ದಯಾಮರಣ
ಬೆಂಗಳೂರು: ‘ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್) 20 ತಿಂಗಳಿನಿಂದಲೂ ಬಿಲ್ ಪಾವತಿಸದೇ ಕಿರುಕುಳ ನೀಡುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಮಗೆ ದಯಾಮರಣಕ್ಕೆ ಅವಕಾಶ ನೀಡಬೇಕು’ ಎಂದು ಕಿಯೋನಿಕ್ಸ್ ನೋಂದಾಯಿತ ವೆಂಡರ್‌ದಾರರ ವೆಲ್‌ಫೇರ್ ಅಸೋಸಿಯೇಷನ್ ರಾಷ್ಟ್ರಪತಿ, ಪ್ರಧಾನಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿದೆ.
ಸೋಮವಾರ ಮೂರು ಪುಟಗಳ ಪತ್ರವನ್ನು ಅಂಚೆ ಮೂಲಕ ರವಾನಿಸಿರುವ ಅಸೋಸಿಯೇಷನ್ ಅಧ್ಯಕ್ಷ ವಸಂತ್ ಕೆ. ಬಂಗೇರ ಮತ್ತು ಇತರರು, ‘2023ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಿಯೋನಿಕ್ಸ್‌ನ 450ರಿಂದ 500 ವೆಂಡರ್‌ಗಳ ಬಾಕಿ ಬಿಲ್ ತಡೆ ಹಿಡಿಯಲಾಗಿದೆ. ತನಿಖೆಯ ನೆಪದಲ್ಲಿ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಇದರಿಂದ ಆರು ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬರುವಂತಾಗಿದೆ. ಆರ್ಥಿಕ ನಷ್ಟ ತಾಳಲಾರದೆ ವೆಂಡರ್‌ಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ದೂರಿದ್ದಾರೆ.
‘ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ಬಿಲ್ ಪಾವತಿಗೆ ಶೇಕಡ 12ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರ ವಿರುದ್ಧ ವೆಂಡರ್‌ಗಳು ಪ್ರತಿಭಟನೆ ನಡೆಸಿದ್ದೆವು. ಇದರಿಂದ ಕೆರಳಿದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ನಿಗಮದ ಅಧಿಕಾರಿಗಳು ಬಿಲ್ ಪಾವತಿಗೆ ತಡೆಯೊಡ್ಡಿದ್ದಾರೆ. ಸಚಿವರು, ಮುಖ್ಯಮಂತ್ರಿ, ರಾಜ್ಯಪಾಲರು ಎಲ್ಲರಿಗೂ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾರಿಂದಲೂ ನಮ್ಮ ಸಮಸ್ಯೆಗೆ ಪರಿಹಾರ ಲಭಿಸಿಲ್ಲ’ ಎಂದಿದ್ದಾರೆ.
‘ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ವ್ಯವಸ್ಥಾಪಕ ನಿರ್ದೇಶಕ ಪವನ್ ಕುಮಾರ್ ಮಾಲಪಾಟಿ ಮತ್ತು ಹಣಕಾಸು ವಿಭಾಗದ ನಿರ್ದೇಶಕ ನಿಶ್ಚಿತ್ ಅವರೇ ವೆಂಡರ್‌ಗಳು ಈಗ ಎದುರಿಸುತ್ತಿರುವ ಸಮಸ್ಯೆಗೆ ಕಾರಣ. ನಮ್ಮಲ್ಲಿ ಯಾರಾದರೂ ಪ್ರಾಣ ಕಳೆದುಕೊಂಡರೆ ಈ ನಾಲ್ವರೇ ಹೊಣೆಗಾರರು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಬಾಕಿ ಇರುವ ಬಿಲ್ ಮೊತ್ತವನ್ನು ಒಂದು ವಾರದೊಳಗೆ ಪಾವತಿಸಬೇಕು. ಇಲ್ಲವಾದರೆ 450ರಿಂದ 500 ಮಂದಿ ವೆಂಡರ್‌ಗಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧರಿದ್ದೇವೆ’ ಎಂದು ಪತ್ರದಲ್ಲಿ ಹೇಳಿದ್ದಾರೆ. ಪ್ರತಿಯನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೂ ಕಳುಹಿಸಿದ್ದಾರೆ.
