ADVERTISEMENT

ಬಿಜೆಪಿ ಅಧಿಕಾರದ ಲಾಲಸೆ ಪ್ರದರ್ಶಿಸಿದರೆ ಸುಮ್ಮನಿರುವುದು ಹೇಗೆ?: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 10:05 IST
Last Updated 9 ಜೂನ್ 2021, 10:05 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿ ಅಧಿಕಾರದ ಲಾಲಸೆ ಪ್ರದರ್ಶಿಸಿದರೆ ಸುಮ್ಮನಿರುವುದು ಹೇಗೆ? ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾಯಕತ್ವ ಬದಲಾವಣೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್‌ ಮಾಡಿರುವ ಅವರು, ‘ಕೋವಿಡ್‌ ಅಟ್ಟಹಾಸ ಮೆರೆಯುತ್ತಿರುವ ಹೊತ್ತಿನಲ್ಲಿ, ಬ್ಲಾಕ್‌ ಫಂಗಸ್‌ ಎಂಬ ಭಯಾನಕ ರೋಗ ಜನರನ್ನು ಆಪೋಷನ ತೆಗೆದುಕೊಳ್ಳುತ್ತಿರುವ ಗಳಿಗೆಯಲ್ಲಿ, ಮಕ್ಕಳು ಪಿಡುಗಿಗೆ ಸಿಲುಕಲಿದ್ದಾರೆಂಬ ಎಚ್ಚರಿಕೆಗಳ ನಡುವಿನಲ್ಲಿ, ಕನ್ನಡದ ಅಸ್ಮಿತೆಗೆ ಧಕ್ಕೆಯಾಗಿರುವ ಕಾಲಘಟ್ಟದಲ್ಲಿ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಅದು ಎಂಥಾ ಸಂದರ್ಭದಲ್ಲಿ?’ ಎಂದು ಪ್ರಶ್ನಿಸಿದ್ದಾರೆ.

‘ರಾಜ್ಯ ಸಂದಿಗ್ಧತೆಗೆ ಸಿಲುಕಿರುವ ಈ ಹೊತ್ತಿನಲ್ಲಿ ಇದೆಂಥ ರಾಜಕೀಯ? ಈಗ ರಾಜ್ಯದ ಎದುರಿಗೆ ಇರುವುದು ನಾಯಕತ್ವದ ಪ್ರಶ್ನೆಯೋ? ಅಥವಾ ಜನರ ಹಿತದ ಪ್ರಶ್ನೆಯೋ? ರಾಜ್ಯದಲ್ಲಿ ಚಿತೆಗಳಿಗೆ ಹಚ್ಚಿದ ಜ್ವಾಲೆ ಇನ್ನೂ ಆರಿಲ್ಲ. ಅದು ಎಂದು ಆರುತ್ತದೆ ಎಂಬುದೇ ಯಾರಿಗೂ ತಿಳಿಯುತ್ತಿಲ್ಲ. ಇಂಥ ಸಂದರ್ಭದಲ್ಲಿ ಇಂಥ ಕ್ಷುಲ್ಲಕ ರಾಜಕಾರಣ ಅಗತ್ಯವಿದೆಯೇ?’ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ADVERTISEMENT

‘ರಾಜ್ಯ ಸರ್ಕಾರ ಕೋವಿಡ್‌ ಸ್ಥಿತಿಯನ್ನು ನಿಭಾಯಿಸಿದ ರೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸರ್ಕಾರ ಇನ್ನಾದರೂ ತಿದ್ದಿಕೊಳ್ಳಲಿದೆ ಎಂದು ನಾವು ಭಾವಿಸಿದೆವು. ಇಂಥ ಸಂದರ್ಭದಲ್ಲಿ ಸರ್ಕಾರವನ್ನು ಟೀಕಿಸಿ ರಾಜಕೀಯ ಮಾಡುವುದು ಬೇಡ ಎಂದು ಜೆಡಿಎಸ್‌ ನಿರ್ಧರಿಸಿತ್ತು. ಆದರೆ, ಬಿಜೆಪಿ ಅಧಿಕಾರದ ಲಾಲಸೆ ಪ್ರದರ್ಶಿಸಿದರೆ ಸುಮ್ಮನಿರುವುದು ಹೇಗೆ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಬಿ.ಎಸ್‌.ಯಡಿಯೂರಪ್ಪನವರು ತಾವು ಖರೀದಿಸಿ ತಂದ ಕುದುರೆಗಳ ಮೇಲೆ ತಾವೇ ಸವಾರಿ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಲೇ ಇರಲಿಲ್ಲ. ಅದರ ಬದಲಿಗೆ ಮಾಧ್ಯಮಗಳು ಬಣ್ಣಿಸುವ ‘ಸೋಕಾಲ್ಡ್‌ ಹುಲಿ, ಬಾಹುಬಲಿ‘ ಮುಂತಾದವರನ್ನುಮುಖ್ಯಮಂತ್ರಿ ಸೀಟಿನ ಮೇಲೆ ಕೂರಿಸಿದ್ದೇ ಸದ್ಯದ ರಾಜಕೀಯ ದುಸ್ಥಿತಿಗೆ ಕಾರಣ. ಇದು ಯಡಿಯೂರಪ್ಪನವರ ಸ್ವಯಂಕೃತ ಅಪರಾಧ’ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನೊಂದೆಡೆ, ‘ಅನ್ನ ಹಳಸಿದೆ, *** ಕಾದಿದೆ’ ಎಂಬಂತೆ ರಾಜ್ಯದ ಮತ್ತೊಂದು ರಾಜಕೀಯ ಪಕ್ಷ ಕಾದು ಕುಳಿತಿದೆ. ರಾಜ್ಯದಲ್ಲಿ ಹೊತ್ತಿರುವ ಚಿತೆಗಳ ಬೆಂಕಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಬೆಂದು ಹೋದರೆ, ನಂತರದ ದಿನಗಳಲ್ಲಿ ತನ್ನನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸಿಕೊಳ್ಳಲು ಆ ರಾಷ್ಟ್ರೀಯ ಪಕ್ಷ ಪ್ರಯತ್ನಗಳನ್ನು ಪೈಪೋಟಿಗೆ ಬಿದ್ದು ನಡೆಸುತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

‘ರಾಜ್ಯದ ಸಂಕಷ್ಟದ ಕಾಲದಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಅಧಿಕಾರದ ಲಾಲಸೆ, ಅದನ್ನು ಬಳಸಿಕೊಂಡು ಅಧಿಕಾರಕ್ಕೆ ಬರಲು ಕೋವಿಡ್‌ ನಿಯಮಗಳನ್ನೆಲ್ಲ ಮೀರಿ ಬೀದಿಗೆಬಿದ್ದಿರುವ ಕಾಂಗ್ರೆಸ್‌ ಪಕ್ಷಗಳೆರಡೂ ಆತ್ಮಾವಲೋಕನೆ ಮಾಡಿಕೊಳ್ಳಬೇಕು. ಸಂಕಷ್ಟದ ಪರಿಸ್ಥಿತಿಯನ್ನೇ ಅಧಿಕಾರಕ್ಕೇರಲು ಏಣಿ ಮಾಡಿಕೊಳ್ಳುತ್ತಿರುವ ಈ ಪಕ್ಷಗಳ ನಡೆಯನ್ನು ಜನ ಗಮನಿಸಬೇಕು’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.