ADVERTISEMENT

ಪಿಯುಸಿ ಉಪನ್ಯಾಸಕರಿಗೆ ಧಮ್ಕಿ ಹಾಕಿಸುವುದನ್ನು ಸರ್ಕಾರ ನಿಲ್ಲಿಸಲಿ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 30 ಮೇ 2020, 13:18 IST
Last Updated 30 ಮೇ 2020, 13:18 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಪಿಯುಸಿ ಪರೀಕ್ಷೆ ಮುಗಿಯಲು ಜೂನ್ 18ರವರೆಗೆ ಕಾಲಾವಕಾಶ ಇದೆ. ಸರ್ಕಾರ ''ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಪ್ರಯೋಗ ಮಾಡಲು ಮುಂದಾಗಿರುವುದನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸುತ್ತೇನೆ ಎಂದು ವಿಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರನ್ನು ನಿಯೋಜಿಸುವ ಮೊದಲು ವಿಕೇಂದ್ರೀಕರಣ ವ್ಯವಸ್ಥೆಯಾಗಬೇಕು. ಮೌಲ್ಯಮಾಪನಕ್ಕೆ ಬರದಿದ್ದರೆ ವೇತನ ರಹಿತ ರಜೆ ಎಂದು ಡಿಡಿಪಿಐಗಳು, ಜಿಲ್ಲಾಧಿಕಾರಿಗಳಿಂದ 'ಧಮ್ಕಿ' ಹಾಕಿಸುತ್ತಿರುವುದು ಸರ್ಕಾರದ ಅವಿವೇಕದ ಕ್ರಮ ಎಂದು ಕಿಡಿಕಾರಿದ್ದಾರೆ.

ಸೂಕ್ತ ವಸತಿ, ಸಾರಿಗೆ ಮತ್ತು ಹೋಟೆಲ್ ಸೌಲಭ್ಯ ಇಲ್ಲದಿರುವಾಗ ಹೊರ ಜಿಲ್ಲೆಗಳಿಗೆ ಹೋಗಿ ಉಪನ್ಯಾಸಕರು ಮೌಲ್ಯಮಾಪನ ಮಾಡುವುದು ಬಲುಕಷ್ಟ. ಯಾವುದೇ ಕನಿಷ್ಠ ಸೌಲಭ್ಯಗಳನ್ನು ಒದಗಿಸದೆ ಮೌಲ್ಯಮಾಪನಕ್ಕೆ ಒತ್ತಡ ತಂತ್ರ ಅನುಸರಿಸುತ್ತಿರುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರ ಮೇಲೆ ರಾಜ್ಯ ಸರ್ಕಾರ ಒತ್ತಡ ತಂತ್ರ ಹೇರುತ್ತಿರುವುದು ಖಂಡನೀಯ. ಕೊರೊನಾ ಸೋಂಕು ಸಮುದಾಯಕ್ಕೆ ವ್ಯಾಪಿಸುವ ಭೀತಿಯಲ್ಲಿರುವಾಗ ಬೆದರಿಕೆಯ ಅಸ್ತ್ರ ಬಳಸುವ ಮೂಲಕ ಉಪನ್ಯಾಸಕರ ಜೀವದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.