು ಇತರ ಇಲಾಖೆಗಳಲ್ಲಿ ₹ 600 ನೀಡಲಾಗುತ್ತಿದೆ. ಪಹರೆ ಕರ್ತವ್ಯಕ್ಕೆ ನಿಯೋಜಿಸುವವರಿಗೆ ಬೆಂಗಳೂರಿನಲ್ಲಿ ₹ 455 ಮತ್ತು ಇತರೆ ಸ್ಥಳಗಳಲ್ಲಿ ₹ 380 ನೀಡಲಾಗುತ್ತಿದೆ. ಎಲ್ಲ ಗೃಹ ರಕ್ಷಕ ಸಿಬ್ಬಂದಿಗೂ ಸಮಾನವಾಗಿ ₹ 750 ನೀಡಲಾಗುವುದು. ನಂತರ ಇತರ ರಾಜ್ಯಗಳಲ್ಲಿ ನೀಡುತ್ತಿರುವ ಕರ್ತವ್ಯ ಭತ್ಯೆಯನ್ನು ಪರಿಶೀಲಿಸಿ ರಾಜ್ಯದಲ್ಲೂ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದರು.

ಶೇ 80 ರಷ್ಟು ವಸತಿ ಗುರಿ: ಪೊಲೀಸ್‌ ಇಲಾಖೆ ಸಿಬ್ಬಂದಿಯಲ್ಲಿ ಶೇಕಡ 40 ರಷ್ಟು ಮಂದಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಪೊಲೀಸ್‌ ವಸತಿಗೃಹ ಯೋಜನೆಯಡಿ 2025ರ ವೇಳೆಗೆ ಶೇ 80ರಷ್ಟು ಪೊಲೀಸರಿಗೆ ವಸತಿ ಸೌಕರ್ಯ ಕಲ್ಪಿಸುವ ಗುರಿ ಇದೆ ಎಂದು ಕಾಂಗ್ರೆಸ್‌ನ ಡಿ.ಜಿ. ಶಾಂತನಗೌಡ ಪ್ರಶ್ನೆಗೆ ಉತ್ತರಿಸಿದರು.

ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ‘ರಾಜ್ಯದ ಹಲವು ತಾಲ್ಲೂಕುಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಆರಂಭಿಸಬೇಕೆಂಬ ಬೇಡಿಕೆಗಳು ಬಂದಿವೆ. ಮುಂದಿನ ವರ್ಷದ ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯವರಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.