ADVERTISEMENT

ಎಲ್ಐಸಿ| ಕರ್ನಾಟಕ ಕಚೇರಿಗಳಲ್ಲಿನ ನೇಮಕಾತಿಗೂ ಹಿಂದಿ,ಇಂಗ್ಲಿಷ್‌ನಲ್ಲಷ್ಟೇ ಪರೀಕ್ಷೆ

ಕನ್ನಡಕ್ಕೆ ಕುತ್ತು?

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 12:22 IST
Last Updated 18 ಸೆಪ್ಟೆಂಬರ್ 2019, 12:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬ್ಯಾಂಕಿಂಗ್‌ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸದ ವಿರುದ್ಧ ಕೂಗು ಎದ್ದಿರುವ ಬೆನ್ನಲ್ಲೇ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಕರ್ನಾಟಕದ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲೂ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ನಿಗಮದ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಎಲ್‌ಐಸಿ ಮಂಗಳವಾರ ಅರ್ಜಿ ಆಹ್ವಾನಿಸಿದೆ (licindia.in). ಈ ಪರೀಕ್ಷೆಗಳನ್ನು ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಬರೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ವಿಭಾಗೀಯ ಕಚೇರಿಗಳಲ್ಲಿ ಖಾಲಿ ಇರುವ 355 ಹುದ್ದೆಗಳ ಭರ್ತಿಗಾಗಿ ನಡೆಸುವ ಪರೀಕ್ಷೆಗಳನ್ನೂ ಕನ್ನಡದಲ್ಲಿ ಬರೆಯುವುದಕ್ಕೆ ಅವಕಾಶ ನೀಡಿಲ್ಲ. ಈ ಬಗ್ಗೆ ಈ ಹುದ್ದೆಗಳ ಆಕಾಂಕ್ಷಿಗಳಾಗಿರುವ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹುದ್ದೆಗಳಿಗೂ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಳು ನಡೆಯುತ್ತವೆ. ಒಂದು ಗಂಟೆ ಅವಧಿಯ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಭಾಷಾ ವಿಷಯ (30 ಅಂಕ), ಸಾಂಖ್ಯಿಕ ಸಾಮರ್ಥ್ಯ (35 ಅಂಕ) ಹಾಗೂ ತಾರ್ಕಿಕ ಸಾಮರ್ಥ್ಯ (35 ಅಂಕ) ಎಂಬ ಮೂರು ವಿಭಾಗಗಳಿವೆ. ಭಾಷಾ ವಿಷಯಕ್ಕೆ ಇಂಗ್ಲಿಷ್‌ ಅಥವಾ ಹಿಂದಿಯನ್ನು ಮಾತ್ರ ಆಯ್ಕೆ ಮಾಡಬಹುದಾಗಿದೆ.

‘ಭಾಷಾ ವಿಷಯಕ್ಕೆ ಹಿಂದಿ ಅಭ್ಯರ್ಥಿಗಳು ಮಾತೃ ಭಾಷೆಯನ್ನೇ ಆಯ್ಕೆ ಮಾಡಿಕೊಳ್ಳಬಹುದು. ಇತರ ಭಾರತೀಯ ಭಾಷೆಗಳ ಅಭ್ಯರ್ಥಿಗಳು ಭಾಷಾ ವಿಷಯವಾಗಿ ಹಿಂದಿ ಅಥವಾ ಇಂಗ್ಲಿಷ್‌ ಆಯ್ಕೆ ಮಾಡಬೇಕಾಗಿದೆ. ಕನ್ನಡಿಗರು ಕನ್ನಡ ಆಯ್ಕೆ ಮಾಡಿಕೊಳ್ಳಲು ಅವಕಾಶ ಇಲ್ಲ. ಹಿಂದಿ ಭಾಷಿಕರು ಹೆಚ್ಚು ಅಂಕ ಗಳಿಸಲು ಇದರಿಂದ ಅನುಕೂಲವಾಗುತ್ತದೆ’ ಎಂದು ದೂರುತ್ತಾರೆ ಉದ್ಯೋಗಾಕಾಂಕ್ಷಿ, ಚಿಕ್ಕಬಳ್ಳಾಪುರದ ಬಾಬು ರೆಡ್ಡಿ.

‘ಪ್ರಶ್ನೆ ಮಾತೃ ಭಾಷೆಯಲ್ಲಿದ್ದರೆ ಬೇಗ ಗ್ರಹಿಸಬಹುದು. ಕನ್ನಡದ ಅಭ್ಯರ್ಥಿಗಳು ಬೇರೆ ಭಾಷೆಯಲ್ಲಿ ಪ್ರಶ್ನೆ ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ತಗಲುತ್ತದೆ. ಹಾಗಾಗಿ, ನಿಗದಿತ ಅವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯುವುದು ಕಷ್ಟ’ ಎಂದರು.

ಇನ್ನೊಬ್ಬ ಉದ್ಯೋಗಾಕಾಂಕ್ಷಿ ನರೇಶ್‌, ‘ಈ ಹಿಂದೆ ಕೇಂದ್ರ ಸರ್ಕಾರದ ಇಲಾಖೆಗಳ ಸಿ– ಗುಂಪಿನ ಹುದ್ದೆಗಳಿಗೆ ಸಂದರ್ಶನ ಕಡ್ಡಾಯವಾಗಿತ್ತು. ಹಾಗಾಗಿ, ಈ ಉದ್ಯೋಗಗಳು ಸ್ಥಳೀಯರಿಗೆ ಸಿಗುತ್ತಿದ್ದವು. ಈ ಹುದ್ದೆಗಳಿಗೂ ಈಗ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತಿದ್ದು, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಉತ್ತರಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಎಲ್ಲ ಕಡೆಯೂ ಹಿಂದಿಯವರೇ ಹೆಚ್ಚು ಆಯ್ಕೆ ಆಗುತ್ತಿದ್ದು, ಸ್ಥಳೀಯರು ಅವಕಾಶ ವಂಚಿತರಾಗುತ್ತಿದ್ದಾರೆ’ ಎಂದು ದೂರಿದರು.

‘ಇದು ಸಣ್ಣ ವಿಚಾರವಲ್ಲ. ಭವಿಷ್ಯದಲ್ಲಿ ಇದರಿಂದ ಹಿಂದಿಯೇತರ ಭಾಷಿಕರು ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ. ಬ್ಯಾಂಕ್‌ ಕಚೇರಿಗಳಲ್ಲಿ ಕನ್ನಡೇತರ ಸಿಬ್ಬಂದಿ ತುಂಬಿರುವಂತೆ ಕೇಂದ್ರದ ಅಧೀನ ಎಲ್ಲ ಕಚೇರಿಗಳಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹುದ್ದೆಗಳ ವಿಭಾಗ ಕಚೇರಿವಾರು ವಿವರ
ಬೆಂಗಳೂರು (1,2);
40
ಬೆಳಗಾವಿ; 73
ಧಾರವಾಡ; 35
ಮೈಸೂರು; 55
ಶಿವಮೊಗ್ಗ; 51
ಉಡುಪಿ; 28
ರಾಯಚೂರು; 73
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಅಕ್ಟೋಬರ್‌ 01
ಪೂರ್ವಭಾವಿ ಪರೀಕ್ಷೆಯ ದಿನಾಂಕ: ಅಕ್ಟೋಬರ್‌ 21 ಹಾಗೂ 22

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.