ADVERTISEMENT

‘ಕ್ಯಾರ್‌’, ಕರಾವಳಿಯಲ್ಲಿ ಭಾರಿ ಮಳೆ: ಹಲವೆಡೆ ಶಾಲಾ–ಕಾಲೇಜುಗಳಿಗೆ ರಜೆ

ಕರಾವಳಿ, ಮಲೆನಾಡಿನಲ್ಲಿ ‘ಆರೆಂಜ್‌ ಅಲರ್ಟ್‌’ ಘೋಷಣೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 18:27 IST
Last Updated 25 ಅಕ್ಟೋಬರ್ 2019, 18:27 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಶುಕ್ರವಾರ ಅರಬ್ಬಿ ಸಮುದ್ರದ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದ ದೃಶ್ಯ  – ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಶುಕ್ರವಾರ ಅರಬ್ಬಿ ಸಮುದ್ರದ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದ ದೃಶ್ಯ  – ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್   

ಬೆಂಗಳೂರು: ‘ಕ್ಯಾರ್‌’ ಚಂಡಮಾರುತದ ಪರಿಣಾಮ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಆಳೆತ್ತರದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಕಡಲ್ಕೊರೆತದ ಆತಂಕ ಎದುರಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮಳೆ ಅವಗಡದಿಂದ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಭಾರಿ ಮಳೆ ಕಾರಣ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಹಾಗೂ ಭಟ್ಕಳ, ಕಾರವಾರ, ಅಂಕೋಲಾ, ಹೊನ್ನಾವರ ಮತ್ತು ಕುಮಟಾ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ–ಕಾಲೇಜುಗಳಿಗೆ ಶನಿವಾರ ರಜೆ ಘೋಷಣೆ ಮಾಡಲಾಗಿದೆ.

ಹವಾಮಾನ ಇಲಾಖೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ‘ಆರೆಂಜ್‌ ಅಲರ್ಟ್‌’ ಘೋಷಣೆ ಮಾಡಿದ್ದು, ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ
ಗಳಲ್ಲಿ ಗುಡುಗು ಸಹಿತ ಮಳೆಯ ಎಚ್ಚರಿಕೆ ನೀಡಲಾಗಿದೆ.

ADVERTISEMENT

ಕಾಳಜಿ ಕೇಂದ್ರ: ಕುಮಟಾ ತಾಲ್ಲೂಕಿನಲ್ಲಿ ಮೂರು, ಅಂಕೋಲಾ ತಾಲ್ಲೂಕಿನಲ್ಲಿ ನಾಲ್ಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 11 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಕುರ್ಕಾಲು ಪಂಚಾಯಿತಿ ವ್ಯಾಪ್ತಿಯ ಕುಂಜಾರುಗಿರಿಯ ಸುಲೋಚನಾ (42) ಗುರುವಾರ ಸಂಜೆ ವೇಳೆ ಶಂಖತೀರ್ಥದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಉಡುಪಿ ತಾಲ್ಲೂಕಿನ ಕುಕ್ಕೆಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸಾಂತಜೆಡ್ಡು ಬಳಿ ರಾತ್ರಿ ಮರವೊಂದು ಮನೆಯ ಮೇಲೆ ಬಿದ್ದಿದ್ದು, ಆ ಮನೆಯಲ್ಲಿ ಆಶ್ರಯ ಪಡೆದಿದ್ದ ಕುಕ್ಕೆಹಳ್ಳಿಯ ರಿಕ್ಷಾ ಚಾಲಕ ರವೀಂದ್ರ ಕುಲಾಲ್ (38) ಮೃತಪಟ್ಟಿದ್ದಾರೆ.

ಕುಂದಾಪುರ ತಾಲ್ಲೂಕಿನಲ್ಲಿ ಅತ್ಯಧಿಕ 8.6 ಸೆಂ.ಮಿ., ಉಡುಪಿ ತಾಲ್ಲೂಕಿನಲ್ಲಿ 8.3 ಸೆಂ.ಮೀ. ಮಳೆ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಗಾಳಿಯ ಆರ್ಭಟ ಇತ್ತು, ಮೂಡಿಗೆರೆ ತಾಲ್ಲೂಕಿನ ಜಾವಳಿಯಲ್ಲಿ ವಿದ್ಯುತ್‌ ಕಂಬವೊಂದು ಉರುಳಿ ಮನೆಗೆ ಹಾನಿಯಾಗಿದೆ.

