ADVERTISEMENT

ಕೋವಿಡ್ ಲಸಿಕೆಯಲ್ಲಿ ಅಂಗವಿಕಲರಿಗೆ ಆದ್ಯತೆ ನೀಡಲು ಮನವಿ: ಹೈಕೋರ್ಟ್‌ಗೆ ಪಿಐಎಲ್‌

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 20:38 IST
Last Updated 23 ಏಪ್ರಿಲ್ 2021, 20:38 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಮೇ 1ರಿಂದ ಮೂರನೇ ಹಂತದ ಕೋವಿಡ್ ಲಸಿಕೆ ನೀಡುವಾಗ ಅಂಗವಿಕಲರಿಗೆ ಆದ್ಯತೆ ನೀಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಲು ಪೀಠ ಆದೇಶಿಸಿದೆ.

ಕರ್ನಾಟಕ ರಾಜ್ಯ ಅಂಗವಿಕಲ ರಕ್ಷಣಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನುಮುಖ್ಯನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಅಂಗವಿಕಲರ ಹಕ್ಕುಗಳ ಕಾಯ್ದೆ 2016ರ ಸೆಕ್ಷನ್ 8ರ ಪ್ರಕಾರ ತುರ್ತು ಪರಿಸ್ಥಿತಿ, ವಿಕೋಪಗಳ ಸಂದರ್ಭದಲ್ಲಿ ಸಮಾನ ರಕ್ಷಣೆ ಮತ್ತು ಸುರಕ್ಷತೆ ಇರಬೇಕು. ಸೆಕ್ಷನ್ 25ರ ಪ್ರಕಾರ ಉಚಿತ ಆರೋಗ್ಯ ರಕ್ಷಣೆ, ತಡೆಮುಕ್ತ ಪ್ರವೇಶ, ಚಿಕಿತ್ಸೆಗೆ ಆದ್ಯತೆ ನೀಡಬೇಕು’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ADVERTISEMENT

ಅಂಗವಿಕಲರಿಗೆ ಮತ್ತು ಅವರಿಗೆ ಆರೈಕೆ ಮಾಡುವವರಿಗೆ ಕಡ್ಡಾಯವಾಗಿ ಲಸಿಕೆ ನೀಡುವಂತೆ ಸೂಚನೆ ನೀಡಬೇಕು ಎಂದು ಅರ್ಜಿದಾರರು ಕೋರಿದರು.

‘ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಅಂಗವಿಕಲರ ಬಗ್ಗೆ ಮಾಹಿತಿ ಇರುತ್ತದೆ. ವಿಶೇಷ ಶಿಬಿರಗಳನ್ನು ಆಯೋಜಿಸಿ ಮೇಲ್ವಿಚಾರಣೆ ನಡೆಸುವುದು ಸುಲಭ. ಮೂರನೇ ಹಂತದ ಲಸಿಕೆಗೆ ನೋಂದಣಿ ಇದೇ 28ರಿಂದ ಆರಂಭವಾಗಲಿರುವ ಕಾರಣ ತುರ್ತು ನಿರ್ದೇಶನದ ಅಗತ್ಯವಿದೆ’ ಎಂದು ಹೇಳಿದರು.

ಅಂಗವಿಕಲರ ಅಹವಾಲುಗಳಿಗೆ ಸ್ಪಂದಿಸುವಂತೆ ನಿರ್ದೇಶನ ನೀಡಿದ ಪೀಠ, ವಿಚಾರಣೆಯನ್ನು ಏ.26ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.