ADVERTISEMENT

ಮುಖ್ಯಮಂತ್ರಿ ಆದ ನಂತರ ಕುಮಾರಸ್ವಾಮಿ ಭೇಟಿ ನೀಡಿದ ದೇಗುಲಗಳ ಸಂಖ್ಯೆ 60!

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 16:48 IST
Last Updated 22 ಸೆಪ್ಟೆಂಬರ್ 2018, 16:48 IST
ಚಿತ್ರ ಕೃಪೆ: ಫೇಸ್‍ಬುಕ್
ಚಿತ್ರ ಕೃಪೆ: ಫೇಸ್‍ಬುಕ್   

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಕ್ಕೇರಿದ ನಂತರ ದೇವಾಲಯಗಳಿಗೆ ಭೇಟಿ ನೀಡಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.ಎರಡು ದಿನಕ್ಕೊಂದು ಬಾರಿ ಕುಮಾರಸ್ವಾಮಿ ದೇಗುಲಗಳಿಗೆ ಭೇಟಿ ನೀಡುತ್ತಿದ್ದು ದೇವರ ದರ್ಶನ ಅರ್ಧಶತಕ ಪೂರೈಸಿದ್ದಾರೆ.

ಮೇ 24ನೇ ತಾರೀಖಿನಿಂದ ಇಲ್ಲಿಯವರೆಗೆ ( 121 ದಿನಗಳು) ಕುಮಾರಸ್ವಾಮಿ ಅವರು 60 ದೇವಸ್ಥಾನ ಮತ್ತು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.

ಕರ್ನಾಟಕದಲ್ಲಿ ಚುನಾವಣೆ ಆರಂಭ ಆದಾಗ ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡರು ಜನವರಿ ತಿಂಗಳಲ್ಲಿ ಶೃಂಗೇರಿ ಶ್ರೀ ಶಾರದಾಂಬ ದೇವಾಲಯದಲ್ಲಿ ಅತಿ ರುದ್ರ ಮಹಾಯಜ್ಞ ಮಾಡಿದ್ದರು.12 ದಿನಗಳ ಕಾಲ ನಡೆದ ಈ ಯಜ್ಞಕ್ಕೆ ₹2 ಕೋಟಿ ಖರ್ಚಾಗಿತ್ತು.

ADVERTISEMENT

224 ಸದಸ್ಯರಿರುವ ಕರ್ನಾಟಕ ವಿಧಾನಸಭೆಯಲ್ಲಿ 37 ಸೀಟುಗಳನ್ನು ಗೆದ್ದುಮುಖ್ಯಮಂತ್ರಿ ಸ್ಥಾನಕ್ಕೇರಿದ ನಂತರ ಕುಮಾರಸ್ವಾಮಿ ಅವರಪೂಜೆ, ದೇವಾಲಯ ಭೇಟಿ ನಿರಂತರವಾಗಿ ನಡೆಯುತ್ತಿದೆ.

ಅಧಿಕಾರ ಸ್ವೀಕರಿಸುವ ಮುನ್ನಜನರಿಗಾಗಿ ಪ್ರಾರ್ಥನೆ ಮಾಡಲು ಕುಮಾರಸ್ವಾಮಿ ದೇಗುಲಗಳಿಗೆ ಭೇಟಿ ನೀಡಿದ್ದರು.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬರುತ್ತಿದ್ದಂತೆ ಪತ್ನಿ ಅನಿತಾ ಮತ್ತು ಸಹೋದರ, ಶಾಸಕ ಎಚ್.ಡಿ ರೇವಣ್ಣ ಜತೆ ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ತಾಲೂಕಿನಲ್ಲಿರುವ 5 ದೇವಾಲಯಗಳಿಗೆ ಭೇಟಿ ನೀಡಿದ್ದರು.ಅಲ್ಲಿ ಅವರ ಕುಟುಂಬ ಅಭಿಷೇಕ, ಪೂಜೆ ಸಲ್ಲಿಸಿತ್ತು.

ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿದ ನಂತರ ಎಚ್‍ಡಿಕೆ, ಕುಕ್ಕೆ ಸುಬ್ರಮಣ್ಯ ಮತ್ತು ಧರ್ಮಸ್ಥಳಕ್ಕೆ ಭೇಟಿ ನೀಡಿದರು.ಕೊಡಗು ಜಿಲ್ಲೆ ಪ್ರವಾಹದಿಂದ ತತ್ತರಿಸಿ ಹೋದ ದಿನಗಳಲ್ಲಿ ಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕುತ್ತಿದ್ದರು.ಆನಂತರ ಅವರು ಮೈಸೂರಿನ ಸುತ್ತೂರು ಮಠ ಮತ್ತು ತುಮಕೂರಿನಲ್ಲಿರುವ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಕರ್ನಾಟಕ ಮಾತ್ರವಲ್ಲ, ಅಜ್ಮೇರ್‌ನಲ್ಲಿರುವ ಖ್ವಾಜಾ ಮೊಯಿನುದ್ದೀನ್ ಚಿಸ್ಟಿ ದರ್ಗಾಕ್ಕೂ ಭೇಟಿ ನೀಡಿದ್ದಾರೆ ಕುಮಾರಸ್ವಾಮಿ.

ಅಪಾರ ಭಕ್ತಿ ನಂಬಿಕೆ ಹೊಂದಿರುವ ಇವರು, ತಾನು ಮುಖ್ಯಮಂತ್ರಿಯಾಗುವುದಕ್ಕೆ ಸ್ವಾಮಿ ಅಯ್ಯಪ್ಪನ ಅನುಗ್ರಹವೇ ಕಾರಣ ಎಂದಿದ್ದರು.ತಲಕಾವೇರಿಗೆ ಭೇಟಿ ನೀಡುವ ಮೂಲಕ 1999ರ ನಂತರ ಮೊದಲ ಬಾರಿ ಈ ದೇವಾಲಯಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ರಾಜ್ಯದ ಜನರ ಒಳಿತಿಗಾಗಿ ಕಾವೇರಿಗೆ ಪೂಜೆ ಸಲ್ಲಿಸಿದ್ದ ಈ ದಂಪತಿ ಉತ್ತಮ ಮಳೆಗಾಗಿ ಪ್ರಾರ್ಥನೆ ಮಾಡುವಂತೆ ರೈತರಿಗೆ ಕರೆ ನೀಡಿದ್ದರು.

ಕುಮಾರಸ್ವಾಮಿ ಅವರು ಶನಿವಾರ (ಇಂದು) ಬೆಳಗ್ಗೆ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.