ADVERTISEMENT

ಸಾವಿನ ‘ಲೆಕ್ಕಪರಿಶೋಧನೆ’ಗೆ ಸೂಚನೆ: ಸಚಿವ ಸುಧಾಕರ್‌ ಆತಂಕ

ಕೋವಿಡ್‌ಗೆ ಯುವಜನ, ಮಧ್ಯವಯಸ್ಕರ ಸಾವು ಹೆಚ್ಚು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 19:40 IST
Last Updated 6 ಏಪ್ರಿಲ್ 2021, 19:40 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಬೆಂಗಳೂರು: ‘ಕೋವಿಡ್‌ನಿಂದ ಯುವಜನರು ಮತ್ತು ಮಧ್ಯವಯಸ್ಕರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿರುವುದು ಆತಂಕದ ವಿಷಯ. ಸಾವಿನ ಲೆಕ್ಕಪರಿಶೋಧನೆ (ಆಡಿಟ್‌) ನಡೆಸಲು ತಾಂತ್ರಿಕ ಸಲಹಾ ಸಮಿತಿಗೆ ಸೂಚಿಸಲಾಗಿದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆ ಬೇಗ ಹರಡುತ್ತಿದೆ. ಇದರ ತೀವ್ರತೆ ಕಡಿಮೆ ಇದೆಯೋ ಅಥವಾ ಹೆಚ್ಚಿದೆಯೋ ಎಂದು ಹೇಳಲು ಈಗಲೇ ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸಲು ಬೇಕಾದ ಸಿದ್ಧತೆಗಳನ್ನು ಮಾಡಲಾಗಿದೆ’ ಎಂದರು.

48.5 ಲಕ್ಷ ಜನರಿಗೆ ಲಸಿಕೆ: ‘ರಾಜ್ಯದಲ್ಲಿ ಈವರೆಗೆ 48.05 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 22.5 ಲಕ್ಷ ಹಿರಿಯ ನಾಗರಿಕರು ಲಸಿಕೆ ಪಡೆದಿದ್ದಾರೆ. ಲಸಿಕೆ ವಿತರಣೆಯಲ್ಲಿ ಕರ್ನಾಟಕ 6 ನೇ ಸ್ಥಾನದಲ್ಲಿದೆ’ ಎಂದರು.

ADVERTISEMENT

33 ಸಾವಿರ ಹಾಸಿಗೆ: ‘ರಾಜ್ಯದಾದ್ಯಂತ 33,697 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೃತಕ ಆಮ್ಲಜನಕ ಸಹಿತ ಹಾಸಿಗೆಗಳ ಸಂಖ್ಯೆ 15,733 ಇದೆ. ಈ ಪೈಕಿ 10,083 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ 20 ಹಾಸಿಗೆ ಮೀಸಲಿಡಲು ಸೂಚಿಸಲಾಗಿದೆ’ ಎಂದೂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.