ADVERTISEMENT

ಹಾನಗಲ್, ಸಿಂದಗಿ‌ ವಿಧಾನಸಭೆ‌ ಕ್ಷೇತ್ರಗಳಿಗೆ ಅ. 30ರಂದು ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 5:12 IST
Last Updated 28 ಸೆಪ್ಟೆಂಬರ್ 2021, 5:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಶಾಸಕರಾಗಿದ್ದ ಸಿ.ಎಂ. ಉದಾಸಿ ಹಾಗೂ ಎಂ.ಸಿ. ಮನಗೂಳಿ ಅವರ‌ ನಿಧನದಿಂದ ತೆರವಾಗಿರುವ ಕರ್ನಾಟಕದ ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ‌ ಕ್ಷೇತ್ರಗಳ ಉಪ ಚುನಾವಣೆ ಅಕ್ಟೋಬರ್ 30ರಂದು ನಡೆಯಲಿದೆ.

ಅಕ್ಟೋಬರ್ 1ರಂದು ಉಪಚುನಾವಣೆಯ ಅಧಿಸೂಚನೆ ಹೊರಬೀಳಲಿದ್ದು, ಅಕ್ಟೋಬರ್ 8 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಅ. 11ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅ.13 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ. ಅ.30ರಂದು ಮತದಾನ ನಡೆಯಲಿದ್ದು, ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ರಾಜ್ಯದ ಈ ಎರಡು ವಿಧಾನಸಭೆ‌ ಕ್ಷೇತ್ರಗಳಲ್ಲದೆ, ರಾಷ್ಟ್ರದ ವಿವಿಧೆಡೆ ತೆರವಾಗಿರುವ ಇತರ 28 ವಿಧಾನಸಭೆ ಕ್ಷೇತ್ರಗಳು ಹಾಗೂ ಮೂರು ಲೋಕಸಭೆ (ಮಧ್ಯಪ್ರದೇಶದ ಖಾಂಡ್ವಾ, ಹಿಮಾಚಲ ಪ್ರದೇಶದ ಮಂಡಿ ಹಾಗೂ ಕೇಂದ್ರಾಡಳಿತ‌ ಪ್ರದೇಶವಾದ ದಾದರ್ ಮತ್ತು ನಗರ್ ಹವೇಲಿ) ಕ್ಷೇತ್ರಗಳಿಗೂ ಇದೇ ಅವಧಿಯಲ್ಲಿ ಉಪ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.

ಸಿಂದಗಿ ಶಾಸಕರಾಗಿದ್ದ ಎಂ.ಸಿ. ಮನಗೂಳಿ 2021ರ ಜನವರಿ 28ರಂದು ಹಾಗೂ ಹಾನಗಲ್ ಶಾಸಕರಾಗಿದ್ದ ಸಿ.ಎಂ. ಉದಾಸಿ ಅವರು 2021ರ ಜೂನ್ 9ರಂದು ನಿಧನರಾಗಿದ್ದರಿಂದ ಉಪ ಚುನಾವಣೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.