ಹೈಕೋರ್ಟ್
ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್ಸಿ–ಎಸ್ಟಿ) ಮೇಲಿನ ದೌರ್ಜನ್ಯ ತಡೆ ವಿಶೇಷ ಕಾಯ್ದೆಯ ದುರುಪಯೋಗ ಆಗಬಾರದು‘ ಎಂದು ಪುನರುಚ್ಚರಿಸಿರುವ ಹೈಕೋರ್ಟ್, ಈ ಕಾಯ್ದೆಯಡಿ ಖಾಸಗಿ ಬ್ಯಾಂಕ್ ಮ್ಯಾನೇಜರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಗಿರಿನಗರದ ಕೆ.ಎಸ್.ವಿಶ್ವಕಿರಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರು ಜಾತಿಯ ಹೆಸರಿನಲ್ಲಿ ನಿಂದಿಸಿದ್ದಾರೆ ಎಂದು ಹೇಳಲು ಈ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯವಿಲ್ಲ. ಫಿರ್ಯಾದುದಾರರ ಆರೋಪದಲ್ಲೂ ಅದು ಸ್ಪಷ್ಟವಾಗಿಲ್ಲ’ ಎಂಬ ಅಭಿಪ್ರಾಯದೊಂದಿಗೆ ದೂರು ವಜಾಗೊಳಿಸಿ ಆದೇಶಿಸಿದೆ.
’ಆರೋಪಿಯು, ಅಂಜಿನಮ್ಮ ಅವರ ಜಾತಿ ಹೆಸರು ಹಿಡಿದು ತುಚ್ಛ ಶಬ್ದಗಳ ಮೂಲಕ ನಿಂದಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಆದರೆ, ಬೈಸಿಕೊಂಡಿರುವ ಅಂಜಿನಮ್ಮ ದೂರು ನೀಡಿಲ್ಲ. ದೂರು ನೀಡಿರುವುದು ರಾಮಯ್ಯ ಎಂಬುವರು. ರಾಮಯ್ಯಗೋ ಘಟನೆಯ ಬಗ್ಗೆ ಸ್ಪಷ್ಟತೆಯೇ ಇಲ್ಲ. ಹೀಗಿರುವಾಗ, ಈ ಪ್ರಕರಣದಲ್ಲಿ ತನಿಖೆ ನಡೆದರೆ ಏನೂ ಪ್ರಯೋಜನವಾಗುವುದಿಲ್ಲ. ಒಂದುವೇಳೆ ಪ್ರಕರಣವನ್ನು ಮುಂದುವರಿಸಿದರೆ ಕಾನೂನಿನ ದುರ್ಬಳಕೆ ಆಗಲಿದೆ. ಹಾಗಾಗಿ, ಕ್ರಿಮಿನಲ್ ಪ್ರಕ್ರಿಯೆ ರದ್ದುಗೊಳಿಸಲಾಗುತ್ತದೆ’ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.