ಬೆಂಗಳೂರು: ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿದೆ. ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಇದು ನಮ್ಮ ಮಕ್ಕಳ ಭವಿಷ್ಯ ಹಾಗೂ ಶಿಕ್ಷಣದ ಪ್ರಶ್ನೆ. ಮಕ್ಕಳಿಗೆ ವಿದ್ಯೆಗಿಂತ ಮುಖ್ಯವಾದದ್ದು ಬೇರೊಂದಿಲ್ಲ. ಹೀಗಾಗಿ ಹೈಕೋರ್ಟ್ ತ್ರಿಸದಸ್ಯ ಪೀಠ ನೀಡಿರುವ ತೀರ್ಪನ್ನು ಪಾಲಿಸಬೇಕು. ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಬೇಕು’ ಎಂದು ತಿಳಿಸಿದರು.
ಎಲ್ಲ ಸಮುದಾಯದ ನಾಯಕರು, ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೀರ್ಪನ್ನು ಒಪ್ಪಿಕೊಂಡು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ, ತೀರ್ಪಿನ ಅನ್ವಯ ಶಿಕ್ಷಣ ನೀಡಲು ಸಹಕರಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆಗಳಿಂದ ಹೊರಗುಳಿಯದೇ, ತರಗತಿಗಳಿಗೆ ಹಾಜರಾಗಬೇಕು. ನಿಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಲು ನಾವು ನೀವೆಲ್ಲರೂ ಸೇರಿ ಚಿಂತಿಸಬೇಕು. ತೀರ್ಪಿನಿಂದ ಪ್ರಕರಣ ಇತ್ಯರ್ಥವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಾನೂನನ್ನು ಕೈಗೆತ್ತಿಕೊಂಡರೆ ಗೃಹ ಇಲಾಖೆ ಕಠಿಣ ಕ್ರಮ ಜರುಗಿಸಲಿದೆ ಎಂದು ಬೊಮ್ಮಾಯಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.