ಮಳೆಗಾಳಿ ರಭಸಕ್ಕೆ ಕೊಟ್ಟಿಗೆಹಾರದ ಸರ್ಕಾರಿ ಪ್ರೌಢಶಾಲೆಯ ಚಾವಣಿ ಹೆಂಚುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ತರುವೆ ಗ್ರಾಮದಲ್ಲಿ ಕೆಲ ಮನೆಗಳು ಹೆಂಚುಗಳು ಹಾರಿ ಬಿದ್ದಿವೆ. ಕಳಸ, ಬಣಕಲ್‌, ಬಳ್ಳೂರು, ಕುಂದೂರು ಭಾಗಗಳದಲ್ಲಿ ಕಾಫಿ, ಅಡಿಕೆ ಗಿಡಗಳು ನೆಲಕಚ್ಚಿವೆ.

ಸಾಧಾರಣ ಮಳೆ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆ ಸುರಿಯಿತು. ಮಡಿಕೇರಿಯಲ್ಲಿ ಮುಂಜಾನೆಯಿಂದಲೂ ದಟ್ಟ ಮೋಡ ಕವಿದ ವಾತಾವರಣವಿತ್ತು. ಆಗಾಗ್ಗೆ ರಭಸವಾಗಿ ಮಳೆ ಸುರಿಯಿತು. ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಜೋರು ಮಳೆಯಾಗಿದೆ.

ಭಾರಿ ಅಲೆಗೆ ಗೋಕರ್ಣ ಕಡಲತೀರದಲ್ಲಿ ಆತಂಕಗೊಂಡ ನಾಗರಿಕರು, ಮನೆಗಳಿಂದ ಹೊರಬರಲು ಅಂಜಿದರು. ಕುಡ್ಲೆ, ಓಂ ಮತ್ತು ಮೇನ್ ಬೀಚ್‌ಗಳಲ್ಲಿ ಅಲೆಗಳು ಅಬ್ಬರಿಸುತ್ತಿವೆ. ಗಾಳಿಯ ಆರ್ಭಟಕ್ಕೆ ಬೆದರಿದ ವಿದೇಶಿ ಪ್ರವಾಸಿಗರು ಅಲ್ಲಿಂದ ವಾಪಸಾಗಿದ್ದಾರೆ. ಮೀನುಗಾರಿಕಾ ಶೆಡ್‌ಗಳು,ಬಲೆ ನೀರಿನಲ್ಲಿ ತೇಲಿ ಹೋಗಿವೆ. ಮಹಾಬಲೇಶ್ವರನ ಆತ್ಮಲಿಂಗ ನೀರಿನಲ್ಲಿ ಮುಳುಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಖಾನಾಪುರ ತಾಲ್ಲೂಕಿನ ಕಣಕುಂಬಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಗಿದೆ. ಮಲಪ್ರಭಾ ನದಿಯ ಒಳಹರಿವು ಹೆಚ್ಚಾಗಿದೆ. ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆ ಇಳಿಮುಖವಾಗಿದ್ದು, ಕೃಷ್ಣಾ ನದಿಯ ಹರಿವು ಇಳಿಮುಖವಾಗಿದೆ. ಹುಬ್ಬಳ್ಳಿ–ಧಾರವಾಡದಲ್ಲಿಯೂ ಉತ್ತಮ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಹಲವೆಡೆ ಶುಕ್ರವಾರ ಭಾರಿ ಮಳೆಯಾಗಿದೆ. ಹೊಸನಗರ ತಾಲ್ಲೂಕಿನಾದ್ಯಂತ ದಿನವಿಡೀ ಬಿರುಸಿನಮಳೆಯಾಗಿದೆ. ತಾಲ್ಲೂಕಿನ ತೊಗರೆ ಗ್ರಾಮದ ನೀಲಕಂಠ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ರಿಪ್ಪನ್‌ಪೇಟೆಯಲ್ಲಿ ಗುರುವಾರ ರಾತ್ರಿಯಿಂದ ಮಳೆಯಾಗುತ್ತಿದೆ. ಶಿವಮೊಗ್ಗ ನಗರ, ತೀರ್ಥಹಳ್ಳಿ, ಕೋಣಂದೂರು ಸುತ್ತಮುತ್ತ, ಆಗುಂಬೆ, ಜೋಗ–ಕಾರ್ಗಲ್, ಸೊರಬ, ಆನವಟ್ಟಿ, ಶಿಕಾರಿಪುರ, ಶಿರಾಳಕೊಪ್ಪ, ಭದ್ರಾವತಿಯ ಸುತ್ತಮುತ್ತ ಸಾಧಾರಣಮಳೆ ಸುರಿದಿದೆ.

