ADVERTISEMENT

ಹಿಜಾಬ್ ತೀರ್ಪು ಕೊಟ್ಟ ನ್ಯಾಯಮೂರ್ತಿಗಳಿಗೆ ಬೆದರಿಕೆ: ತಮಿಳುನಾಡಲ್ಲಿ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 12:18 IST
Last Updated 21 ಮಾರ್ಚ್ 2022, 12:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಿಜಾಬ್ ವಿಚಾರವಾಗಿ ತೀರ್ಪು ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪದಡಿ ಇಬ್ಬರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ತೌಹೀದ್ ಜಮಾತ್ (ಟಿ.ಎಂ.ಟಿ.ಜೆ)’ ಮುಸ್ಲಿಂ ಸಂಘಟನೆಯ ಮುಖಂಡ ಆರ್. ರಹಮತ್‌–ಉಲ್ಲಾ ಹಾಗೂ ಎಸ್‌. ಜಮಾಲ್ ಮುಹಮ್ಮದ್ ಉಸ್ಮಾನಿ (44) ಬಂಧಿತರು.

ಮಾರ್ಚ್ 17ರಂದು ಮಧುರೈನಲ್ಲಿ ನಡೆದ ಸಮಾವೇಶದಲ್ಲಿ ಭಾಷಣ ಮಾಡಿದ್ದ ಆರೋಪಿಗಳು, ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ತಮಿಳುನಾಡು ಹಾಗೂ ಕರ್ನಾಟಕ ಎರಡೂ ರಾಜ್ಯಗಳ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

‘ಆರೋಪಿಗಳ ಭಾಷಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರದಾಡಿತ್ತು. ಇದನ್ನು ನೋಡಿದ್ದ ವಕೀಲರೊಬ್ಬರು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಕೃತ್ಯ ನಡೆದಿದ್ದು ತಮಿಳುನಾಡು ಆಗಿದ್ದರಿಂದ, ಅಲ್ಲಿಯ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ತಮಿಳುನಾಡು ಪೊಲೀಸರು, ತಿರುನೆಲ್ವೇಲಿ ಬಳಿ ರಹಮತ್‌–ಉಲ್ಲಾ ಹಾಗೂ ತಂಜಾವೂರಿನಲ್ಲಿ ಜಮಾನ್ ಮುಹಮ್ಮದ್ ಅವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಬಂಧಿತ ಇಬ್ಬರೂ ಆರೋಪಿಗಳನ್ನು ತಮಿಳುನಾಡು ಪೊಲೀಸರು, ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತೌಹೀದ್ ಜಮಾತ್ (ಟಿ.ಎಂ.ಟಿ.ಜೆ) ಸಂಘಟನೆಯ ಜಿಲ್ಲಾ ಘಟಕದ ಮುಖಂಡ ರಾಜಿಕ್ ಮುಹಮ್ಮದ್ ಎಂಬುವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಸದ್ಯ ಅವರು ತಲೆಮರೆಸಿಕೊಂಡಿರುವುದು ಗೊತ್ತಾಗಿದೆ' ಎಂದೂ ತಿಳಿಸಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.