ಇಸ್ಕಾನ್
ನವದೆಹಲಿ: ಇಸ್ಕಾನ್ ಬೆಂಗಳೂರು ಹಾಗೂ ಇಸ್ಕಾನ್ ಮುಂಬೈ ನಡುವಿನ 25 ವರ್ಷಗಳ ಹಳೆಯ ಆಸ್ತಿ ವಿವಾದವನ್ನು ಶುಕ್ರವಾರ ಬಗೆಹರಿಸಿರುವ ಸುಪ್ರೀಂ ಕೋರ್ಟ್, ‘ಬೆಂಗಳೂರಿನ ಹರೇ ಕೃಷ್ಣಗಿರಿಯ ದೇವಸ್ಥಾನವು ಇಸ್ಕಾನ್-ಬೆಂಗಳೂರು ಸಂಸ್ಥೆಗೆ ಸೇರಿದ್ದು’ ಎಂದು ತೀರ್ಪು ನೀಡಿದೆ.
ಬೆಂಗಳೂರಿನಲ್ಲಿರುವ ಐತಿಹಾಸಿಕ ಹರೇ ಕೃಷ್ಣ ದೇವಸ್ಥಾನದ ಹಕ್ಕಿನ ಕುರಿತು ಇಸ್ಕಾನ್ ಮುಂಬೈ ಪರವಾಗಿ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಇಸ್ಕಾನ್ ಬೆಂಗಳೂರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ಪೀಠವು, ‘ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿಯಾಗಿರುವ ಇಸ್ಕಾನ್ ಬೆಂಗಳೂರಿಗೆ ಈ ದೇವಸ್ಥಾನ ಸೇರಿದ್ದು’ ಎಂದು ತೀರ್ಪು ನೀಡಿದೆ.
ಹೈಕೋರ್ಟ್ 2011ರ ಮೇ 23ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಇಸ್ಕಾನ್ ಬೆಂಗಳೂರು 2011ರ ಜೂನ್ 2ರಂದು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಬೆಂಗಳೂರಿನ ಸ್ಥಳೀಯ ನ್ಯಾಯಾಲಯ 2009ರಲ್ಲಿ ನೀಡಿದ್ದ ಆದೇಶ ರದ್ದುಗೊಳಿಸಿದ್ದ ಹೈಕೋರ್ಟ್‌ನ ತೀರ್ಪನ್ನು ಇಸ್ಕಾನ್ ಬೆಂಗಳೂರಿನ ಕೋದಂಡರಾಮ ದಾಸ ಅರ್ಜಿಯಲ್ಲಿ ಪ್ರಶ್ನಿಸಿದ್ದರು.
ವಿಚಾರಣಾ ನ್ಯಾಯಾಲಯವು ಇಸ್ಕಾನ್ ಬೆಂಗಳೂರಿನ ಪರವಾಗಿ ತೀರ್ಪು ನೀಡಿತ್ತು. ಅದರ ಕಾನೂನುಬದ್ಧ ಅಧಿಕಾರ ಗುರುತಿಸಿ ಮತ್ತು ಇಸ್ಕಾನ್ ಮುಂಬೈ ವಿರುದ್ಧ ಶಾಶ್ವತ ತಡೆಯಾಜ್ಞೆ ನೀಡಿತ್ತು.
ಕರ್ನಾಟಕದಲ್ಲಿ ನೋಂದಣಿ ಆಗಿರುವ ಇಸ್ಕಾನ್ ಬೆಂಗಳೂರು ದಶಕಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಬೆಂಗಳೂರಿನ ದೇವಾಲಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ. ಇಲ್ಲಿ ಇಸ್ಕಾನ್ ಮುಂಬೈಗೆ ಯಾವುದೇ ಅಧಿಕಾರ ಇಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
1860ರ ರಾಷ್ಟ್ರೀಯ ಸಂಘಗಳ ನೋಂದಣಿ ಕಾಯ್ದೆ ಮತ್ತು ಬಾಂಬೆ ಸಾರ್ವಜನಿಕ ಟ್ರಸ್ಟ್ ಕಾಯ್ದೆ 1950ರ ಅಡಿಯಲ್ಲಿ ಇಸ್ಕಾನ್ ಮುಂಬೈ ನೋಂದಣಿಯಾಗಿದೆ. ‘ಇಸ್ಕಾನ್ ಬೆಂಗಳೂರು ಕೇವಲ ತನ್ನ ಶಾಖೆಯಾಗಿದೆ ಮತ್ತು ಈ ಆಸ್ತಿಯು ತನ್ನ ವ್ಯಾಪ್ತಿಗೆ ಸೇರಿದೆ’ ಎಂದು ಇಸ್ಕಾನ್ ಮುಂಬೈ ವಾದಿಸಿತ್ತು.
ಬೆಂಗಳೂರು: ‘ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಶ್ರೀಲ ಪ್ರಭುಪಾದರ ಅನುಯಾಯಿಗಳಿಗೆ ಮತ್ತು ನಿಜವಾದ ಭಕ್ತರಿಗೆ ಜಯವಾಗಿದೆ’ ಎಂದು ಇಸ್ಕಾನ್–ಬೆಂಗಳೂರು ಅಧ್ಯಕ್ಷ ಮಧು ಪಂಡಿತ ದಾಸ್ ಹೇಳಿದ್ದಾರೆ.
‘ಶ್ರೀಲ ಪ್ರಭುಪಾದರ ಭೋದನೆಗೆ ವಿರುದ್ಧವಾಗಿ ಇಸ್ಕಾಂ–ಮುಂಬೈನ ಅಧ್ಯಕ್ಷರು ನಡೆದುಕೊಂಡಿದ್ದರು. ಇಸ್ಕಾನ್–ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ್ದರು. ಅದೆಲ್ಲವೂ ಈಗ ಕೊನೆಯಾಗಿದೆ. ಶ್ರೀಲ ಪ್ರಭುಪಾದರು ಮಾತ್ರವೇ ಇಸ್ಕಾನ್‌ನ ಏಕಮಾತ್ರ ಆಚಾರ್ಯರು, ಉಳಿದ ಭಕ್ತಾದಿಗಳೆಲ್ಲರೂ ಅವರ ಅನುಯಾಯಿಗಳು ಅಷ್ಟೆ ಎಂಬ ತತ್ವಕ್ಕೆ ಸಿಕ್ಕ ಜಯವಿದು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.