ADVERTISEMENT

ಭ್ರಷ್ಟಾಚಾರ ಆರೋಪ: ಬಿಎಸ್‌ವೈ, ವಿಜಯೇಂದ್ರ, ಸೋಮಶೇಖರ್‌ಗೆ ಹೈಕೋರ್ಟ್‌ ನೋಟಿಸ್‌

ಪಿಟಿಐ
Published 3 ಆಗಸ್ಟ್ 2021, 14:12 IST
Last Updated 3 ಆಗಸ್ಟ್ 2021, 14:12 IST
ಬಿ.ಎಸ್‌. ಯಡಿಯೂರಪ್ಪ ಅವರ ಸಾಂದರ್ಭಿಕ ಚರ್ಚೆ
ಬಿ.ಎಸ್‌. ಯಡಿಯೂರಪ್ಪ ಅವರ ಸಾಂದರ್ಭಿಕ ಚರ್ಚೆ   

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳ ಬಳಿಕ ಹೈಕೋರ್ಟ್‌ ಬಿ.ಎಸ್‌. ಯಡಿಯೂರಪ್ಪ, ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಸೇರಿದಂತೆ ಕುಟುಂಬದ ಕೆಲವು ಸದಸ್ಯರಿಗೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ನೋಟಿಸ್‌ ಜಾರಿ ಮಾಡಿದೆ.

ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಮಾಜಿ ಸಚಿವ ಎಸ್‌.ಟಿ. ಸೋಮಶೇಖರ್‌ ಮತ್ತು ಐಎಎಸ್‌ ಅಧಿಕಾರಿಯೊಬ್ಬರಿಗೂ ನೋಟಿಸ್‌ ಹೋಗಿದೆ.

ಪ್ರಸಕ್ತ ವರ್ಷ ಜುಲೈ 8ರಂದು ವಿಶೇಷ ನ್ಯಾಯಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಂ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಏಕ ಸದಸ್ಯ ಪೀಠದ ನ್ಯಾ. ಎಸ್‌ ಸುನೀಲ್‌ ದತ್‌ ಯಾದವ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ADVERTISEMENT

ಅಂದಿನ ಸಿಎಂ ಯಡಿಯೂರಪ್ಪ ಮತ್ತು ಸಚಿವರಾಗಿದ್ದ ಸೋಮಶೇಖರ್‌ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆಯಲ್ಲಿ ಗುತ್ತಿಗೆದಾರರಿಂದ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿಶೇಷ ನ್ಯಾಯಲಯ ರದ್ದುಪಡಿಸಿತ್ತು.

ವಿಧಾನಸಭೆಯಲ್ಲಿ ಈ ವಿಚಾರವಾಗಿ ಗಂಭೀರ ಚರ್ಚೆ ನಡೆದಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು ಮತ್ತು ಇದು ಗಂಭೀರ ಆರೋಪವೆಂದು ಒತ್ತಿ ಹೇಳಿದ್ದರು. ಯಡಿಯೂರಪ್ಪ ಮತ್ತು ಅವರ ಮಗ ಆರೋಪಗಳನ್ನು ತಳ್ಳಿ ಹಾಕಿದ್ದರು. ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.