ADVERTISEMENT

ಯಾವುದೇ ಧರ್ಮಕ್ಕೆ ಸೇರಿದ ಸಮುದಾಯ ಕಾನೂನಿಗೆ ಅತೀತವಲ್ಲ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 7:23 IST
Last Updated 12 ಆಗಸ್ಟ್ 2020, 7:23 IST
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು:ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಅಕ್ಷಮ್ಯವಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, 'ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ ಮಾಡಿ, ಕಾನೂನು ಕೈಗೆತ್ತಿಕೊಂಡರೂ ಅಂತವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು' ಎಂದು ಹೇಳಿದ್ದಾರೆ.

'ಯಾವುದೇ ಧರ್ಮದ ಸಮುದಾಯ ಕಾನೂನಿಗೆ ಅತೀತರಲ್ಲ. ನೆಲದ ಕಾನೂನನ್ನು ಗೌರವಿಸದ ಯಾರೊಬ್ಬರೂ ಶಿಕ್ಷೆಗೆ ಅರ್ಹರು. ಸರ್ಕಾರ ಪುಂಡಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ‌ಕೈಗೊಳ್ಳಬೇಕು. ಮುಂದೆಂದೂ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು' ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

'ಅವಿವೇಕಿಯೊಬ್ಬ ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದ ಆತನಿಗೆ ಶಿಕ್ಷೆಯಾಗಬೇಕು ನಿಜ. ಆದರೆ ಪೈಗಂಬರ್ ಅನುಯಾಯಿಗಳು ದಾಂಧಲೆಗಿಳಿಯುವ ಮೂಲಕ ಪ್ರವಾದಿಯ ಪವಿತ್ರ ಸಂದೇಶಗಳನ್ನು ಮಣ್ಣುಪಾಲು ಮಾಡುವುದು ಆ ಧರ್ಮಕ್ಕೆ ಮಾಡಿದ ಅಪಚಾರ' ಎಂದು ಎಚ್‌ಡಿಕೆ ಹೇಳಿದ್ದಾರೆ.

'ಕಾನೂನು ಪಾಲಕ ಪೊಲೀಸರು ಮತ್ತು ವರದಿಗಾಗಿ ತೆರಳಿದ್ದ ಪತ್ರಕರ್ತರ ಮೇಲೆ ಅಮಾನುಷ ದೌರ್ಜನ್ಯ ನಡೆಸುವ ಮೂಲಕ ನಾಗರಿಕ ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಇದಲ್ಲದೆ ವರ್ತಿಸಿರುವುದು ಅತ್ಯಂತ ಖಂಡನೀಯ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಧರ್ಮದ ಹೆಸರಿನಲ್ಲಿ ಪುಂಡಾಟಿಕೆ ನಡೆಸುವ ಮೂಲಕ ಸಂವಿಧಾನದ ಮೇಲೆ ಸವಾರಿ ಮಾಡುವ ಇಂತಹ ಘಟನೆಗಳಿಂದ ಸಾರ್ವತ್ರಿಕ ತಿರಸ್ಕಾರಕ್ಕೆ ಮತ್ತು ಅವಗಣನೆಗೆ ಸಮುದಾಯವೊಂದು ಪದೇಪದೇ ಗುರಿಯಾಗುತ್ತಿರುವುದು ಸ್ವಯಂಕೃತ ಅಪರಾಧವಲ್ಲದೆ ಬೇರೇನಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

'ಈ ಘಟನೆ ಪೂರ್ವಯೋಜಿತ ಸಂಚು ಎಂಬ ಅನುಮಾನಕ್ಕೂ ಪುಷ್ಟಿ ನೀಡಿದೆ. ಸ್ಥಳೀಯ ಜನಪ್ರತಿನಿಧಿಗಳ, ಸ್ವಜನಪಕ್ಷಪಾತ, ಅಧಿಕಾರ ಲಾಲಸೆಗಳಿಂದಾಗಿ ಇಂಥದೊಂದು ಸಣ್ಣ ಕಿಡಿ ಬೆಂಕಿಯುಂಡೆ ಆಗುವ ಮೂಲಕ ಅಮಾಯಕ ಜನರ ಸಿಟ್ಟು-ಸೆಡವು ಸ್ಪೋಟಗೊಂಡಿದೆ. ನಿರುಪದ್ರವಿಗಳ ರಕ್ತ ಚೆಲ್ಲಾಡಿದೆ. ಕೌಟುಂಬಿಕ ದ್ವೇಷಾಸೂಯೆಗಳು ದುರ್ವರ್ತನೆಗೆ ವೇದಿಕೆಯಾಗಿರುವುದು ಸುಳ್ಳಲ್ಲ' ಎಂದು ಅವರು ಹೇಳಿದ್ದಾರೆ.

'ಅಲ್ಲಾಹ್ ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರ ಸೌಜನ್ಯದ ಆಜ್ಞೆ ನೀಡುತ್ತಾನೆ. ಮತ್ತು ಅಶ್ಲೀಲಕಾರ್ಯ, ದುಷ್ಕೃತ್ಯ, ಅಕ್ರಮ, ಅತ್ಯಾಚಾರಗಳನ್ನು ನಿಷೇಧಿಸುತ್ತಾನೆ. ನೀವು ಜಾಗೃತರಾಗಲಿಕ್ಕಾಗಿ ಅವನು ನಿಮಗೆ ಉಪದೇಶ ನೀಡುತ್ತಾನೆ' ಎಂದು ಕುರಾನ್‌ನ ವಾಕ್ಯಗಳನ್ನು ಟ್ವೀಟ್‌ ಮಾಡಿದ್ದಾರೆ.

'ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ' ಎಂಬ ಬಸವಣ್ಣನವರ ವಚನವನ್ನು ಮಾಜಿ ಸಿಎಂ ಸ್ಮರಿಸಿದ್ದಾರೆ.

ಎಚ್‌ಡಿಕೆ ಸರಣಿ ಟ್ವೀಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.