ADVERTISEMENT

ಹಿಜಾಬ್– ಶಾಲು ವಿವಾದ: ಸರ್ಕಾರದ ನಡೆ ಸರಿಯೇ? ರಾಜಕೀಯ ನಾಯಕರು ಹೇಳಿದ್ದು ಹೀಗೆ...

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 6:09 IST
Last Updated 9 ಫೆಬ್ರುವರಿ 2022, 6:09 IST
ಕಿಮ್ಮನೆ ರತ್ನಾಕರ, ಬಸವರಾಜ ಹೊರಟ್ಟಿ, ಎಸ್‌.ಸುರೇಶ್‌ ಕುಮಾರ್‌
ಕಿಮ್ಮನೆ ರತ್ನಾಕರ, ಬಸವರಾಜ ಹೊರಟ್ಟಿ, ಎಸ್‌.ಸುರೇಶ್‌ ಕುಮಾರ್‌   

ಹಿಜಾಬ್–ಶಾಲು ವಿವಾದ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಈ ಪೈಪೋಟಿ ಮಂಗಳವಾರ ಸಂಘರ್ಷದತ್ತ ತಿರುಗಿದ ಬೆನ್ನಲ್ಲೇ, ಮೂರು ದಿನ‍ಪ್ರೌಢಶಾಲೆ–ಕಾಲೇಜುಗಳಿಗೆ ರಜೆ ನೀಡಲಾಗಿದೆ. ಈ ಪ್ರಕರಣವನ್ನು ನಿಭಾಯಿಸಿದ ಕ್ರಮ ಸರಿಯಿದೆಯೇ? ರಜೆ ಕೊಡುವ ಬದಲು ಬೇರೆ ಮಾರ್ಗ ಇರಲಿಲ್ಲವೇ ಎಂಬ ಪ್ರಶ್ನೆಗೆ ಹಿಂದೆ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದವರ ಅಭಿಪ್ರಾಯ ಇಲ್ಲಿದೆ.

‘ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ’
ಈ ವಿವಾದ ರಾಜ್ಯವ್ಯಾಪಿ ವಿಸ್ತರಿಸಲು ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ, ಆರಂಭದಲ್ಲಿಯೇ ಮುಖ್ಯಮಂತ್ರಿ, ಗೃಹ ಸಚಿವರು, ಶಿಕ್ಷಣ ಸಚಿವರು, ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಅಡ್ವೊಕೇಟ್‌ ಜನರಲ್‌ ಜೊತೆ ಸಮಾಲೋಚಿಸಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕಿತ್ತು. ಆ ಕೆಲಸ ಮಾಡುವ ಬದಲು ವಿದ್ಯಾರ್ಥಿಗಳು, ಪೋಷಕರು ಬೀದಿಗಿಳಿಯಲು ಬಿಟ್ಟು, ರಾಜಕೀಯ ಲಾಭ ಪಡೆಯಲು ಯತ್ನಿಸಿದರು. ಸದ್ಯ ಇರುವ ವ್ಯವಸ್ಥೆಯಲ್ಲೇ ಮುಂದುವರಿಸಿ, ಈ ವಿಚಾರದಲ್ಲಿ ನ್ಯಾಯಾಲಯದ ಆದೇಶಕ್ಕೆ ಬದ್ಧ ಎಂದು ಆರಂಭದಲ್ಲಿಯೇ ಸರ್ಕಾರ ಸ್ಪಷ್ಟಪಡಿಸಬೇಕಿತ್ತು. ಆ ಮೂಲಕ, ಯಾರೂ ಕೂಡಾ ಸಂಘರ್ಷಕ್ಕೆ ಇಳಿಯದಂತೆ ತಡೆಯಬೇಕಿತ್ತು. ಆದರೆ, ಈ ಸರ್ಕಾರಕ್ಕೆ ನೆಲದ ಕಾನೂನು ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಚುನಾವಣೆ ಹತ್ತಿರ ಬಂದಾಗ ಧರ್ಮ, ಜಾತಿ ವಿಷಯದಲ್ಲಿ ರಾಜಕೀಯ ಮಾಡುವುದು ಬಿಜೆಪಿಯವರ ಪರಿಪಾಠ. ಈ ಹಿಂದಿನ ಚುನಾವಣೆಯಲ್ಲಿ ಕೋಮು ಸಂಘರ್ಷದ ಮೂಲಕ ಬಿಜೆಪಿಯವರು ಅಧಿಕಾರದ ಕನಸು ಕಂಡಿದ್ದರೆ, ಮುಂದಿನ ಚುನಾವಣೆಗೆ ಇಂಥ ವಿಷಯವನ್ನು ರಕ್ಷಾ ಕವಚ ಮಾಡಲು ಹೊರಟಿದ್ದಾರೆ.
-ಕಿಮ್ಮನೆ ರತ್ನಾಕರ, ಮಾಜಿ ಶಿಕ್ಷಣ ಸಚಿವ

*

‘ಪರಿಸ್ಥಿತಿ ತಿಳಿಗೊಳಿಸದಿದ್ದರೆ ಅಪಾಯ’
ಶಾಲೆ, ಕಾಲೇಜುಗಳ ಮಕ್ಕಳನ್ನು ಚಿಲ್ಲರೆ ರಾಜಕಾರಣಕ್ಕೆ ಬಳಸಿಕೊಳ್ಳುವ ಮೂರ್ಖತನವನ್ನು ಎಲ್ಲರೂ ತಕ್ಷಣ ನಿಲ್ಲಿಸಬೇಕು. ರಾಜ್ಯ ಸರ್ಕಾರ, ರಾಜಕೀಯ ಪಕ್ಷಗಳು ಮತ್ತು ಮಕ್ಕಳ ಪೋಷಕರು ಸ್ವಾರ್ಥ ಬದಿಗಿಟ್ಟು ಜವಾಬ್ದಾರಿಯಿಂದ ವರ್ತಿಸಬೇಕು. ರಾಜಕಾರಣ ವಿಧಾನಸೌಧ ಮತ್ತು ಚುನಾವಣೆಗೆ ಸೀಮಿತವಾಗಿರಬೇಕು.

ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರದ ಹೆಸರಿನಲ್ಲಿ ಮಕ್ಕಳನ್ನು ಇಬ್ಭಾಗ ಮಾಡಿ, ಪ್ರವೇಶ ದ್ವಾರದ ಬಳಿ ನಿಲ್ಲಿಸುವುದು ಸಲ್ಲದು. ಕಾಲೇಜಿನ ಪ್ರವೇಶ ದ್ವಾರದ ಬಳಿ ನಿಂತು ‘ಅಲ್ಲಾ ಹು ಅಕ್ಬರ್‌...’, ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗುವ ಮಟ್ಟಕ್ಕೆ ಮಕ್ಕಳನ್ನು ಇಳಿಸಿರುವುದು ಖಂಡನೀಯ. ಈ ಬಗೆಯ ಒಡಕಿನ ಭಾವನೆ ಬೆಳೆದರೆ ಮುಂದೆ ಶಾಲೆ, ಕಾಲೇಜುಗಳಲ್ಲೇ ಕೊಲೆಗಳು ಆಗುವ ಅಪಾಯವಿದೆ. ಯಾರೊಬ್ಬರೂ ಈ ವಿಚಾರದಲ್ಲಿ ಪ್ರತಿಷ್ಠೆ ಪ್ರದರ್ಶಿಸಬಾರದು. ಮಕ್ಕಳ ಮನಸ್ಸಿನಲ್ಲಿ ಸೌಹಾರ್ದ ಭಾವನೆ ಮೂಡಿಸುವ ಕೆಲಸವನ್ನು ತಕ್ಷಣ ಮಾಡುವಂತೆ ನಾನು ಎಲ್ಲರಲ್ಲೂ ಮನವಿ ಮಾಡುವೆ. ಮಕ್ಕಳ ಮನಸ್ಸನ್ನು ಹಾಳು ಮಾಡುವ ಕೆಲಸಕ್ಕೆ ಎಲ್ಲರೂ ಪೂರ್ಣವಿರಾಮ ಹಾಕಬೇಕು.
-ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸಭಾಪತಿ, ಮಾಜಿ ಶಿಕ್ಷಣ ಸಚಿವ

*

‘ತಕ್ಷಣದ ಕ್ರಮ ಅನಿವಾರ್ಯವಾಗಿತ್ತು’
ಶಾಲೆ, ಕಾಲೇಜುಗಳಿಗೆ ರಜೆ ನೀಡಿರುವ ನಿರ್ಧಾರವನ್ನು ಸರಿ, ತಪ್ಪು ಎಂದು ವಿಶ್ಲೇಷಿಸಲು ಆಗದು. ರಜೆ ಘೋಷಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕೂಡ ಆಗ್ರಹಿಸಿದ್ದರು. ಸರ್ಕಾರವೂ ಅದೇ ನಿರ್ಧಾರ ಕೈಗೊಂಡಿದೆ.

ತರಗತಿಗಳಲ್ಲಿ ವಸ್ತ್ರ ಧಾರಣೆಗೆ ಸಂಬಂಧಿಸಿದ ಬಿಕ್ಕಟ್ಟು ಪ್ರತಿ ದಿನವೂ ವ್ಯಾಪಿಸುತ್ತಲೇ ಇದೆ. ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳನ್ನು ತಲುಪಿದೆ. ಕೋವಿಡ್ ಸರಪಳಿ ತುಂಡರಿಸಲು ಲಾಕ್‌ಡೌನ್‌ ಜಾರಿಗೊಳಿಸಿದಂತೆ ತಕ್ಷಣದ ಕ್ರಮ ಅನಿವಾರ್ಯ ಆಗಿತ್ತು. ಆ ದಿಸೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿರುವುದು ಸರಿಯಾದ ಕ್ರಮ.

ಈ ಅವಧಿಯಲ್ಲಿ ಎಲ್ಲ ಕಡೆಯ ಪ್ರಮುಖರು ಕುಳಿತು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ನಡೆಸಲು ಅವಕಾಶ ದೊರಕಿದೆ. ಶಾಶ್ವತವಾಗಿ ಈ ಸಮಸ್ಯೆಯನ್ನು ಪರಿಹರಿಸಲು ಈ ತಾತ್ಕಾಲಿಕ ಕ್ರಮದಿಂದ ಅನುಕೂಲ ಆಗಲಿದೆ.
– ಎಸ್‌. ಸುರೇಶ್‌ ಕುಮಾರ್‌, ಮಾಜಿ ಶಿಕ್ಷಣ ಸಚಿವ ಹಾಗೂ ಹಾಲಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.