ADVERTISEMENT

ಜೆಡಿಎಸ್ ತೊರೆಯುವುದಿಲ್ಲ ಎನ್ನುತ್ತಲೇ ಕಾಂಗ್ರೆಸ್‌ನತ್ತ ಮುಖ ಮಾಡಿದರೇ ಈ ಶಾಸಕ?

ಜೆಡಿಎಸ್ ಮುಖಂಡರ ಬಗ್ಗೆ ಗುಬ್ಬಿ ಶಾಸಕ ಶ್ರೀನಿವಾಸ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 6:05 IST
Last Updated 20 ಡಿಸೆಂಬರ್ 2020, 6:05 IST
ಸುದ್ದಿಗೋಷ್ಠಿಯಲ್ಲಿ ಷಷೀ ಅಹಮದ್, ರಾಜಣ್ಣ, ಶ್ರೀನಿವಾಸ್ ಮತ್ತು ಗಂಗಣ್ಣ ಇದ್ದಾರೆ.
ಸುದ್ದಿಗೋಷ್ಠಿಯಲ್ಲಿ ಷಷೀ ಅಹಮದ್, ರಾಜಣ್ಣ, ಶ್ರೀನಿವಾಸ್ ಮತ್ತು ಗಂಗಣ್ಣ ಇದ್ದಾರೆ.   

ತುಮಕೂರು: ಗುಬ್ಬಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಸ್.ಆರ್. ಶ್ರೀನಿವಾಸ್ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎನ್ನುವ ಸುದ್ದಿ ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಇದೆ. ಇದಕ್ಕೆ ಪುಷ್ಠಿ ಎನ್ನುವಂತೆ ಭಾನುವಾರ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಅವರ ಮನೆಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿ ಸಾಕ್ಷಿಯಾಗಿದೆ.

ಕುಮಾರಸ್ವಾಮಿ ಅವರನ್ನು ಟೀಕಿಸಿದ ಸಿದ್ದರಾಮಯ್ಯ ಅವರ ಪರವಾಗಿ ಕೆ.ಎನ್. ರಾಜಣ್ಣ ಅವರು ಮಾತನಾಡಿದರೂ ಕೂಡ ಶ್ರೀನಿವಾಸ್ ಮೌನವಾಗಿದ್ದರು.

ನಂತರ ಮಾತನಾಡಿದ ಶ್ರೀನಿವಾಸ್, ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎನ್ನುವ ಒಳ ಒಪ್ಪಂದ ಆಗಿತ್ತು. ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಕೆಲವರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಂಡರು ಎಂದರು.

ADVERTISEMENT

ನಾನು ಈಗ ಜೆಡಿಎಸ್‌ನಲ್ಲಿ ಇದ್ದೇನೆ. ಮುಂದಿನ ಚುನಾವಣೆ ವೇಳೆಗೆ ಎಲ್ಲಿ ಇರುತ್ತೇನೊ ನೋಡೋಣ. ಬಿಜೆಪಿ ಜತೆ ಕುಮಾರಸ್ವಾಮಿ ಹೋದರೂ ಕೂಡ ನಾವು ಹೋಗುವುದಿಲ್ಲ. ಅಧಿಕಾರದ ಬಗ್ಗೆ ಪ್ರೀತಿ ಇರುವವರು ಬಿಜೆಪಿ ಬಗ್ಗೆ ಒಲವು ಹೊಂದುವರು. ನನಗೆ ಬಿಜೆಪಿ ಬಗ್ಗೆ ಒಲವು ಇಲ್ಲ. ಅವರು ಬಿಜೆಪಿ ಜತೆ ಹೋದರೆ ನಾನು ದೂರವಾಗುವೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆ ನನ್ನ ಬೆಂಬಲಿಗರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವೆ ಎಂದರು.

ಶಿರಾ ಉಪಚುನಾವಣೆ ಯಾವ ರೀತಿಯಲ್ಲಿ ಮಾಡಬೇಕು ಎಂದು ಮುಖಂಡರಿಗೆ ಹೇಳಿದೆ. ಆದರೆ ಮುಖಂಡರು 15 ದಿನ ಸುಮ್ಮನೆ ಇದ್ದು ನಂತರ ಚುನಾವಣೆ ಗೆಲ್ಲಿ ಎಂದರು‌.‌ ಈ ರೀತಿಯಲ್ಲಿ ಚುನಾವಣೆ ಗೆಲ್ಲಲು ಸಾಧ್ಯವೇ ಎಂದು ಜೆಡಿಎಸ್ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಪಕ್ಷ ಸೇರಿದಂತೆ ಜನತಾದಳ ಹುಟ್ಟಿರುವುದೇ ಜಗಳದಲ್ಲಿ ಎಂದರು.

ಜೆಡಿಎಸ್ ತೊರೆಯುವಿರಾ ಎನ್ನುವ ಪ್ರಶ್ನೆಗೆ 'ಇಲ್ಲ ನಾನು ಜೆಡಿಎಸ್ ನಲ್ಲಿಯೇ ಇರುವೆ' ಎಂದು ಹೇಳಿದರು.

ನನಗೆ ಕೆ.ಎನ್.ರಾಜಣ್ಣ ಅವರು ಗಾಢ್ ಪಾದರ್. ಇದು ರಾಜಕೀಯ ಸುದ್ದಿಗೋಷ್ಠಿ ಅಲ್ಲ. ರಾಜಣ್ಣ ಕರೆದಿದ್ದಾರೆ ಬಂದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.