
ಎಚ್.ಆಂಜನೇಯ
ಬೆಂಗಳೂರು: ‘ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಜಾತಿ ಉಲ್ಲೇಖಿಸಿ ಅವಹೇಳನ ಮಾಡಿದ ಬಿಜೆಪಿ ಯುವ ಮೋರ್ಚಾ ನಾಯಕನ ನಡೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಡಳಿತದಲ್ಲಿ ವೈಫಲ್ಯ ಉಂಟಾಗಿದ್ದರೆ ಪರಮೇಶ್ವರ ಅವರನ್ನು ಟೀಕೆ ಮಾಡಲಿ. ಅದನ್ನು ಬಿಟ್ಟು ಕುಟುಂಬವನ್ನು ಎಳೆದು ತಂದು ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ’ ಎಂದರು.
‘ಇಂತಹ ಟೀಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಬಿಜೆಪಿಯವರದ್ದು ಹೀನ ಮನಸ್ಥಿತಿ. ಇದೇ ಅವರ ಸಂಸ್ಕೃತಿ. ಈ ಬಿಜೆಪಿಯವರು ಏನು ಮಾಡಿದರೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಇದನ್ನು ಮಾಡುವುದಕ್ಕೂ ಮಾನ ಮಾರ್ಯಾದೆ ಇರಬೇಕು. ಇದೇ ವರ್ತನೆ ಮುಂದುವರೆದರೆ, ಇಡೀ ಸಮುದಾಯ ಸಂಸದೀಯ ಪದಗಳಲ್ಲೇ ಪ್ರತಿಭಟಿಸಲಿದೆ’ ಎಂದು ಎಚ್ಚರಿಕೆ ನೀಡಿದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಇದ್ದರು.
‘ಹಿಂದೂ ಧರ್ಮದಲ್ಲಿ ನಾವೇ ಬಹುಸಂಖ್ಯಾತರು’
‘ಹಿಂದೂ ಧರ್ಮದಲ್ಲೇ ಇದ್ದೇನೆ. ದಲಿತ ಅಸ್ಪೃಶ್ಯರೇ ಈ ಧರ್ಮದ ಎಲ್ಲ ಆಚರಣೆಗಳನ್ನು ಮಾಡಿಕೊಂಡು ಬಂದವರು. ಈ ಧರ್ಮದಲ್ಲಿ ನಾವೇ ಬಹುಸಂಖ್ಯಾತರು. ಆದರೆ ನಮ್ಮನ್ನೇ ಟೀಕೆ ಮಾಡುತ್ತಾರೆ’ ಎಂದು ಆಂಜನೇಯ ಹೇಳಿದರು. ಈ ಹಿಂದೆ ನಾವು ಭಜನೆ ಮಾಡಿಕೊಂಡು ಭಕ್ತಿಯಿಂದ ದೇವರನ್ನು ಬಾವಿಯಲ್ಲಿ ವಿಸರ್ಜನೆ ಮಾಡಿ ಬರುತ್ತಿದ್ದೆವು. ಇದನ್ನೇ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಿಂದು ವಿರೋಧಿ ಆಂಜನೇಯ ಎಂದು ಹೇಳುತ್ತಾರೆ. ನಾನು ಹಿಂದು ವಿರೋಧಿಯಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.