‘ದೊಡ್ಡವರಿಗೆ ಅನುಕೂಲ’: ‘ಕಿಯೋನಿಕ್ಸ್ ವೆಂಡರ್‌ಗಳ ನೋಂದಣಿ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಇದರಿಂದಾಗಿ ಈ ಹಿಂದೆ ಇದ್ದ ಸುಮಾರು 500 ವೆಂಡರ್‌ಗಳಲ್ಲಿ ಬಹುತೇಕರು ನೋಂದಣಿ ನವೀಕರಿಸಲು ಸಾಧ್ಯವಾಗಿಲ್ಲ. ಸಚಿವರು ಮತ್ತು ಅಧಿಕಾರಿಗಳಿಗೆ ಬೇಕಾದ ಕೆಲವು ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಈ ರೀತಿಯ ಬದಲಾವಣೆ ತರಲಾಗಿದೆ’ ಎಂದು ಅಸೋಸಿಯೇಷನ್ ಪತ್ರದಲ್ಲಿ ದೂರಿದೆ.
4 ವರ್ಷಗಳಲ್ಲಿ ₹500 ಕೋಟಿ ಅಕ್ರಮ: ಪ್ರಿಯಾಂಕ್
ಕಿಯೋನಿಕ್ಸ್‌ನಲ್ಲಿ ₹300 ಕೋಟಿಯಷ್ಟು ಹಗರಣ ನಡೆದಿದೆ ಎಂದು ಮಹಾ ಲೇಖಪಾಲರೇ ವರದಿ ನೀಡಿದ್ದಾರೆ. ಈ ಬಗ್ಗೆ ತನಿಖೆಗೆ ಐಎಎಸ್ ಅಧಿಕಾರಿ ಮಹೇಶ್ವರ ರಾವ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದೆವು. ಹೀಗಾಗಿ ಎಲ್ಲ ಬಿಲ್‌ಗಳನ್ನು ನಾವು ತಡೆಹಿಡಿದಿದ್ದೇವೆ’ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾಲ್ಕು ವರ್ಷಗಳಲ್ಲಿ ₹500 ಕೋಟಿಯಷ್ಟು ಅಕ್ರಮ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸಮಿತಿಯ ವರದಿ ಬಂದ ಬಳಿಕ ಬಿಲ್ ಪಾವತಿಸುತ್ತೇವೆ’ ಎಂದರು.
‘ಈ ರೀತಿಯ ಬ್ಲಾಕ್‌ಮೇಲ್ ಮಾಡಿದರೆ ಹೇಗೆ? ಕಮಿಷನ್ ವಿಚಾರವನ್ನು ಗುತ್ತಿಗೆದಾರರು ಪತ್ರದಲ್ಲಿ ಉಲ್ಲೇಖಿಸಿದ್ದಾರೆಯೇ? ನಿಯಮ ಪಾಲನೆ ಮಾಡಬೇಡಿ ಎಂದರೆ ಹೇಗೆ? ಕಾನೂನು ಮೀರಿ ಬಿಲ್ ಪಾವತಿ ಮಾಡಲು ಆಗುತ್ತದೆಯೇ’ ಎಂದೂ ಪ್ರಶ್ನಿಸಿದರು.
‘ಕಿಯೋನಿಕ್ಸ್‌ನ 4ಜಿ ವಿನಾಯಿತಿಯನ್ನು ನಾನೇ ಹಿಂಪಡೆಯುವಂತೆ ಮಾಡಿದ್ದೇನೆ. ಇದರಿಂದ ಕೆಲವರಿಗೆ ತೊಂದರೆಯಾದರೆ ಏನೂ ಮಾಡಲು ಆಗುವುದಿಲ್ಲ. ಕಿಯೋನಿಕ್ಸ್‌ನಲ್ಲಿ ಯಾಕೆ ಹೀಗಾಗಿದೆ ಎಂದು ಈ ಹಿಂದಿನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಬಳಿ ಕೇಳಬೇಕು. ಅವರ ಅವಧಿಯಲ್ಲಿ ಆಗಿರುವ ಹಗರಣಕ್ಕೆ ನಾನು ಉತ್ತರ ಕೊಡಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.