ನೀರಗಂಟಿ ಶವಪತ್ತೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಟ್ಟಿಗೆಹಳ್ಳಿ ಸಮೀಪದ ಹಳ್ಳದ ಪ್ರವಾಹದಲ್ಲಿ ಮೂರು ದಿನಗಳ ಹಿಂದೆ ಕೊಚ್ಚಿಹೋಗಿದ್ದ ನೀರಗಂಟಿ ಬಸವರಾಜಪ್ಪ ಅವರ ಶವ ಚೆಕ್‌ಡ್ಯಾಂನಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ. ದಾವಣಗೆರೆ ನಗರ ಸೇರಿ ಕೆಲವೆಡೆ ತುಂತುರು ಮಳೆಯಾಗಿದೆ. ನ್ಯಾಮತಿಯಲ್ಲಿ ಸಂಜೆ ಮಳೆ ಸುರಿಯಿತು.

ಭೀಮೆಗೆ 1.18 ಲಕ್ಷ ಕ್ಯುಸೆಕ್‌ ನೀರು: ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದಿದ್ದು ಅಲ್ಲಿನ ಜಲಾಶಯಗಳು ಭರ್ತಿಯಾಗಿದ್ದರಿಂದ ಭೀಮಾ ನದಿಗೆ ಹೆಚ್ಚುವರಿ ನೀರನ್ನು ಹರಿಬಿಡಲಾಗುತ್ತಿದೆ. ಅಫಜಲಪುರ ತಾಲ್ಲೂಕಿನ ಸೊನ್ನದ ಭೀಮಾ ಬ್ಯಾರೇಜ್‍ನ ಒಳ ಹರಿವು 1.16 ಲಕ್ಷ ಕ್ಯುಸೆಕ್‌ ಮತ್ತು ಹೊರ ಹರಿವು 1.18 ಲಕ್ಷ ಕ್ಯುಸೆಕ್‌ ಇದೆ.

ಗೋವಾದಲ್ಲಿ ಮಳೆ: ಗೋವಾದಲ್ಲಿ ಮಳೆಯ ಅಬ್ಬರ ಶುಕ್ರವಾರವೂ ಮುಂದುವರಿದಿದ್ದು, ದಕ್ಷಿಣ ಗೋವಾದ ಹಲವು ರಸ್ತೆಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಕಳೆದೆರಡು ದಿನಗಳಿಂದ ಇಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮೀನುಗಾರರು, ಪ್ರವಾಸಿಗರು ಸಮುದ್ರಕ್ಕಿಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.

ಮರದ ಕೊಂಬೆ ಬಿದ್ದು ವ್ಯಕ್ತಿ ಸಾವು

ಮಡಿಕೇರಿ:ವಿರಾಜಪೇಟೆ ತಾಲ್ಲೂಕಿನ ಪರಕಟಗೇರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಭಾರಿ ಮಳೆ ಹಾಗೂ ಗಾಳಿಯಿಂದ ಮರದ ಕೊಂಬೆಯೊಂದು ಬಿದ್ದು ಕುಪ್ಪಣಮಾಡ ಪೂಣಚ್ಚ (63) ಎಂಬುವವರು ಮೃತಪಟ್ಟಿದ್ದಾರೆ.

ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಬರುವಾಗ ತಲೆಯ ಮೇಲೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಅವರು ಮೃತಪಟ್ಟಿದ್ದಾರೆ.

ದಿಕ್ಕು ಬದಲಿಸುತ್ತಿರುವ ‘ಕ್ಯಾರ್’ ಚಂಡಮಾರುತ

ಬೆಂಗಳೂರು: ‘ರಾಜ್ಯದ ವಾಯವ್ಯ ದಿಕ್ಕಿನಿಂದ ಅರಬ್‌ ರಾಷ್ಟ್ರಗಳ ಕಡೆಗೆ ‘ಕ್ಯಾರ್‌’ ಚಂಡಮಾರುತ ಸಾಗುತ್ತಿದೆ. ಹೀಗಾಗಿ ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಅ.26ರಂದು ವ್ಯಾಪಕ ಮಳೆಯಾಗಲಿದ್ದು, ‘ಆರೆಂಜ್ ಅಲರ್ಟ್‌’ ಘೋಷಿಸಲಾಗಿದೆ’ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಗುಡುಗು ಸಿಡಿಲು ಹೆಚ್ಚಾಗಿ ಇರಲಿದೆ. ಕರಾವಳಿಯಲ್ಲಿ ಗಂಟೆಗೆ 45ರಿಂದ 65 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, 3ರಿಂದ 3.3 ಮೀಟರ್‌ನಷ್ಟು ಎತ್ತರದ ಅಲೆಗಳೂ ಏಳುತ್ತಿವೆ. ಹೀಗಾಗಿ ಶನಿವಾರ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.